ADVERTISEMENT

ಡುರಾಂಡ್‌ ಕಪ್‌ ಫುಟ್‌ಬಾಲ್‌: ಪದಾರ್ಪಣೆ ಮಾಡಲಿರುವ ಎಫ್‌ಸಿ ಬೆಂಗಳೂರುಯುನೈಟೆಡ್‌

ಪಿಟಿಐ
Published 24 ಆಗಸ್ಟ್ 2021, 12:04 IST
Last Updated 24 ಆಗಸ್ಟ್ 2021, 12:04 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಎಫ್‌ಸಿ ಬೆಂಗಳೂರು ಯುನೈಟೆಡ್ (ಎಫ್‌ಸಿಬಿಯು) ತಂಡವು ಪ್ರತಿಷ್ಠಿತ ಡುರಾಂಡ್‌ ಕಪ್ ಫುಟ್‌ಬಾಲ್‌ ಟೂರ್ನಿಯಲ್ಲಿ ಪದಾರ್ಪಣೆ ಮಾಡಲು ಸಜ್ಜಾಗಿದೆ. ಕೋಲ್ಕತ್ತಾದಲ್ಲಿ ಸೆಪ್ಟೆಂಬರ್‌ 5ರಿಂದ ಅಕ್ಟೋಬರ್ ಮೂರರವರೆಗೆ ನಿಗದಿಯಾಗಿರುವ ಟೂರ್ನಿಗೆ ತಂಡಕ್ಕೆ ಆಹ್ವಾನ ನೀಡಲಾಗಿದೆ.

ಏಷ್ಯಾದ ಅತ್ಯಂತ ಹಳೆಯ ಟೂರ್ನಿಯಾಗಿರುವ ಡುರಾಂಡ್ ಕಪ್‌ಅನ್ನು ಕೋವಿಡ್‌ ಹಿನ್ನೆಲೆಯಲ್ಲಿ ಒಂದು ವರ್ಷ ಆಯೋಜಿಸಿರಲಿಲ್ಲ. ಈ ಬಾರಿಯ ಟೂರ್ನಿಗೆ ಒಟ್ಟು 16 ತಂಡಗಳನ್ನು ಆಹ್ವಾನಿಸಲಾಗಿದೆ.

‘ಡುರಾಂಡ್ ಕಪ್‌ನಲ್ಲಿ ಭಾಗವಹಿಸಲು ಎಫ್‌ಸಿ ಬೆಂಗಳೂರು ಯುನೈಟೆಡ್‌ಗೆ ಆಹ್ವಾನ ಬಂದಿರುವುದು ಒಂದು ದೊಡ್ಡ ಗೌರವ. ಅತ್ಯಂತ ಸಂತಸವಾಗಿದೆ‘ ಎಂದು ತಂಡದ ಮಾಲೀಕ ಗೌರವ್ ಮಂಚಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಡುರಾಂಡ್ ಕಪ್ ಭಾರತದ ಫುಟ್‌ಬಾಲ್‌ನಲ್ಲಿ ಒಂದು ಮಹತ್ವದ ಟೂರ್ನಿ. ನಾವು ಅದರ ಭಾಗವಾಗುತ್ತಿರುವುದಕ್ಕೆ ಹೆಮ್ಮೆ ಇದೆ. ಇದು ಎಫ್‌ಸಿ ಬೆಂಗಳೂರು ಯುನೈಟೆಡ್‌ ಪ್ರಗತಿಗೆ ಸಾಕ್ಷಿಯಾಗಿದೆ‘ ಎಂದಿದ್ದಾರೆ.

ಎಫ್‌ಸಿಬಿಯು ತಂಡವು ‘ಎ’ ಗುಂಪಿನಲ್ಲಿ ಸ್ಥಾನ ಗಳಿಸಿದೆ. ಪ್ರಬಲ ಸ್ಪರ್ಧಿಗಳಾದ ಮೊಹಮ್ಮಡನ್ ಸ್ಪೋರ್ಟಿಂಗ್ ಕ್ಲಬ್‌, ಸಿಆರ್‌ಪಿಎಫ್‌ ಮತ್ತು ಭಾರತ ವಾಯುಪಡೆ ತಂಡಗಳೂ ಇದೇ ಗುಂಪಿನಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.