ADVERTISEMENT

ಫುಟ್‌ಬಾಲ್ ವಿಶ್ವಕಪ್: ಟ್ಯೂನಿಷಿಯಾ ಮಣಿಸಿದ ಆಸ್ಟ್ರೇಲಿಯಾ

12 ವರ್ಷಗಳ ಬಳಿಕ ವಿಶ್ವಕಪ್ ಟೂರ್ನಿಯಲ್ಲಿ ಜಯ: ಡ್ಯೂಕ್‌ ಗೋಲು

ರಾಯಿಟರ್ಸ್
Published 26 ನವೆಂಬರ್ 2022, 14:18 IST
Last Updated 26 ನವೆಂಬರ್ 2022, 14:18 IST
ಗೋಲು ಗಳಿಸಿದ ಮಿಚೆಲ್‌ ಡ್ಯೂಕ್‌ ಸಂಭ್ರಮ
ಗೋಲು ಗಳಿಸಿದ ಮಿಚೆಲ್‌ ಡ್ಯೂಕ್‌ ಸಂಭ್ರಮ   

ಅಲ್ ವಕ್ರಾ, ಕತಾರ್: ಮಿಚೆಲ್‌ ಡ್ಯೂಕ್‌ ಅವರು ಹೆಡರ್‌ ಮೂಲಕ ಗಳಿಸಿದ ಸೊಗಸಾದ ಗೋಲಿನ ಬಲದಿಂದ ಆಸ್ಟ್ರೇಲಿಯಾ ತಂಡವು ವಿಶ್ವಕಪ್ ಟೂರ್ನಿಯಲ್ಲಿ ಜಯದ ಸಂಭ್ರಮ ಆಚರಿಸಿತು.

ಶನಿವಾರ ಇಲ್ಲಿಯ ಅಲ್‌ ಜನೌಬ್ ಕ್ರೀಡಾಂಗಣದಲ್ಲಿ ನಡೆದ ಡಿ ಗುಂಪಿನ ಹಣಾಹಣಿಯಲ್ಲಿ ಕಾಂಗರೂ ನಾಡಿನ ಬಳಗ 1–0ಯಿಂದ ಟ್ಯೂನಿಷಿಯಾ ತಂಡಕ್ಕೆ ಸೋಲುಣಿಸಿತು. ವಿಶ್ವಕಪ್ ಟೂರ್ನಿಯಲ್ಲಿ ಇದು ಆಸ್ಟ್ರೇಲಿಯಾ ತಂಡಕ್ಕೆ 12 ವರ್ಷಗಳ ಬಳಿಕ ದೊರೆತ ಮೊದಲ ಜಯವಾಗಿದೆ. 2010ರಲ್ಲಿ ಸರ್ಬಿಯಾ ತಂಡವನ್ನು ಮಣಿಸಿದ ಬಳಿಕ ಆ ತಂಡಕ್ಕೆ ಗೆಲುವು ಒಲಿದಿರಲಿಲ್ಲ.

ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾದ ನಾಕೌಟ್‌ ಪ್ರವೇಶಕ್ಕೆ ಬಲ ಲಭಿಸಿತು. ಸದ್ಯ ಮೂರು ಪಾಯಿಂಟ್ಸ್ ಗಳಿಸಿರುವ ತಂಡವು ವಿಶ್ವ ಚಾಂಪಿಯನ್ ಫ್ರಾನ್ಸ್ ತಂಡದೊಂದಿಗೆ (3 ಪಾಯಿಂಟ್ಸ್) ಸಮಬಲ ಸಾಧಿಸಿದೆ.

ADVERTISEMENT

ಪಂದ್ಯದ 23ನೇ ನಿಮಿಷದಲ್ಲಿ ಕ್ರೇಗ್‌ ಗುಡ್‌ವಿನ್‌ ಎಡಭಾಗದಿಂದ ನೀಡಿದ ಕ್ರಾಸ್‌ ಟ್ಯೂನಿಷಿಯಾದ ಡಿಫೆಂಡರ್‌ನನ್ನು ದಾಟಿತು. ಆಗ ಅತ್ಯಂತ ಚುರುಕಿನಿಂದ ಮಿಚೆಲ್‌ ಚೆಂಡನ್ನು ತಲೆಯಿಂದ ಸ್ಪರ್ಶಿಸಿ ಗೋಲುಪೆಟ್ಟಿಗೆಯತ್ತ ಸಾಗಿಸಿದರು. ಗೋಲ್‌ಕೀಪರ್‌ ಆಯಮೆನ್‌ ದಹಮನ್ಸ್‌ ಅವರನ್ನು ವಂಚಿಸಿ ಅತ್ಯಂತ ವೇಗವಾಗಿ ಚೆಂಡು ಗೋಲುಪೆಟ್ಟಿಗೆ ಸೇರಿತು.

ಮೊದಲಾರ್ಧ ಮುಕ್ತಾಯಕ್ಕೆ ಮೊದಲು ಟ್ಯೂನಿಷಿಯಾ ತಂಡಕ್ಕೆ ಗೋಲು ಗಳಿಸುವ ಎರಡು ಅವಕಾಶಗಳಿದ್ದವು. ಮೊಹಮ್ಮದ್‌ ಡ್ರೇಗರ್‌ ಅವರು ಒದ್ದ ಚೆಂಡನ್ನು ಆಸ್ಟ್ರೇಲಿಯಾದ ಹ್ಯಾರಿ ಶೌಟರ್ ಬ್ಲಾಕ್ ಮಾಡಿದರು. ಎರಡನೇ ಪ್ರಯತ್ನದಲ್ಲಿ ನಾಯಕ ಯೂಸುಫ್‌ ಸಾಕ್ನಿ ನಡೆಸಿದ ಪ್ರಯತ್ನದಲ್ಲಿ ಚೆಂಡು ಗೋಲ್‌ಪೋಸ್ಟ್‌ನಿಂದ ದೂರ ಹೋಯಿತು.

68ನೇ ನಿಮಿಷದಲ್ಲಿ ಟ್ಯೂನಿಷಿಯಾ ತನ್ನ ಪ್ರಮುಖ ಆಟಗಾರ ವಹಾಬಿ ಖಜ್ರಿ ಅವರನ್ನು ಬದಲಿ ಆಟಗಾರನಾಗಿ ಕರೆತಂದರೂ ಆಸ್ಟ್ರೇಲಿಯಾದ ಡಿಫೆನ್ಸ್ ವಿಭಾಗವನ್ನು ಭೇದಿಸಲು ಆಗಲಿಲ್ಲ.

ಟ್ಯೂನಿಷಿಯಾದ ಮೂವರು ಆಟಗಾರರು ಈ ಪಂದ್ಯದಲ್ಲಿ ಹಳದಿ ಕಾರ್ಡ್‌ ದರ್ಶನ ಮಾಡಿದರು.

ಇದೇ ಕ್ರೀಡಾಂಗಣದಲ್ಲಿ ತನ್ನ ಮೊದಲ ಪಂದ್ಯ ಆಡಿದ್ದ ಆಸ್ಟ್ರೇಲಿಯಾ ತಂಡವು 1–4ರಿಂದ ಫ್ರಾನ್ಸ್ ತಂಡಕ್ಕೆ ಮಣಿದಿತ್ತು.

ಟ್ಯೂನಿಷಿಯಾ ತಂಡವು ಮುಂದಿನ ಪಂದ್ಯದಲ್ಲಿ ಫ್ರಾನ್ಸ್ ಎದುರು ಆಡಲಿದೆ. ಆಸ್ಟ್ರೇಲಿಯಾ ತಂಡಕ್ಕೆ ಬುಧವಾರ ಡೆನ್ಮಾರ್ಕ್ ಸವಾಲು ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.