ADVERTISEMENT

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್: ಮೊದಲ ಜಯದ ನಿರೀಕ್ಷೆಯಲ್ಲಿ ಈಸ್ಟ್‌ ಬೆಂಗಾಲ್

ಚೆನ್ನೈಯಿನ್ ಎಫ್‌ಸಿ ವಿರುದ್ಧ ಹಣಾಹಣಿ

ಪಿಟಿಐ
Published 25 ಡಿಸೆಂಬರ್ 2020, 12:57 IST
Last Updated 25 ಡಿಸೆಂಬರ್ 2020, 12:57 IST
ಚೆನ್ನೈಯಿನ್ ಎಫ್‌ಸಿ ತಂಡ ರಫೆಲ್ ಕ್ರಿವೆಲಾರೊ ಮೇಲೆ ಭರವಸೆ ಇರಿಸಿಕೊಂಡಿದೆ –ಐಎಸ್ಎಲ್‌ ಮೀಡಿಯಾ ಚಿತ್ರ
ಚೆನ್ನೈಯಿನ್ ಎಫ್‌ಸಿ ತಂಡ ರಫೆಲ್ ಕ್ರಿವೆಲಾರೊ ಮೇಲೆ ಭರವಸೆ ಇರಿಸಿಕೊಂಡಿದೆ –ಐಎಸ್ಎಲ್‌ ಮೀಡಿಯಾ ಚಿತ್ರ   

ವಾಸ್ಕೊ, ಗೋವಾ: ಆರು ಪಂದ್ಯಗಳನ್ನು ಆಡಿಯೂ ಗೆಲುವು ಮರೀಚಿಕೆಯಾಗಿರುವ ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಶನಿವಾರ ಮತ್ತೊಮ್ಮೆ ಜಯಕ್ಕಾಗಿ ಪ್ರಯತ್ನಿಸಲಿದ್ದು ಚೆನ್ನೈಯಿನ್‌ ಎಫ್‌ಸಿ ವಿರುದ್ಧ ಇಲ್ಲಿನ ತಿಲಕ್ ಮೈದಾನದಲ್ಲಿ ಸೆಣಸಲಿದೆ.

ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಆಡಲು ಅವಕಾಶ ಪಡೆದಿರುವ ಕೋಲ್ಕತ್ತದ ತಂಡಕ್ಕೆ ಈ ವರೆಗೆ ನಿರೀಕ್ಷೆಗೆ ತಕ್ಕ ಆಟ ಆಡಲು ಆಗಲಿಲ್ಲ. ಆದ್ದರಿಂದ ಗೆಲುವಿಗಾಗಿ ಶತಾಯಗತಾಯ ಶ್ರಮಿಸಲು ತಂಡ ಸಜ್ಜಾಗಿದೆ. ಹಿಂದಿನ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಗೆಲುವಿನ ಸನಿಹದಲ್ಲಿ ಎಡವಿತ್ತು.

ಈಸ್ಟ್ ಬೆಂಗಾಲ್ ಈ ವರೆಗೆ ಗಳಿಸಿರುವ ಗೋಲುಗಳ ಸಂಖ್ಯೆ ಕೇವಲ ಮೂರು. ಆದರೆ ಬಿಟ್ಟುಕೊಟ್ಟಿರುವುದು 11 ಗೋಲು. ಈ ಬಾರಿ ಹೆಚ್ಚು ಗೋಲು ಬಿಟ್ಟುಕೊಟ್ಟ ತಂಡಗಳ ಪಟ್ಟಿಯಲ್ಲಿ ಈಸ್ಟ್ ಬೆಂಗಾಲ್ ಎರಡನೇ ಸ್ಥಾನದಲ್ಲಿದೆ. ಗಳಿಸಿರುವ ಗೋಲುಗಳಲ್ಲಿ ಒಂದು ಎದುರಾಳಿ ತಂಡದಿಂದ ಉಡುಗೊರೆಯಾಗಿ ಸಿಕ್ಕಿತ್ತು. ಎರಡು ಗೋಲುಗಳನ್ನು ಹೈದರಾಬಾದ್ ಎಫ್‌ಸಿ ವಿರುದ್ಧ ಈ ತಂಡ ಗಳಿಸಿತ್ತು. ಆ ಎರಡೂ ಗೋಲುಗಳನ್ನು ಜಾಕ್ಸ್ ಮಗ್ಹೋಮಾ ಅವರೊಬ್ಬರೇ ಗಳಿಸಿದ್ದರು.

ADVERTISEMENT

ಇಷ್ಟೆಲ್ಲ ಕೊರತೆಗಳಿದ್ದರೂ ಹಿಂದಿನ ಕೆಲವು ಪಂದ್ಯಗಳಲ್ಲಿ ತಂಡ ಸಾಮರ್ಥ್ಯವನ್ನು ವೃದ್ಧಿಸುತ್ತ ಬಂದಿದೆ. ಹಿಂದಿನ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡವನ್ನು ಆತಂಕದ ಖೆಡ್ಡಾದಲ್ಲಿ ಕೆಡಹುವಲ್ಲಿ ಯಶಸ್ವಿಯಾಗಿತ್ತು.

ಚೆನ್ನೈಯಿನ್ ಎಫ್‌ಸಿ ಕೂಡ ಈ ಬಾರಿ ನಿರೀಕ್ಷೆಗೆ ತಕ್ಕ ಸಾಮರ್ಥ್ಯವನ್ನು ತೋರುವಲ್ಲಿ ವಿಫಲವಾಗಿದೆ. ಈ ವರೆಗೆ ಕೇವಲ ಐದು ಗೋಲು ಗಳಿಸಲು ಆ ತಂಡಕ್ಕೆ ಸಾಧ್ಯವಾಗಿದೆ. ಈ ಪೈಕಿ ‘ಓಪನ್ ಪ್ಲೇ’ಯಲ್ಲಿ ಮೂಡಿ ಬಂದಿದ್ದು ಎರಡು ಗೋಲುಗಳು ಮಾತ್ರ. ಆ ತಂಡಕ್ಕಿಂತ ಕಡಿಮೆ ಗೋಲು ಗಳಿಸಿರುವ ಏಕೈಕ ತಂಡ ಎಸ್‌ಸಿ ಈಸ್ಟ್ ಬೆಂಗಾಲ್. ಆದ್ದರಿಂದ ಆ ತಂಡದ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿ ಕಣಕ್ಕೆ ಇಳಿಯಲು ಚೆನ್ನೈಯಿನ್ ಸಜ್ಜಾಗಿದೆ.

ಆತಿಥೇಯ ಎಫ್‌ಸಿ ಗೋವಾ ತಂಡವನ್ನು ಹಿಂದಿನ ಪಂದ್ಯದಲ್ಲಿ 2–1ರಲ್ಲಿ ಮಣಿಸಿರುವುದರಿಂದ ಚೆನ್ನೈಯಿನ್ ಈಗ ಭರವಸೆಯಲ್ಲಿದೆ. ಮುಂದಿನ ಕೆಲವು ಪಂದ್ಯಗಳಲ್ಲಿ ನೀಡುವ ಸಾಮರ್ಥ್ಯವು ತಂಡ ಯಾವ ಹಾದಿಯಲ್ಲಿ ಸಾಗುತ್ತಿದೆ ಎಂಬುದನ್ನು ನಿರ್ಧರಿಸಲಿದೆ ಎಂದು ಕೋಚ್ ಸಾಬಾ ಲಜಾಲೊ ಅಭಿಪ್ರಾಯಪಟ್ಟಿದ್ದಾರೆ. ಹೊಸ ತಂಡವಾದ ಈಸ್ಟ್ ಬೆಂಗಾಲ್, ಐಎಸ್‌ಎಲ್‌ಗೆ ಬೇಗನೇ ಒಗ್ಗಿಕೊಂಡಿದೆ. ಆದ್ದರಿಂದ ಅವರ ವಿರುದ್ಧ ಆಡುವಾಗ ಎಚ್ಚರಿಕೆಯಿಂದ ಇರಬೇಕು’ ಎಂದು ಲಜಾಲೊ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.