ADVERTISEMENT

ವಿಶ್ವಕಪ್ ಫುಟ್‌ಬಾಲ್ ಟೂರ್ನಿ: 16ರ ಘಟ್ಟಕ್ಕೆ ಇಂಗ್ಲೆಂಡ್‌, ಅಮೆರಿಕ

ಟೂರ್ನಿಯಿಂದ ಹೊರಬಿದ್ದ ಇರಾನ್‌, ವೇಲ್ಸ್ ತಂಡಗಳು

ಏಜೆನ್ಸೀಸ್
Published 30 ನವೆಂಬರ್ 2022, 15:44 IST
Last Updated 30 ನವೆಂಬರ್ 2022, 15:44 IST
ಗೋಲು ಗಳಿಸಿದ ಮಾರ್ಕಸ್‌ ರ‍್ಯಾಶ್‌ಫೋರ್ಡ್‌ ಸಂಭ್ರಮ–ಎಎಫ್‌ಪಿ ಚಿತ್ರ
ಗೋಲು ಗಳಿಸಿದ ಮಾರ್ಕಸ್‌ ರ‍್ಯಾಶ್‌ಫೋರ್ಡ್‌ ಸಂಭ್ರಮ–ಎಎಫ್‌ಪಿ ಚಿತ್ರ   

ಅಲ್‌ ರಯಾನ್‌, ಕತಾರ್‌: ಇಂಗ್ಲೆಂಡ್‌ ಹಾಗೂ ಅಮೆರಿಕ ತಂಡಗಳು ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಎಂಟ‌ರಘಟ್ಟಕ್ಕೆ ಲಗ್ಗೆಯಿಟ್ಟವು.

ಇಲ್ಲಿಯ ಅಹಮದ್‌ ಬಿನ್ ಅಲಿ ಕ್ರೀಡಾಂಗಣದಲ್ಲಿ ಮಂಗಳವಾರ ತಡರಾತ್ರಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಮಾರ್ಕಸ್‌ ರ‍್ಯಾಶ್‌ಪೋರ್ಡ್‌ ಗಳಿಸಿದ ಎರಡು ಗೋಲುಗಳ ಬಲದಿಂದ ಇಂಗ್ಲೆಂಡ್‌ ತಂಡವು 3–0ಯಿಂದ ವೇಲ್ಸ್ ತಂಡವನ್ನು ಪರಾಭವಗೊಳಿಸಿತು.

ಇಲ್ಲಿ ಗೋಲು ಗಳಿಸುವುದರೊಂದಿಗೆ ರ‍್ಯಾಶ್‌ಫೋರ್ಡ್‌ ಈ ಬಾರಿಯ ಟೂರ್ನಿಯಲ್ಲಿ ಅತಿ ಹೆಚ್ಚು (3) ಗೋಲು ಗಳಿಸಿದವರ ಪಟ್ಟಿಯಲ್ಲಿ ಒಬ್ಬರಾದರು.

ADVERTISEMENT

ಇಂಗ್ಲೆಂಡ್‌ ತಂಡಕ್ಕಾಗಿ ಫಿಲ್ ಫೊಡೆನ್‌ ಮತ್ತೊಂದು ಗೋಲು ದಾಖಲಿಸಿದರು.

2020ರ ಯೂರೊ ಕಪ್‌ ಫೈನಲ್‌ನಲ್ಲಿ ಇಟಲಿ ತಂಡದ ಎದುರು ಪೆನಾಲ್ಟಿ ಅವಕಾಶದಲ್ಲಿ ಗೋಲು ಗಳಿಸಲು ಸಾಧ್ಯವಾಗದಿದ್ದಕ್ಕೆ ಕಪ್ಪು ಆಟಗಾರರಾದ ರ‍್ಯಾಶ್‌ಫೋರ್ಡ್‌ ಮತ್ತು ಬುಕಾಯೊ ಸಾಕಾ ಅವರು ಭಾರಿ ಟೀಕೆಗಳನ್ನು ಎದುರಿಸಿದ್ದರು. ಅವರನ್ನು ಜನಾಂಗೀಯವಾಗಿ ನಿಂದಿಸಲಾಗಿತ್ತು. ಆ ಘಟನೆಯನ್ನು ಮರೆಸುವ ಆಟವನ್ನು ರ‍್ಯಾಶ್‌ಫೋರ್ಡ್ ಇಲ್ಲಿ ಆಡಿದರು.

ಈ ಪಂದ್ಯದ 50ನೇ ನಿಮಿಷದಲ್ಲಿ ದೊರೆತ ಫ್ರೀಕಿಕ್‌ ಅವಕಾಶದಲ್ಲಿ ರ‍್ಯಾಶ್‌ಫೋರ್ಡ್‌ ಚೆಂಡನ್ನು ಗುರಿ ಸೇರಿಸಿದರು. ಇದಾದ ಒಂದು ನಿಮಿಷದಲ್ಲೇ ಫೊಡೆನ್‌ ಕಾಲ್ಚಳಕ ತೋರಿದರು. 68ನೇ ನಿಮಿಷದಲ್ಲಿ ರ‍್ಯಾಶ್‌ಫೋರ್ಡ್‌ ಮತ್ತೊಂದು ಯಶಸ್ಸು ಸಾಧಿಸಿದರು.

ಈ ಗೆಲುವಿನೊಂದಿಗೆ ಇಂಗ್ಲೆಂಡ್‌ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿತು. ಭಾನುವಾರ ನಡೆಯುವ ಪ್ರೀಕ್ವಾರ್ಟರ್‌ ಹಣಾಹಣಿಯಲ್ಲಿ ಸೆನೆಗಲ್ ತಂಡವನ್ನು ಎದುರಿಸಲಿದೆ.

ಬಿ ಗುಂಪಿನಲ್ಲಿ ವೇಲ್ಸ್ ಕೊನೆಯ ಸ್ಥಾನಕ್ಕಿಳಿದು ವಿಶ್ವಕಪ್‌ನಿಂದ ಹೊರಬಿದ್ದಿತು. ಆ ತಂಡದ ನಾಯಕ ಗೆರೆತ್‌ ಬೇಲ್ ಅವರಿಗೆ ಇದು ಕೊನೆಯ ಪಂದ್ಯವಾಗುವ ಸಾಧ್ಯತೆಯಿದೆ.

ಪುಲಿಸಿಚ್‌ ಗೋಲು; ಇರಾನ್‌ಗೆ ಸೋಲು

ದೋಹಾ: ಕ್ರಿಸ್ಟಿಯನ್‌ ಪುಲಿಸಿಚ್‌ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಅಮೆರಿಕ ತಂಡವು ಇರಾನ್ ತಂಡವನ್ನು 1–0ಯಿಂದ ಮಣಿಸಿ ಪ್ರೀಕ್ವಾರ್ಟರ್‌ ತಲುಪಿತು.

ಎರಡೂ ದೇಶಗಳ ಮಧ್ಯದ ರಾಜಕೀಯ ವೈರತ್ವದ ಕಾರಣ ಗಮನಸೆಳೆದಿದ್ದ ಪಂದ್ಯದಲ್ಲಿ ಅಮೆರಿಕ ಮೇಲುಗೈ ಸಾಧಿಸಿತು.

ಅಮೆರಿಕ ತಂಡಕ್ಕೆ ‘ಮಾಡು ಇಲ್ಲವೇ ಮಡಿ‘ ಎಂಬಂತಿದ್ದ ಬಿ ಗುಂಪಿನ ಈ ಹಣಾಹಣಿಯಲ್ಲಿ ಪುಲಿಸಿಚ್‌ 38ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

ಪಂದ್ಯದಿಂದ ಗಾಯಗೊಂಡಿದ್ದ ಪುಲಿಸಿಚ್‌ ಮೊದಲಾರ್ಧದ ಬಳಿಕ ಕ್ರೀಡಾಂಗಣ ತೊರೆದರು.

ಶನಿವಾರ ನಡೆಯುವ 16ರ ಘಟ್ಟದ ಪಂದ್ಯದಲ್ಲಿ ಅಮೆರಿಕ ತಂಡವು ನೆದರ್ಲೆಂಡ್ಸ್ ತಂಡಕ್ಕೆ ಮುಖಾಮುಖಿಯಾಗಲಿದೆ.

ತನ್ನ ದೇಶದ ಧ್ವಜವನ್ನು ಮಾರ್ಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕಾರಣಕ್ಕೆ ಅಮೆರಿಕ ಫುಟ್‌ಬಾಲ್‌ ತಂಡವನ್ನು ನಿಷೇಧಿಸಬೇಕೆಂದು ಇರಾನ್‌ ಫುಟ್‌ಬಾಲ್ ಫೆಡರೇಷನ್‌ ಫಿಫಾಗೆ ಮನವಿ ಮಾಡಿತ್ತು. ಹೀಗಾಗಿ ಅಲ್‌ ತುಮಾಮಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಬಿಗುವಿನ ವಾತಾವರಣವಿದ್ದರೂ ಆಟಗಾರರು ಶಾಂತವಾಗಿ ಆಡಿದರು.

ಈ ಗೆಲುವಿನೊಂದಿಗೆ ಅಮೆರಿಕ 1998ರ ಟೂರ್ನಿಯಲ್ಲಿ ಅನುಭವಿಸಿದ ಸೋಲಿಗೆ ಮುಯ್ಯಿ ತೀರಿಸಿಕೊಂಡಿತು. ಸೋಲಿನಿಂದಿಗೆ ಇರಾನ್‌ ಟೂರ್ನಿಯಿಂದ ಹೊರಬಿದ್ದಿತು.

ಜನಾಂಗೀಯ ತಾರತಮ್ಯ: ಹೋರಾಟಕ್ಕೆ ಬೆಂಬಲ

ಜನಾಂಗೀಯ ತಾರತಮ್ಯ ವಿರೋಧಿ ಹೋರಾಟಕ್ಕೆ ಬೆಂಬಲ ಸೂಚಿಸಲು ಇಂಗ್ಲೆಂಡ್‌ ಮತ್ತು ವೇಲ್ಸ್ ತಂಡದ ಆಟಗಾರರು ಪಂದ್ಯಕ್ಕೂ ಮೊದಲು ಮೊಣಕಾಲೂರಿ ಬೆಂಬಲ ಸೂಚಿಸಿದರು.

ಇಂಗ್ಲೆಂಡ್‌ ಕೋಚ್‌ ಗೆರೆತ್‌ ಸೌತ್‌ಗೇಟ್‌ ತಮ್ಮ ಆಟಗಾರರಿಗೆ ಈ ಮೊದಲೇ ಈ ಕುರಿತು ಸೂಚಿಸಿದ್ದರು. ಬಿ ಗುಂಪಿನ ಮೂರೂ ಪಂದ್ಯಗಳಲ್ಲಿ ಇಂಗ್ಲೆಂಡ್‌ ಆಟಗಾರರು ಮೊಣಕಾಲೂರಿ ನಿಂತು ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ವೇಲ್ಸ್ ಆಟಗಾರರು ಮಂಗಳವಾರ ಈ ಕ್ರಮ ಅನುಸರಿಸಿದರು.

ಬ್ಯಾನರ್‌ಗಳಿಗೆ ಅನುಮತಿ

ಇರಾನ್‌ನಲ್ಲಿ ನಡೆಯುತ್ತಿರುವ ಮಹಿಳೆಯರ ಪ‍್ರತಿಭಟನೆಯನ್ನು ಬೆಂಬಲಿಸಿ ಪ್ರದರ್ಶಿಸುವ ಬ್ಯಾನರ್‌ ಮತ್ತಿತರ ವಸ್ತುಗಳಪ್ರದರ್ಶನಕ್ಕೆ ಫಿಫಾ ಅನುಮತಿ ನೀಡಿದೆ. ಇಂತಹ ವಸ್ತುಗಳನ್ನು ಕ್ರೀಡಾಂಗಣಗಕ್ಕೆ ತರುವುದನ್ನು ಈ ಮೊದಲು ನಿಷೇಧಿಸಲಾಗಿತ್ತು. ಇರಾನ್‌ ಮತ್ತು ವೇಲ್ಸ್ ತಂಡಗಳು ವಿಶ್ವಕಪ್‌ ಟೂರ್ನಿಯಿಂದ ಹೊರಬಿದ್ದ ಬಳಿಕ ಫಿಫಾ ಈ ಅನುಮತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.