ADVERTISEMENT

ಬ್ಲಾಸ್ಟರ್‌ ವಿರುದ್ಧ ಗೆದ್ದು ಬೀಗುವುದೇ ಬಿಎಫ್‌ಸಿ?

ಇಂದು ದಕ್ಷಿಣ ಭಾರತ ‘ಡರ್ಬಿ’: ಕಂಠೀರವ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜು

ಜಿ.ಶಿವಕುಮಾರ
Published 22 ನವೆಂಬರ್ 2019, 19:11 IST
Last Updated 22 ನವೆಂಬರ್ 2019, 19:11 IST
ಕೇರಳ ಬ್ಲಾಸ್ಟರ್ಸ್ ಎಫ್‌ಸಿ ತಂಡದ ಬಾರ್ತೊಲೊಮೆವ್‌ ಒಗ್‌ಬೆಚೆ, ಶುಕ್ರವಾರ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.
ಕೇರಳ ಬ್ಲಾಸ್ಟರ್ಸ್ ಎಫ್‌ಸಿ ತಂಡದ ಬಾರ್ತೊಲೊಮೆವ್‌ ಒಗ್‌ಬೆಚೆ, ಶುಕ್ರವಾರ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.   

ಬೆಂಗಳೂರು: ಹದಿಮೂರು ದಿನಗಳ ಬಿಡುವಿನ ಬಳಿಕ ಮತ್ತೆ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಕಲರವ ಶುರುವಾಗಿದೆ.

ಆರನೇ ಆವೃತ್ತಿಯ ಲೀಗ್‌ನ 21ನೇ ಹೋರಾಟಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ಧಗೊಂಡಿದ್ದು, ಆತಿಥೇಯ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ಮತ್ತು ಕೇರಳ ಬ್ಲಾಸ್ಟರ್ಸ್‌ ಎಫ್‌ಸಿ, ಶನಿವಾರ ಮುಖಾಮುಖಿಯಾಗಲಿವೆ.

ಹಾಲಿ ಚಾಂಪಿಯನ್‌ ಬಿಎಫ್‌ಸಿ, ಹಿಂದಿನ ಆವೃತ್ತಿಯಲ್ಲಿ ಮೋಡಿ ಮಾಡಿತ್ತು. ಆರಂಭದಿಂದಲೇ ಎದುರಾಳಿ ತಂಡಗಳ ಮೇಲೆ ಆಧಿಪತ್ಯ ಸಾಧಿಸುತ್ತಾ ಪ್ರಶಸ್ತಿಗೆ ಮುತ್ತಿಕ್ಕಿತ್ತು. ಆದರೆ ಈ ಬಾರಿ ತಂಡ ಮಂಕಾದಂತೆ ಕಾಣುತ್ತಿದೆ. ಮೊದಲ ಮೂರು ಪಂದ್ಯಗಳ ಫಲಿತಾಂಶವನ್ನು ಗಮನಿಸಿದರೆ ಇದು ಮನದಟ್ಟಾಗುತ್ತದೆ.

ADVERTISEMENT

ಮೂರು ಪಂದ್ಯಗಳಿಂದ ಕೇವಲ ಒಂದು ಗೋಲು ಹೊಡೆದು ನಿರಾಸೆ ಮೂಡಿಸಿದ್ದ ಸುನಿಲ್‌ ಚೆಟ್ರಿ ಬಳಗ ಇದೇ ತಿಂಗಳ 10ರಂದು ತವರಿನಲ್ಲಿ ನಡೆದಿದ್ದ ಹಣಾಹಣಿಯಲ್ಲಿ ಚೆನ್ನೈಯಿನ್‌ ಎಫ್‌ಸಿ ಎದುರು ಜಯಭೇರಿ ಮೊಳಗಿಸಿತ್ತು. ಈ ಗೆಲುವು ಚೆಟ್ರಿ ಪಡೆಯಲ್ಲಿ ನವೋಲ್ಲಾಸ ಮೂಡುವಂತೆ ಮಾಡಿದೆ.

ಬೆಂಗಳೂರಿನ ತಂಡ, ಕೇರಳ ಬ್ಲಾಸ್ಟರ್ಸ್‌ ಎದುರು ಇದುವರೆಗೂ ನಾಲ್ಕು ಪಂದ್ಯಗಳನ್ನು ಆಡಿದ್ದು ಮೂರರಲ್ಲಿ ಜಯಿಸಿದೆ. ಶನಿವಾರದ ಹಣಾಹಣಿಯಲ್ಲೂ ‘ದೇವರ ನಾಡಿನ’ ತಂಡವನ್ನು ಸೋಲಿಸಿ ಗೆಲುವಿನ ದಾಖಲೆಯನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಲು ಚೆಟ್ರಿ ಪಡೆ ಕಾತರವಾಗಿದೆ.

ಲೀಗ್‌ನಲ್ಲಿ ಎರಡು ಬಾರಿ ರನ್ನರ್ಸ್‌ ಅಪ್‌ ಆಗಿರುವ ಕೇರಳ ತಂಡದಿಂದಲೂ ಈ ಬಾರಿ ನಿರೀಕ್ಷಿತ ಸಾಮರ್ಥ್ಯ ಮೂಡಿಬಂದಿಲ್ಲ. ಹಿಂದಿನ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಸೋತಿರುವ ಈ ತಂಡಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ಇದರಿಂದ ಹೊರಬಂದು ಆತಿಥೇಯರನ್ನು ಮಣಿಸುವ ಸವಾಲು ಈಗ ಪ್ರವಾಸಿ ಪಡೆಯ ಎದುರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.