ADVERTISEMENT

ಕೋಲ್ಕತ್ತದಲ್ಲಿ ‘ಮಹಿಳಾ ಡರ್ಬಿ’ ಬರಲಿ: ಬಾಲಾದೇವಿ

ಪಿಟಿಐ
Published 25 ನವೆಂಬರ್ 2020, 14:34 IST
Last Updated 25 ನವೆಂಬರ್ 2020, 14:34 IST
ಸ್ಕಾಟಿಷ್ ಮಹಿಳಾ ಲೀಗ್‌ನಲ್ಲಿ ರೇಂಜರ್ಸ್ ತಂಡದ ಪರ ಆಡಿದ ಬಾಲಾ ದೇವಿ –ಐಎಸ್‌ಎಲ್ ಮೀಡಿಯಾ ಚಿತ್ರ
ಸ್ಕಾಟಿಷ್ ಮಹಿಳಾ ಲೀಗ್‌ನಲ್ಲಿ ರೇಂಜರ್ಸ್ ತಂಡದ ಪರ ಆಡಿದ ಬಾಲಾ ದೇವಿ –ಐಎಸ್‌ಎಲ್ ಮೀಡಿಯಾ ಚಿತ್ರ   

ಪಣಜಿ: ಭಾರತದ ಪ್ರಮುಖ ಫುಟ್‌ಬಾಲ್ ಕ್ಲಬ್‌ಗಳಾದ ಕೋಲ್ಕತ್ತದ ಎಟಿಕೆ ಮೋಹನ್ ಬಾಗನ್ ಮತ್ತು ಈಸ್ಟ್ ಬೆಂಗಾಲ್ ತಂಡಗಳು ಮಹಿಳಾ ವಿಭಾಗಗಳನ್ನು ಹೊಂದಿಲ್ಲದೇ ಇರುವುದು ಬೇಸರದ ವಿಷಯ ಎಂದು ಭಾರತ ಮಹಿಳಾ ತಂಡದ ನಾಯಕಿ ಬಾಲಾದೇವಿ ಹೇಳಿದ್ದಾರೆ.

ಮೋಹನ್ ಬಾಗನ್ ಮತ್ತು ಈಸ್ಟ್ ಬೆಂಗಾಲ್ ತಂಡಗಳು ಶುಕ್ರವಾರ ಐಎಸ್‌ಎಲ್‌ನಲ್ಲಿ ಮೊದಲ ಬಾರಿ ಮುಖಾಮುಖಿಯಾಗಲಿವೆ. ಈಸ್ಟ್ ಬೆಂಗಾಲ್ ತಂಡ ಇದೇ ಮೊದಲ ಬಾರಿ ಐಎಸ್‌ನಲ್ಲಿ ಆಡಲು ಅವಕಾಶ ಪಡೆದುಕೊಂಡಿದೆ. ಮೋಹನ್ ಬಾಗನ್ ತಂಡ ಎಟಿಕೆಯೊಂದಿಗೆ ವಿಲೀನವಾಗಿದೆ. ಈ ತಂಡಗಳ ಮುಖಾಮುಖಿಯನ್ನು 'ಕೋಲ್ಕತ್ತ ಡರ್ಬಿ’ ಎಂದೇ ಪರಿಗಣಿಸಲಾಗಿದೆ. ಮಹಿಳಾ ವಿಭಾಗಗಳನ್ನೂ ಬೆಳೆಸಿದ್ದರೆ ಕೋಲ್ಕತ್ತ ಫುಟ್‌ಬಾಲ್‌, ಮಹಿಳಾ ಡರ್ಬಿಗೂ ಸಾಕ್ಷಿಯಾಗುತ್ತಿತ್ತು ಎಂದು ಬಾಲಾ ದೇವಿ ಅಭಿಪ್ರಾಯಪಟ್ಟಿದ್ದಾರೆ.

’ಎಟಿಕೆ ಮೋಹನ್ ಬಾಗನ್ ಮತ್ತು ಈಸ್ಟ್ ಬೆಂಗಾಲ್ ಕ್ಲಬ್‌ಗಳಿಗೆ ಮಹಿಳಾ ತಂಡಗಳನ್ನು ಹೊಂದುವುದು ಕಷ್ಟಕರವೇನಲ್ಲ. 2002ರಲ್ಲಿ ನಾನು ಜೂನಿಯರ್ ತಂಡದಲ್ಲಿದ್ದಾಗ ಬಂಗಾಳದ ತಂಡಗಳ ವಿರುದ್ಧ ಆಡುತ್ತಿದ್ದೆ. ಅಲ್ಲಿನ ಹುಡುಗಿಯರು ಅಪೂರ್ವ ಸಾಮರ್ಥ್ಯವನ್ನು ತೋರುತ್ತಿದ್ದರು. ಅಲ್ಲಿ ಸಾಕಷ್ಟು ಪ್ರತಿಭೆಗಳು ಇದ್ದಾರೆ ಎಂಬುದು ಇದರಿಂದ ಖಾತರಿಯಾಗಿತ್ತು’ ಎಂದು 30 ವರ್ಷದ ಬಾಲಾ ದೇವಿ ಹೇಳಿದರು.

ADVERTISEMENT

ವಿಶ್ವದ ಅತ್ಯಂತ ಹಳೆಯ ಸಾಂಪ್ರದಾಯಿಕ ಎದುರಾಳಿಗಳ ಮುಖಾಮುಖಿಯಾದ ‘ಓಲ್ಡ್ ಫರ್ಮ್ ಡರ್ಬಿ’ಯಲ್ಲಿ ಈ ಬಾರಿ ಬಾಲಾದೇವಿ ಆಡಿದ್ದರು. ಸ್ಕಾಟಿಷ್ ಮಹಿಳಾ ಲೀಗ್‌ನಲ್ಲಿ ಈ ಡರ್ಬಿ ನಡೆಯುತ್ತದೆ. ರೇಂಜರ್ಸ್ ಎಫ್‌ಸಿ ಮತ್ತು ಸೆಲ್ಟಿಕ್ ಎಫ್‌ಸಿ ತಂಡಗಳು ಅಲ್ಲಿ ಸೆಣಸಾಡಿದ್ದವು. ರೇಂಜರ್ಸ್ ಪರವಾಗಿ ಬಾಲಾ ಕಣಕ್ಕೆ ಇಳಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.