ADVERTISEMENT

FIFA: ಶೂಟೌಟ್‌ನಲ್ಲಿ ಜಪಾನ್ ‘ಔಟ್‌’: ಕ್ವಾರ್ಟರ್‌ಫೈನಲ್‌ಗೆ ಕ್ರೊವೇಷ್ಯಾ ಲಗ್ಗೆ

ಏಜೆನ್ಸೀಸ್
Published 5 ಡಿಸೆಂಬರ್ 2022, 18:57 IST
Last Updated 5 ಡಿಸೆಂಬರ್ 2022, 18:57 IST
ಕ್ರೊವೇಷ್ಯಾ ಆಟಗಾರರ ಗೆಲುವಿನ ಸಂಭ್ರಮ– ಎಎಫ್‌ಪಿ ಚಿತ್ರ
ಕ್ರೊವೇಷ್ಯಾ ಆಟಗಾರರ ಗೆಲುವಿನ ಸಂಭ್ರಮ– ಎಎಫ್‌ಪಿ ಚಿತ್ರ   

ದೋಹಾ: ಪೆನಾಲ್ಟಿ ಶೂಟೌಟ್‌ನಲ್ಲಿ ಜಪಾನ್ ತಂಡವನ್ನು ಮಣಿಸಿದ ಕ್ರೊವೇಷ್ಯಾ ತಂಡವು ಫಿಫಾ ವಿಶ್ವಕಪ್ ಟೂರ್ನಿಯ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿತು.

ಸೋಮವಾರ ಅಲ್‌ ಜನೂಬ್‌ ಕ್ರೀಡಾಂಗಣದಲ್ಲಿ ನಡೆದ 16ರ ಘಟ್ಟದ ಹಣಾಹಣಿಯಲ್ಲಿ ಕ್ರೊವೇಷ್ಯಾ 3–1ರಿಂದ ಜಪಾನ್ ತಂಡದ ವಿರುದ್ಧ ಗೆದ್ದಿತು.

ನಿಗದಿತ ಮತ್ತು ಹೆಚ್ಚುವರಿ ಅವಧಿಯಲ್ಲಿ ಉಭಯ ತಂಡಗಳು 1–1ರಿಂದ ಸಮಬಲ ಸಾಧಿಸಿದ್ದವು. ಜಪಾನ್ ತಂಡಕ್ಕಾಗಿ ಡೈಜೆನ್ ಮಯಡಾ 43ನೇ ನಿಮಿಷ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟಿದ್ದರು. ಕ್ರೊವೇಷ್ಯಾದ ಇವಾನ್ ಪೆರಿಸಿಚ್‌ 55ನೇ ನಿಮಿಷದಲ್ಲಿ ಹೆಡರ್‌ ಮೂಲಕ ಸಮಬಲದ ಗೋಲು ದಾಖಲಿಸಿದರು.

ADVERTISEMENT

ಪೆನಾಲ್ಟಿ ಶೂಟೌಟ್‌ನಲ್ಲಿ ಜಪಾನ್‌ನ ತಕುಮಿ ಮಿನಾಮಿನೊ, ಕವರೊ ಮಿಟೊಮಾ ಮತ್ತು ಮಯಾ ಯೋಶಿದಾ ಗೋಲುಗಳನ್ನು ತಡೆದು ಕ್ರೊವೇಷ್ಯಾದ ಗೋಲ್‌ಕೀಪರ್ ಡಾಮ್ನಿಕ್‌ ಕಿವಾಕೊವಿಚ್‌ ಗೆಲುವಿನ ರೂವಾರಿಯಾದರು.

ಶೂಟೌಟ್‌ನಲ್ಲಿ ಕ್ರೊವೇಷ್ಯಾದ ನಿಕೊಲಾ ಲಾಸಿಚ್, ಮಾರ್ಸೆಲೊ ಬ್ರೊಜೊವಿಚ್ ಮತ್ತು ಮರಿಯೊ ಪೆಸಲಿಚ್‌ ಚೆಂಡನ್ನು ಗುರಿ ಸೇರಿಸಿದರು. ಜಪಾನ್‌ ಪರ ತಕುಮಾ ಅಸಾನೊ ಮಾತ್ರ ಯಶಸ್ವಿಯಾದರು.

ಇದೇ ಮೊದಲ ಬಾರಿ ಕ್ವಾರ್ಟರ್‌ಫೈನಲ್ ಪ್ರವೇಶಿಸುವ ಜಪಾನ್ ಆಸೆ ಈಡೇರಲಿಲ್ಲ.

ಕ್ರೊವೇಷ್ಯಾ ತಂಡವು ಎಂಟರಘಟ್ಟದಲ್ಲಿ ಬ್ರೆಜಿಲ್ ಅಥವಾ ದಕ್ಷಿಣ ಕೊರಿಯಾವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.