ADVERTISEMENT

ಫುಟ್‌ಬಾಲ್‌: ಐಜ್ವಾಲ್‌ ಜಯಭೇರಿ

ಪಿಟಿಐ
Published 4 ಮಾರ್ಚ್ 2019, 19:36 IST
Last Updated 4 ಮಾರ್ಚ್ 2019, 19:36 IST
   

ಐಜ್ವಾಲ್‌: ಅನ್ಸುಮಾನ್‌ ಕ್ರೊಮಾಹ್‌ ಗಳಿಸಿದ ಎರಡು ಗೋಲುಗಳ ನೆರವಿನಿಂದ ಐಜ್ವಾಲ್‌ ಎಫ್‌ಸಿ ತಂಡ ಐ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಗೆಲುವಿನ ಸಿಹಿ ಸವಿದಿದೆ.

ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹೋರಾಟದಲ್ಲಿ ಆತಿಥೇಯ ಐಜ್ವಾಲ್‌ 4–1 ಗೋಲುಗಳಿಂದ ಶಿಲ್ಲಾಂಗ್‌ ಲಜಾಂಗ್‌ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು.

ಈ ಸೋಲಿನೊಂದಿಗೆ ಶಿಲ್ಲಾಂಗ್‌ ತಂಡ ಪ್ರಶಸ್ತಿ ರೇಸ್‌ನಿಂದ ಹೊರ ಬಿದ್ದಿದೆ. 19 ಪಂದ್ಯಗಳನ್ನು ಆಡಿರುವ ಈ ತಂಡ 11 ಪಾಯಿಂಟ್ಸ್‌ಗಳೊಂದಿಗೆ ಪಟ್ಟಿಯಲ್ಲಿ ಕೊನೆಯ ಸ್ಥಾನ ಹೊಂದಿದೆ.

ADVERTISEMENT

ಐಜ್ವಾಲ್‌ ಖಾತೆಯಲ್ಲಿ 21 ಪಾಯಿಂಟ್ಸ್‌ ಇದ್ದು, ಈ ತಂಡವು ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.

ತವರಿನ ಅಭಿಮಾನಿಗಳ ಎದುರು ಆಡಿದ ಐಜ್ವಾಲ್‌ 40ನೇ ನಿಮಿಷದಲ್ಲಿ ಖಾತೆ ತೆರೆಯಿತು. ಪೆನಾಲ್ಟಿ ಅವಕಾಶದಲ್ಲಿ ಅನ್ಸುಮಾನ್‌ ಚೆಂಡನ್ನು ಗುರಿ ಮುಟ್ಟಿಸಿದರು. 81ನೇ ನಿಮಿಷದಲ್ಲಿ ಲಾಲ್ಕಾಪುಯಿಮಾವಿಯಾ ಗೋಲು ಬಾರಿಸಿದರು. 83ನೇ ನಿಮಿಷದಲ್ಲಿ ಮುಂಚೂಣಿ ವಿಭಾಗದ ಆಟಗಾರ ಅನ್ಸುಮಾನ್‌ ಮತ್ತೊಮ್ಮೆ ಕಾಲ್ಚಳಕ ತೋರಿದರು. ಐಸಾಕ್‌ ವ್ಯಾನ್‌ಲಾಲ್ರುಟ್‌ಫೆಲಾ 89ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಮುನ್ನಡೆ ಹೆಚ್ಚಿಸಿದರು.

ಹೆಚ್ಚುವರಿ ಅವಧಿಯಲ್ಲಿ (90+3ನೇ ನಿಮಿಷ) ಶಿಲ್ಲಾಂಗ್‌ ತಂಡದ ಡೊನ್‌ಬೊಕ್ಲಾಂಗ್‌ ಲಿಂಗ್ಡೊ ಗೋಲು ಗಳಿಸಿ ಹಿನ್ನಡೆ ತಗ್ಗಿಸಲಷ್ಟೇ ಶಕ್ತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.