ನವದೆಹಲಿ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಟೂರ್ನಿಯ ಭವಿಷ್ಯದ ಸುತ್ತ ಅನಿಶ್ಚತತೆಯ ಕಾರ್ಮೋಡ ಕವಿದಿರುವ ಬೆನ್ನಲ್ಲೇ ಚೆನ್ನೈಯಿನ್ ಎಫ್‌ಸಿ ತಂಡ ಬುಧವಾರ ತನ್ನ ಕಾರ್ಯ
ಚಟುವಟಿಕೆಯನ್ನು ಸ್ಥಗಿತಗೊಳಿಸಿದೆ. ಇದರಿಂದ ಭಾರತದ ಕ್ಲಬ್ ಫುಟ್‌ಬಾಲ್ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ.
ಈಗಾಗಲೇ ಬೆಂಗಳೂರು ಎಫ್‌ಸಿ ಮತ್ತು ಒಡಿಶಾ ಎಫ್‌ಸಿ ತಂಡಗಳು ಮುಖ್ಯ ತಂಡದ ಆಟಗಾರರಿಗೆ ಮತ್ತು ನೆರವು ಸಿಬ್ಬಂದಿಗೆ ವೇತನ ಪಾವತಿ ತಡೆಹಿಡಿದಿದೆ.
ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ಉನ್ನತ ಅಧಿಕಾರಿಗಳು ಮತ್ತು ಎಂಟು ಐಎಸ್‌ಎಲ್ ಕ್ಲಬ್‌ಗಳ ನಡುವೆ ಗುರುವಾರ ನಿಗದಿಯಾಗಿರುವ ಸಭೆಗೆ ಒಂದು ದಿನ ಮೊದಲೇ ಚೆನ್ನೈಯಿನ್ ಎಫ್‌ಸಿ ಈ ನಿರ್ಧಾರ ತಳೆದಿದೆ.
‘ಐಎಸ್‌ಎಲ್ ಭವಿಷ್ಯ ಅನಿಶ್ಚಿತವಾಗಿದ್ದು, ಚೆನ್ನೈಯಿನ್ ಎಫ್‌ಸಿ ತನ್ನ ಕ್ಲಬ್ ಕಾರ್ಯನಿರ್ವಹಣೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸುವ ಕ್ರಮಕ್ಕೆ ಅನಿವಾರ್ಯವಾಗಿ ಮುಂದಾಗಿದೆ’ ಎಂದು ಚೆನ್ನೈ ಮೂಲದ ಕ್ಲಬ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.
‘ಇದು ಕಠಿಣ ನಿರ್ಧಾರ. ಸಾಕಷ್ಟು ಯೋಚಿಸಿ, ಸಮಾಲೋಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ಅದು ತಿಳಿಸಿದೆ. ಚೆನ್ನೈಯಿನ್ ಎಫ್‌ಸಿ ಎರಡು ಬಾರಿ ಐಎಸ್‌ಎಲ್ ಚಾಂಪಿಯನ್ ಆಗಿದೆ.
ಹೋದ ವಾರ, ಐಎಸ್‌ಎಲ್ ತಂಡವಾದ ಒಡಿಶಾ ಎಫ್‌ಸಿ ತನ್ನ ಆಟಗಾರರಿಗೆ ಮತ್ತು ನೆರವು ಸಿಬ್ಬಂದಿಗೆ ವೇತನ ನೀಡುವುದನ್ನು ನಿಲ್ಲಿಸಿತ್ತು. ಸೋಮವಾರ ಬೆಂಗಳೂರು ಎಫ್‌ಸಿ ಕೂಡ ಆಟಗಾರರಿಗೆ ವೇತನ ತಡೆಹಿಡಿಯುವ ನಿರ್ಧಾರ ಕೈಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.