ADVERTISEMENT

FIFA 2022: ಡೆನ್ಮಾರ್ಕ್‌ಗೆ ಆಸ್ಟ್ರೇಲಿಯಾ ಸವಾಲು

ಗೆಲ್ಲುವ ತಂಡಕ್ಕೆ ನಾಕೌಟ್‌ ಹಂತದಲ್ಲಿ ಸ್ಥಾನ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 14:19 IST
Last Updated 29 ನವೆಂಬರ್ 2022, 14:19 IST
ಫ್ರಾನ್ಸ್‌ ತಂಡದ ಆಟಗಾರರು ಅಭ್ಯಾಸ ನಡೆಸಿದರು –ಎಎಫ್‌ಪಿ ಚಿತ್ರ
ಫ್ರಾನ್ಸ್‌ ತಂಡದ ಆಟಗಾರರು ಅಭ್ಯಾಸ ನಡೆಸಿದರು –ಎಎಫ್‌ಪಿ ಚಿತ್ರ   

ದೋಹಾ (ರಾಯಿಟರ್ಸ್‌): ಆಸ್ಟ್ರೇಲಿಯಾ ಮತ್ತು ಡೆನ್ಮಾರ್ಕ್‌ ತಂಡಗಳು ವಿಶ್ವಕಪ್‌ ಟೂರ್ನಿಯ ‘ಡಿ’ ಗುಂಪಿನ ಪಂದ್ಯದಲ್ಲಿ ಬುಧವಾರ ಪೈಪೋಟಿ ನಡೆಸಲಿದ್ದು, ರೋಚಕ ಹೋರಾಟ ನಿರೀಕ್ಷಿಸಲಾಗಿದೆ.

ನಾಕೌಟ್‌ ಹಂತ ಪ್ರವೇಶಿಸಲು ಡೆನ್ಮಾರ್ಕ್‌ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಮತ್ತೊಂದೆಡೆ ಆಸ್ಟ್ರೇಲಿಯಾ ತಂಡ ಡ್ರಾ ಸಾಧಿಸಿದರೂ ಮುಂದಿನ ಹಂತಕ್ಕೆ ಲಗ್ಗೆಯಿಡುವ ಅವಕಾಶವಿದೆ.

‘ಡಿ’ ಗುಂಪಿನಲ್ಲಿ ಆರು ಪಾಯಿಂಟ್ಸ್‌ ಹೊಂದಿರುವ ಫ್ರಾನ್ಸ್‌ ಈಗಾಗಲೇ ನಾಕೌಟ್‌ ಪ್ರವೇಶಿಸಿದೆ. ಆಸ್ಟ್ರೇಲಿಯಾ ತಂಡ ಮೂರು ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಡೆನ್ಮಾರ್ಕ್‌ ಮತ್ತು ಟುನೀಷಿಯಾ ತಲಾ ಒಂದು ಪಾಯಿಂಟ್‌ ಹೊಂದಿದ್ದು, ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನಗಳಲ್ಲಿವೆ.

ADVERTISEMENT

ಫ್ರಾನ್ಸ್‌ ತನ್ನ ಕೊನೆಯ ಪಂದ್ಯದಲ್ಲಿ ಟುನೀಷಿಯಾ ತಂಡವನ್ನು ಎದುರಿಸಲಿದೆ. ಹಾಲಿ ಚಾಂಪಿಯನ್ನರ ಎದುರು ಟುನೀಷಿಯಾ ಗೆಲುವು ಪಡೆಯುವ ಸಾಧ್ಯತೆ ತೀರಾ ಕಡಿಮೆ.

ಆಸ್ಟ್ರೇಲಿಯಾ ತಂಡ ವಿಶ್ವಕಪ್‌ನಲ್ಲಿ ಒಮ್ಮೆ ಮಾತ್ರ ಗುಂಪು ಹಂತದಿಂದ ಮೇಲಕ್ಕೇರಿತ್ತು. 2006ರ ಟೂರ್ನಿಯಲ್ಲಿ 16ರ ಘಟ್ಟದ ಪಂದ್ಯದಲ್ಲಿ 0–1 ರಲ್ಲಿ ಇಟಲಿ ಎದುರು ಸೋತಿತ್ತು. ಒಟ್ಟು ನಾಲ್ಕು ಬಾರಿ ನಾಕೌಟ್‌ ಹಂತಕ್ಕೆ ತೇರ್ಗಡೆಯಾಗಿದ್ದ ಡೆನ್ಮಾರ್ಕ್‌, 1998ರ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತ್ತು.

ಅಗ್ರಸ್ಥಾನದ ಗುರಿ: ಫ್ರಾನ್ಸ್‌ ತಂಡ ಕೊನೆಯ ಪಂದ್ಯದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದ್ದು, ಪ್ರಮುಖರಿಗೆ ವಿಶ್ರಾಂತಿ ನೀಡುವ ಚಿಂತನೆ ನಡೆಸಿದೆ. ಆದರೂ ಪಂದ್ಯವನ್ನು ಗೆದ್ದು ಅಗ್ರಸ್ಥಾನದೊಂದಿಗೆ ಲೀಗ್‌ ವ್ಯವಹಾರ ಕೊನೆಗೊಳಿಸುವುದು ಈ ತಂಡದ ಗುರಿ.

ಫ್ರಾನ್ಸ್‌ ತಂಡ ಮೊದಲ ಪಂದ್ಯದಲ್ಲಿ 4–1 ರಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ್ದರೆ, ಎರಡನೇ ಪಂದ್ಯದಲ್ಲಿ 2–1 ರಲ್ಲಿ ಡೆನ್ಮಾರ್ಕ್‌ ವಿರುದ್ಧ ಗೆದ್ದಿತ್ತು. ಫ್ರಾನ್ಸ್‌ ‘ಡಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದರೆ ‘ಸಿ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡವನ್ನು ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಎದುರಿಸಲಿದೆ. ಅರ್ಜೆಂಟೀನಾ, ಸೌದಿ ಅರೇಬಿಯಾ, ಪೋಲೆಂಡ್‌ ಮತ್ತು ಮೆಕ್ಸಿಕೊ ತಂಡಗಳು ‘ಸಿ’ ಗುಂಪಿನಲ್ಲಿವೆ.

ಕೆಲವು ಆಟಗಾರರಿಗೆ ವಿಶ್ರಾಂತಿ ನೀಡುವ ಜತೆಯಲ್ಲೇ ತಂಡದ ಸಮತೋಲನ ಕಾಪಾಡುವ ಸವಾಲು ಕೋಚ್‌ ದಿದಿಯೆ ದೆಶಾಂಪ್‌ ಅವರ ಮುಂದಿದೆ. ಸ್ಟಾರ್‌ ಆಟಗಾರ ಕೈಲಿಯಾನ್‌ ಎಂಬಾಪೆ ಅವರನ್ನು ಆರಂಭಿಕ ಇಲೆವೆನ್‌ನಲ್ಲಿ ಆಡಿಸದೆ, ಕೊನೆಯ ಕೆಲವು ನಿಮಿಷಗಳಲ್ಲಿ ಕಣಕ್ಕಿಳಿಸುವ ಸಾಧ್ಯತೆಯಿದೆ. ಎಂಬಾಪೆ ಈ ಟೂರ್ನಿಯಲ್ಲಿ ಈಗಾಗಲೇ ಮೂರು ಗೋಲುಗಳನ್ನು ಹೊಡೆದಿದ್ದಾರೆ.

‘ಎಷ್ಟೇ ಬದಲಾವಣೆಗಳನ್ನು ಮಾಡಿದರೂ, ಬುಧವಾರ ಆಡಲಿರುವ ತಂಡ ಗೆಲ್ಲುವ ಸಾಮರ್ಥ್ಯವನ್ನಂತೂ ಹೊಂದಿರಲಿದೆ’ ಎಂದು ದೆಶಾಂಪ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.