ADVERTISEMENT

ಎಎಫ್‌ಸಿ ಮಹಿಳಾ ಫುಟ್‌ಬಾಲ್‌: ಭಾರತಕ್ಕೆ ಎರಡನೇ ಜಯ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2023, 12:45 IST
Last Updated 8 ಏಪ್ರಿಲ್ 2023, 12:45 IST

ಬಿಷ್ಕೆಕ್, ಕಿರ್ಗಿಸ್ತಾನ (ಪಿಟಿಐ): ಭಾರತ ಮಹಿಳಾ ಫುಟ್‌ಬಾಲ್‌ ತಂಡದವರು ಎಎಫ್‌ಸಿ ಒಲಿಂಪಿಕ್‌ ಅರ್ಹತಾ ಟೂರ್ನಿಯಲ್ಲಿ ಕಿರ್ಗಿಸ್ತಾನ ವಿರುದ್ದ ಎರಡನೇ ಗೆಲುವು ಸಾಧಿಸಿದರು.

ಈ ವಾರದ ಆರಂಭದಲ್ಲಿ ನಡೆದಿದ್ದ ಪಂದ್ಯದಲ್ಲಿ ಆತಿಥೇಯ ತಂಡವನ್ನು 5–0 ಗೋಲುಗಳಿಂದ ಮಣಿಸಿದ್ದ ಭಾರತ, ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲೂ ಪ್ರಾಬಲ್ಯ ಸಾಧಿಸಿ 4–0 ಗೋಲುಗಳಿಂದ ಗೆದ್ದಿತು. ಈ ಎರಡು ಗೆಲುವುಗಳ ಮೂಲಕ ಅರ್ಹತಾ ಟೂರ್ನಿಯ ಎರಡನೇ ಸುತ್ತು ಪ್ರವೇಶಿಸಿತು.

ಸಂಧ್ಯಾ ರಂಗನಾಥನ್‌ ಎರಡು ಗೋಲುಗಳನ್ನು ತಂದಿತ್ತರೆ, ಅಂಜು ತಮಾಂಗ್‌ ಹಾಗೂ ರೇಣು ತಲಾ ಒಂದು ಗೋಲು ಗಳಿಸಿದರು.

ADVERTISEMENT

ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಭಾರತ ತಂಡಕ್ಕೆ ಸಂಧ್ಯಾ 18ನೇ ನಿಮಿಷದಲ್ಲಿ ಮುನ್ನಡೆ ತಂದಿತ್ತರು. ಎದುರಾಳಿ ತಂಡದ ಇಬ್ಬರು ಡಿಫೆಂಡರ್‌ಗಳು ಹಾಗೂ ಗೋಲ್‌ಕೀಪರ್‌ಅನ್ನು ತಪ್ಪಿಸಿ ಅವರು ಚೆಂಡನ್ನು ಗುರಿ ಸೇರಿಸಿದರು.

24ನೇ ನಿಮಿಷದಲ್ಲಿ ಅಂಜು, ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು. ಎರಡನೇ ಅವಧಿಯ ಆರಂಭದಲ್ಲೇ ಸಂಧ್ಯಾ ತಮ್ಮ ಎರಡನೇ ಗೋಲು ಗಳಿಸಿದರು. ಮಿಡ್‌ಫೀಲ್ಡರ್‌ ಇಂದುಮತಿ ಕದಿರೇಶನ್‌ ಅವರಿಂದ ದೊರೆತ ಪಾಸ್‌ನಲ್ಲಿ ಚೆಂಡನ್ನು ಗುರಿ ತಲುಪಿಸಿದರು. ಪಂದ್ಯ ಕೊನೆಗೊಳ್ಳಲು ಕೆಲವೇ ನಿಮಿಷಗಳಿರುವಾಗ ರೇಣು ಗೋಲು ಗಳಿಸಿ ಗೆಲುವಿನ ಅಂತರ ಹೆಚ್ಚಿಸಿದರು.

ಭಾರತದ ಕಾರ್ತಿಕಾ ಅಂಗಮುತ್ತು ಅವರು ರೆಡ್‌ ಕಾರ್ಡ್‌ ಪಡೆದು ಮೊದಲ ಅವಧಿಯಲ್ಲೇ ಅಂಗಳದಿಂದ ಹೊರನಡೆದಿದ್ದರು. ಇದರ ಲಾಭ ಎತ್ತಿಕೊಳ್ಳಲು ಕಿರ್ಗಿಸ್ತಾನ ತಂಡಕ್ಕೆ ಆಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.