ADVERTISEMENT

ಭಾರತ ತಂಡಕ್ಕೆ ಸುನಿಲ್ ಚೆಟ್ರಿ ಅಲಭ್ಯ

ಬಹರೇನ್‌, ಬೆಲಾರೂಸ್‌ ಎದುರು ಸ್ನೇಹಪರ ಫುಟ್‌ಬಾಲ್ ಪಂದ್ಯ

ಪಿಟಿಐ
Published 7 ಮಾರ್ಚ್ 2022, 14:15 IST
Last Updated 7 ಮಾರ್ಚ್ 2022, 14:15 IST
ಸುನಿಲ್ ಚೆಟ್ರಿ –ಟ್ವಿಟರ್ ಚಿತ್ರ
ಸುನಿಲ್ ಚೆಟ್ರಿ –ಟ್ವಿಟರ್ ಚಿತ್ರ   

ನವದೆಹಲಿ: ಬಹರೇನ್ ಮತ್ತು ಬೆಲಾರೂಸ್‌ ವಿರುದ್ಧ ಇದೇ ತಿಂಗಳು ನಿಗದಿಯಾಗಿರುವ ಅಂತರರಾಷ್ಟ್ರೀಯ ಸ್ನೇಹಪರ ಫುಟ್‌ಬಾಲ್ ಪಂದ್ಯಗಳಿಗೆಭಾರತ ತಂಡಕ್ಕೆ ನಾಯಕ, ಗಾಯಾಳು ಸುನಿಲ್ ಚೆಟ್ರಿ ಲಭ್ಯರಿಲ್ಲ.

ಮಾರ್ಚ್ 23 ಮತ್ತು 26ರಂದು ಮನಾಮದಲ್ಲಿ ನಡೆಯಲಿರುವ ಪಂದ್ಯಗಳಿಗಾಗಿ ತಂಡದ ತರಬೇತುದಾರ ಇಗೊರ್ ಸ್ಟಿಮ್ಯಾಚ್‌ ಅವರು ಪ್ರಕಟಿಸಿರುವ 38 ಸಂಭವನೀಯ ಆಟಗಾರರಲ್ಲಿ 37 ವರ್ಷದ ಫಾರ್ವರ್ಡ್ ಆಟಗಾರ ಚೆಟ್ರಿ ಅವರೂ ಇದ್ದರು.

‘ಬಹರೇನ್ ಮತ್ತು ಬೆಲಾರೂಸ್ ಎದುರಿನ ಪಂದ್ಯಗಳನ್ನು ಎದುರು ನೋಡುತ್ತಿದ್ದೆ. ಆದರೆ ಕಣಕ್ಕಿಳಿಯಲು ಸಾಧ್ಯವಾಗದಿರುವುದಕ್ಕೆ ನಾಚಿಕೆ ಎನಿಸುತ್ತಿದೆ‘ ಎಂದು ಸುನಿಲ್ ಚೆಟ್ರಿ ಅವರು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ (ಎಐಎಫ್‌ಎಫ್‌) ವೆಬ್‌ಸೈಟ್‌ಗೆ ತಿಳಿಸಿದ್ದಾರೆ.

ADVERTISEMENT

‘ಇದು ಕಷ್ಟದ ಋತು. ಕೆಲವು ಸಣ್ಣ ಗಾಯಗಳಿಂದ ಬಳಲುತ್ತಿದ್ದು, ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕು. ಮೇ ವೇಳೆಗೆ ಸಂಪೂರ್ಣ ಫಿಟ್‌ ಆಗಲು ಅಗತ್ಯವಿರುವ ಎಲ್ಲವನ್ನೂ ಮಾಡುವೆ. ತಂಡಕ್ಕೆ ಶುಭವಾಗಲಿ‘ ಎಂದು ಸುನಿಲ್ ತಿಳಿಸಿದ್ದಾರೆ. ಆದರೆ ತಮಗಾದ ಗಾಯದ ಸ್ವರೂಪವನ್ನು ಅವರು ಬಹಿರಂಗಪಡಿಸಿಲ್ಲ.

ಗೋಲ್‌ಕೀಪರ್‌ಗಳಾದ ಪ್ರಭುಶುಖನ್ ಗಿಲ್ ಮತ್ತು ಮೊಹಮ್ಮದ್ ನವಾಜ್, ಡಿಫೆಂಡರ್‌ಗಳಾದ ದೀಪಕ್ ತಂಗ್ರಿ ಮತ್ತು ರೋಷನ್ ಸಿಂಗ್, ಮಿಡ್‌ಫೀಲ್ಡರ್‌ಗಳಾದ ವಿಕ್ರಂ ಪ್ರತಾಪ್ ಸಿಂಗ್, ವಿಪಿ ಸುಹೈರ್‌, ಅನಿಕೇತ್ ಜಾಧವ್‌ ಮತ್ತು ಜೆರ್ರಿ ಮಾವ್ಮಿಂಗ್‌ಥಂಗಾ ಅವರು ಎರಡು ಪಂದ್ಯಗಳನ್ನು ಆಡಲು ಸ್ಥಾನ ಗಿಟ್ಟಿಸಿದ್ದಾರೆ.

ಭಾರತ ತಂಡವು ಮಾರ್ಚ್‌ 23ರಂದು ಬಹರೇನ್‌ ಮತ್ತು 26ರಂದು ಬೆಲಾರೂಸ್ ಎದುರು ಆಡಲಿದೆ.

ಫಿಫಾ ಅಂತರರಾಷ್ಟ್ರೀಯ ಪಂದ್ಯಗಳಿಂದ ರಷ್ಯಾವನ್ನು ಅಮಾನತುಗೊಳಿಸಿದೆ. ಆದರೆ ಬೆಲಾರೂಸ್‌ ಮೇಲೆ ಅಂತಹ ಯಾವುದೇ ಕ್ರಮವನ್ನು ಇನ್ನೂ ಪ್ರಕಟಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.