ADVERTISEMENT

ಪ್ರಗತಿಯ ‘ಟ್ರ್ಯಾಕ್‌’ಗೆ ಅಡ್ಡಿ

ವಿಕ್ರಂ ಕಾಂತಿಕೆರೆ
Published 19 ಏಪ್ರಿಲ್ 2020, 19:34 IST
Last Updated 19 ಏಪ್ರಿಲ್ 2020, 19:34 IST
ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಆಟಗಾರರ ಕಸರತ್ತು –ಪ್ರಜಾವಾಣಿ ಸಂಗ್ರಹ ಚಿತ್ರಗಳು
ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಆಟಗಾರರ ಕಸರತ್ತು –ಪ್ರಜಾವಾಣಿ ಸಂಗ್ರಹ ಚಿತ್ರಗಳು   
""

ಬೆಂಗಳೂರಿನ ಕಂಠೀರವ ಕ್ರೀಡಾಂಗಣದ ಗುಂಡಿಬಿದ್ದ ಟ್ರ್ಯಾಕ್‌ನಲ್ಲಿ ಓಡುತ್ತ ಕಾಲು ಉಳುಕಿದ, ಹಿಂಗಾಲು ನೋವಿಗೆ ಒಳಗಾದ ಅಥ್ಲೀಟ್‌ಗಳ ನಿರಂತರ ಬೇಡಿಕೆಯಾಗಿತ್ತು, ಹೊಸ ಸಿಂಥೆಟಿಕ್ ಟ್ರ್ಯಾಕ್. ಇನ್ನೊಂದೆಡೆ ರಾಜ್ಯ ಫುಟ್‌ಬಾಲ್ ಸಂಸ್ಥೆಯ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಪಂದ್ಯಗಳಲ್ಲಿ ಆಡುತ್ತಿದ್ದ, ಅಭ್ಯಾಸ ಮಾಡುತ್ತಿದ್ದ ಆಟಗಾರರಿಗೂ ಅಸಮಾಧಾನ; ಹೊಸ ಟರ್ಫ್ ಅಳವಡಿಸಬೇಕು ಎಂಬ ಬೇಡಿಕೆ.

ಈ ಎರಡೂ ಕಸನು ಇನ್ನೇನು ಕೂಡಿಬಂತು ಎಂಬುವಷ್ಟರಲ್ಲಿ ಸಿಡಿಲಿನಂತೆ ಬಂದೆರಗಿದ್ದು ಕೊರೊನಾ ಮಹಾಮಾರಿ. ಕಂಠೀರವ ಟ್ರ್ಯಾಕ್‌ಗೆ ಹೊಸ ಸಿಂಥೆಟಿಕ್ ಅಳವಡಿಸುವ ಕಾರ್ಯದ ಕಾಮಗಾರಿ ಆರಂಭಗೊಂಡ ಕೆಲವೇ ದಿನಗಳಲ್ಲಿ ಲಾಕ್‌ಡೌನ್ ಘೋಷಣೆಯಾಯಿತು. ಫುಟ್‌ಬಾಲ್ ಅಂಗಣದ ಟರ್ಫ್ ಬದಲಾಯಿಸುವ ಕಾರ್ಯಕ್ಕೆ ಸಂಬಂಧಿಸಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು, ಟರ್ಫ್ ಹೊತ್ತ ಹಡಗು ಹೊರಟ ಕೆಲವೇ ದಿನಗಳಲ್ಲಿ ಜಗತ್ತು ಸ್ತಬ್ಧವಾಯಿತು. ಹೀಗಾಗಿ ಈ ಎರಡೂ ಕಾಮಗಾರಿಗಳಿಗೆ ಅಡ್ಡಿಯಾಗಿದೆ.

ಜರ್ಮನಿಯಿಂದ ಬರಬೇಕು ಸಾಮಗ್ರಿ

ADVERTISEMENT

ಕಂಠೀರವ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಜರ್ಮನಿಯಿಂದ ಕಚ್ಚಾ ಸಾಮಗ್ರಿ ಬರಬೇಕು. ಮಾರ್ಚ್ ಒಂಬತ್ತರಂದು ಹಳೆಯ ಸಿಂಥೆಟಿಕ್ ತೆಗೆಯುವ ಕೆಲಸ ಆರಂಭಗೊಂಡಿತ್ತು. 400 ಮೀಟರ್ಸ್ ಟ್ರ್ಯಾಕ್‌ನ ಅರ್ಧದಷ್ಟು ಭಾಗದ ಹಾಸು ತೆಗೆಯುವಷ್ಟರಲ್ಲಿ ಲಾಕ್‌ಡೌನ್‌ನಿಂದಾಗಿ ಕ್ರೀಡಾಂಗಣವನ್ನು ಮುಚ್ಚಲಾಯಿತು; ಕಾಮಗಾರಿ ನಿಲ್ಲಿಸಲಾಯಿತು.

ಈಗ ಉಳಿದಿರುವುದು ಉಳಿದ ಅರ್ಧಭಾಗದ ಹಳೆಯ ಹಾಸು ತೆಗೆಯುವುದು ಮತ್ತು ಹೊಸ ಸಿಂಥೆಟಿಕ್ ಹಾಸುವುದು. ಆದರೆ ಕಾಮಗಾರಿ ಯಾವಾಗ ಪುನರಾರಂಭಗೊಳ್ಳುತ್ತದೆ ಎಂದು ಹೇಳಲಾಗದು. ಜರ್ಮನಿಯಿಂದ ಇನ್ನೂ ಕಚ್ಛಾವಸ್ತು ಹೊರಟಿಲ್ಲ. ಹೀಗಾಗಿ, ಕೋವಿಡ್ ಹಾವಳಿ ನಿಂತು ಲಾಕ್‌ಡೌನ್ ನಿರ್ಬಂಧ ತೆರವುಗೊಳಿಸಿದರೂ ಕೆಲಸ ಶುರುವಾಗುವುದು ತಡವಾಗಬಹುದು.

ಕಂಠೀರವ ಕ್ರೀಡಾಂಗಣದ ಟ್ರ್ಯಾಕ್‌ನ ಹಳೆಯ ಸಿಂಥೆಟಿಕ್ ಹಾಸನ್ನು ಕಿತ್ತು ತೆಗೆದಿರುವುದು

ಇಟಲಿಯಿಂದ ಹೊರಟಿರುವ ಟರ್ಫ್

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣಕ್ಕೆ ಅಳವಡಿಸುವ ಟರ್ಫ್ ಇಟಲಿಯಿಂದ ಹೊರಟಿದೆ. ದುಬೈ ಮೂಲಕ ಚೆನ್ನೈಗೆ ಬಂದ ನಂತರ ಬೆಂಗಳೂರು ತಲುಪಬೇಕು. ಫಿಫಾದ ಷರತ್ತುಗಳಿಗೆ ಬದ್ಧವಾಗಿ ಕಚ್ಚಾವಸ್ತುಗಳನ್ನು ಪೂರೈಸುವ ಲಿಮೊಂಟೆ ಕಂಪೆನಿಗೆ ಇದರ ಟೆಂಡರ್ ನೀಡಲಾಗಿದೆ. ಟರ್ಫ್ ಅಳವಡಿಸಿದ ನಂತರ ಫಿಫಾದ ಪ್ರಮಾಣಪತ್ರ ಪಡೆಯುವ ‘ಬೌನ್ಸ್ ಸ್ಟೆಪ್’ ಅಳವಡಿಸಲು ‘ಲೆವನ್ ಎ ಸೈಡ್’ ಅಂಗಣಗಳಿಗೆ ಟರ್ಫ್ ಅಳವಡಿಸುವಲ್ಲಿ ಪರಿಣತಿ ಗಳಿಸಿರುವ ಸಿಮ್‌ಕಾಟ್ ಕಂಪೆನಿಗೆ ವಹಿಸಲಾಗಿದೆ.

ಆದ್ದರಿಂದ ಟರ್ಫ್ ಅಳವಡಿಸುವುಕ್ಕೆ ಎಲ್ಲ ತಯಾರಿಯೂ ಪೂರ್ಣಗೊಂಡಿದೆ ಎಂದೇ ಹೇಳಬೇಕು. ಆದರೆ ಸದ್ಯ ಎಲ್ಲವೂ ಅಯೋಮಯ. ನಿರೀಕ್ಷೆಯಂತೆ ಎಲ್ಲವೂ ನಡೆದರೆ ಜೂನ್ 15ರಿಂದ ಹೊಸ ಫುಟ್‌ಬಾಲ್ ಋತು ಆರಂಭಿಸುವುದು ರಾಜ್ಯ ಸಂಸ್ಥೆಯ ಉದ್ದೇಶ. ಇದು ಸಾಕಾರವಾಗುವುದೇ...?

***

ಸಿವಿಲ್ ಕೆಲಸ ಯಾವುದೂ ಇಲ್ಲ. ಆದ್ದರಿಂದ ಕಚ್ಛಾ ವಸ್ತು ಬಂದು ತಲುಪಿದ ಕೂಡಲೇ ಕೆಲಸ ಆರಂಭಿಸಬಹುದು. ಇದಕ್ಕೆ ಜಾಗತಿಕ ಮಟ್ಟದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುವ ವರೆಗೆ ಕಾಯಬೇಕಾಗಬಹುದು.

- ರಮೇಶ್ ಕ್ರೀಡಾ ಇಲಾಖೆ ಜಂಟಿ ಆಯುಕ್ತ

***

ಕೊರೊನಾ ಆತಂಕ ಕಾಡುವ ಮೊದಲೇ ಟೆಂಡರ್ ಮತ್ತಿತರ ಪ್ರಕ್ರಿಯೆಗಳು ಮುಗಿದಿವೆ. ಉಳಿದಿರುವುದು ಟರ್ಫ್ ಅಳವಡಿಸುವ ಕೆಲಸ ಮಾತ್ರ. ಕಚ್ಛಾವಸ್ತು ಬಂದು ತಲುಪಿದರೆ ರಾತ್ರಿಯೂ ಕೆಲಸ ಮಾಡಿ ಅಳವಡಿಸಬಹುದು. ಅದಕ್ಕೆ ಬೇಕಾದ ಹೊನಲು ಬೆಳಕಿನ ಸೌಲಭ್ಯ ಇದೆ.

- ಸತ್ಯನಾರಾಯಣ ರಾಜ್ಯ ಫುಟ್‌ಬಾಲ್ ಸಂಸ್ಥೆ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.