ಬೆಂಗಳೂರು: ತವರಿನಲ್ಲಿ ಅಜೇಯ ಓಟವನ್ನು ಮುಂದುವರಿಸುವ ಛಲದಲ್ಲಿರುವ ಬೆಂಗಳೂರು ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್‌ನ (ಐಎಸ್‌ಎಲ್) ಪಂದ್ಯದಲ್ಲಿ ಶನಿವಾರ ಮೊಹಮ್ಮಡನ್ ಸ್ಪೋರ್ಟಿಂಗ್ ಕ್ಲಬ್ ತಂಡವನ್ನು ಎದುರಿಸಲಿದೆ.
ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಸುನಿಲ್ ಚೆಟ್ರಿ ಬಳಗವು ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಹಣಾಹಣಿಯಲ್ಲಿ ಪಾರಮ್ಯ ಮೆರೆದು, ಪ್ಲೇ ಆಫ್ ಸ್ಥಾನವನ್ನು ಭದ್ರಪಡಿಸಲು ಎದುರು ನೋಡುತ್ತಿದೆ. ತವರಿನಲ್ಲಿ ಆಡಿರುವ ಏಳು ಪಂದ್ಯಗಳ ಪೈಕಿ ಐದರಲ್ಲಿ ಗೆದ್ದಿದ್ದರೆ, ಉಳಿದ ಎರಡರಲ್ಲಿ ಡ್ರಾ ಸಾಧಿಸಿದೆ.
ಪ್ರಸ್ತುತ ಆವೃತ್ತಿಯ ಆರಂಭದಲ್ಲಿ 2–1 ಗೋಲುಗಳಿಂದ ಮೊಹಮ್ಮಡನ್ ತಂಡವನ್ನು ಮಣಿಸಿದ್ದ ಬಿಎಫ್‌ಸಿ ತಂಡ, 2018-19ರ ಋತುವಿನ ನಂತರ ಮೊದಲ ಬಾರಿ ಕೋಲ್ಕತ್ತ ಕ್ಲಬ್ ವಿರುದ್ಧ ಎರಡನೇ ಜಯವನ್ನು ದಾಖಲಿಸುವ ಅವಕಾಶವನ್ನು ತಂಡದ ಮುಂದಿದೆ.
ಮತ್ತೊಂದೆಡೆ ಮೊಹಮ್ಮಡನ್ ತಂಡವು ಸತತ ಐದು ಪಂದ್ಯಗಳ ಗೋಲುರಹಿತ ಸರಪಣಿಯನ್ನು ಕಳಚಿಕೊಳ್ಳುವ ಪ್ರಯತ್ನ ನಡೆಸಲಿದೆ. ಐಎಸ್‌ಎಲ್‌ನ ಇತಿಹಾಸದಲ್ಲಿ ಇದು ಜಂಟಿ ಮೂರನೇ ಅತಿ ಉದ್ದದ ಗೋಲುರಹಿತ ಸರಪಣಿಯಾಗಿದೆ.
ಆಡಿರುವ 14 ಪಂದ್ಯಗಳಿಂದ (8 ಗೆಲುವು, 3 ಡ್ರಾ, 3 ಸೋಲು) 27 ಅಂಕ ಗಳಿಸಿರುವ ಚೆಟ್ರಿ ಬಳಗವು ಪಾಯಿಂಟ್ ಪಟ್ಟಿಯಲ್ಲಿ ಮೋಹನ್ ಬಾಗನ್ ಸೂಪರ್ ಜೈಂಟ್ಸ್ ತಂಡದ (32) ನಂತರದ ಸ್ಥಾನದಲ್ಲಿದೆ.
ಮೊಹಮ್ಮಡನ್ ತಂಡವೂ ಅಷ್ಟೇ ಪಂದ್ಯಗಳನ್ನು ಆಡಿದ್ದು ಕೇವಲ 1 ಪಂದ್ಯ ಗೆದ್ದಿದೆ. ನಾಲ್ಕರಲ್ಲಿ ಡ್ರಾ ಸಾಧಿಸಿದ್ದರೆ, ಉಳಿದ ಒಂಬತ್ತು ಪಂದ್ಯಗಳನ್ನು ಸೋತು ಏಳು ಅಂಕಗಳೊಂದಿಗೆ ಕೊನೆಯ ಮತ್ತು 13ನೇ ಸ್ಥಾನದಲ್ಲಿದೆ.
ಬೆಂಗಳೂರು ತಂಡವು ಕೊನೆಯ ಐದು ಪಂದ್ಯಗಳ ಪೈಕಿ ತಲಾ ಎರಡರಲ್ಲಿ ಗೆಲುವು ಮತ್ತು ಸೋಲು ಕಂಡು, ಒಂದರಲ್ಲಿ ಡ್ರಾ ಸಾಧಿಸಿದೆ. ಹಿಂದಿನ ಪಂದ್ಯದಲ್ಲಿ ಜೆಮ್‌ಷೆಡ್‌ಪುರ ಎಫ್‌ಸಿ ವಿರುದ್ಧ ಆರಂಭಿಕ ಮೇಲುಗೈ ಸಾಧಿಸಿದ್ದ ಚೆಟ್ರಿ ಬಳಗ, ಕೊನೆಯ ಹಂತದಲ್ಲಿ 1–2ರಿಂದ ಮುಗ್ಗರಿಸಿತ್ತು.
ದಿನದ ಮತ್ತೊಂದು ಪಂದ್ಯದಲ್ಲಿ ಮೋಹನ್ ಬಾಗನ್ ತಂಡವು ತನ್ನ ಸಾಂಪ್ರದಾಯಿಕ ಎದುರಾಳಿ ಈಸ್ಟ್ ಬೆಂಗಾಲ್ ತಂಡವನ್ನು ಎದುರಿಸಲಿದೆ. ಕೋಲ್ಕತ್ತದಲ್ಲಿ ನಡೆಯಬೇಕಿದ್ದ ಈ ಪಂದ್ಯವನ್ನು ಭದ್ರತಾ ಕಾರಣದಿಂದ ಗುವಾಹಟಿಗೆ ಸ್ಥಳಾಂತರಿಸಲಾಗಿದೆ.
ಮೋಹನ್ ಬಾಗನ್– ಈಸ್ಟ್ ಬೆಂಗಾಲ್ (ಸಂಜೆ 5)
ಬೆಂಗಳೂರು ಎಫ್‌ಸಿ– ಮೊಹಮ್ಮಡನ್ ಎಸ್‌ಸಿ (ರಾತ್ರಿ 7.30)
ನೇರಪ್ರಸಾರ: ಸ್ಪೋರ್ಟ್ಸ್ 18
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.