
ಕೊಲಂಬೊ: ಭಾರತದ ಬಾಲಕರ ತಂಡವು ಸೋಮವಾರ ನಡೆದ ಸ್ಯಾಫ್ 17 ವರ್ಷದೊಳಗಿನವರ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 3–2 ಗೋಲುಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿತು. ಪಂದ್ಯದ ವೇಳೆ ಪಾಕ್ ಆಟಗಾರ ಮೊಹಮ್ಮದ್ ಅಬ್ದುಲ್ಲಾ ವಿವಾದಾತ್ಮಕ ರೀತಿಯಲ್ಲಿ ಸಂಭ್ರಮಿಸಿದ್ದಾರೆ.
ಭಾನುವಾರ ದುಬೈನಲ್ಲಿ ಭಾರತ ವಿರುದ್ಧದ ಏಷ್ಯಾ ಕಪ್ ಸೂಪರ್ ಫೋರ್ ಪಂದ್ಯದ ವೇಳೆ ಪಾಕ್‌ನ ಬ್ಯಾಟರ್ ಹ್ಯಾರಿಸ್ ರವೂಫ್ ಮತ್ತು ಸಾಹೀಬ್ ಝಾದಾ ಫರ್ಹಾನ್ ‘ಗನ್‌ಶಾಟ್’ ಅಣಕು ಮಾಡಿದ ಒಂದು ದಿನದ ನಂತರ ಅಬ್ದುಲ್ಲಾ ಅವರಿಂದ ವಿವಾದಾತ್ಮಕ ಸಂಜ್ಞೆ ವ್ಯಕ್ತವಾಯಿತು.
ಎರಡೂ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆದಿದ್ದರಿಂದ ಈ ಪಂದ್ಯಕ್ಕೆ ಹೆಚ್ಚಿನ ಮಹತ್ವ ಇರಲಿಲ್ಲ. 31ನೇ ನಿಮಿಷದಲ್ಲಿ ದಲ್ಲಾಲ್ಮುನ್ ಗ್ಯಾಂಗ್ಟೆ ಭಾರತಕ್ಕೆ ಮುನ್ನಡೆ ಒದಗಿಸಿದರು. 43ನೇ ನಿಮಿಷದಲ್ಲಿ ಅಬ್ದುಲ್ಲಾ ಗೋಲು ದಾಖಲಿಸಿದ್ದರಿಂದ, ತಂಡಗಳ ಸ್ಕೋರ್ ಸಮನಾಯಿತು. ಈ ವೇಳೆ ಅಬ್ದುಲ್ಲಾ ಮೈದಾನದ ಮೂಲೆಗೆ ಓಡಿ ಕುಳಿತು, ತನ್ನ ತಂಡದ ಸದಸ್ಯರೊಂದಿಗೆ ಚಹಾ ಕುಡಿದಂತೆ ಸಂಭ್ರಮಿಸಿದರು. ಭಾರತ ತಂಡವನ್ನು ಅಣಕಿಸುವಂತಿದ್ದ ಅವರ ಆಚರಣೆ ಚರ್ಚೆಗೆ ಕಾರಣವಾಗಿದೆ.
ಬಿ ಗುಂಪಿನಲ್ಲಿರುವ ಭಾರತ ಮತ್ತು ಪಾಕ್ ತಂಡವು ಕ್ರಮವಾಗಿ ಮೊದಲೆರಡು ಸ್ಥಾನದೊಂದಿಗೆ ಸೆಮಿಫೈನಲ್‌ಗೆ ಮುನ್ನಡೆದವು. ನಾಲ್ಕರ ಘಟ್ಟದಲ್ಲಿ ಭಾರತ ತಂಡವು ನೇಪಾಳ ವಿರುದ್ಧ; ಪಾಕಿಸ್ತಾನ ತಂಡವು ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.