ADVERTISEMENT

ಐಎಸ್‌ಎಲ್‌: ಗೊವಾಗೆ ಮತ್ತೆ ನಿರಾಸೆ; ಮುಂಬೈಗೆ ಮೊದಲ ಜಯ

ಪಿಟಿಐ
Published 25 ನವೆಂಬರ್ 2020, 17:31 IST
Last Updated 25 ನವೆಂಬರ್ 2020, 17:31 IST
ಚೆಂಡಿನೊಂದಿಗೆ ಮುನ್ನುಗ್ಗಿದ ಮುಂಬೈ ಸಿಟಿ ಎಫ್‌ಸಿ ತಂಡದ ಮೊರ್ತಡ ಫಾಲ್ –ಐಎಸ್‌ಎಲ್ ಮೀಡಿಯಾ ಚಿತ್ರ
ಚೆಂಡಿನೊಂದಿಗೆ ಮುನ್ನುಗ್ಗಿದ ಮುಂಬೈ ಸಿಟಿ ಎಫ್‌ಸಿ ತಂಡದ ಮೊರ್ತಡ ಫಾಲ್ –ಐಎಸ್‌ಎಲ್ ಮೀಡಿಯಾ ಚಿತ್ರ   

ಫತೊರ್ಡ: ಜಿದ್ದಾಜಿದ್ದಿಯ ಆಟದ ಕೊನೆಯಲ್ಲಿ ಮುಂಬೈ ಸಿಟಿ ಎಫ್‌ಸಿ ಫಲ ಕಂಡಿತು. ಆತಿಥೇಯ ಗೋವಾ ಎದುರು ಇಲ್ಲಿ ಬುಧವಾರ ರಾತ್ರಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಮುಂಬೈ 1–0 ಅಂತರದ ಜಯ ಸಾಧಿಸಿತು. ಇಂಜುರಿ ಅವಧಿಯಲ್ಲಿ ಲಭಿಸಿದ ಪೆನಾಲ್ಟಿ ಅವಕಾಶದಲ್ಲಿ ಗೋಲು ಗಳಿಸಿದ ಇಂಗ್ಲೆಂಡ್‌ನ ಆ್ಯಡಂ ಲೀ ಫಾಂಡ್ರೆ ಗೆಲುವಿನ ರೂವಾರಿಯಾದರು.

ಎರಡೂ ತಂಡಗಳು ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದವು. ಮುಂಬೈ ಸಿಟಿ ಎಫ್‌ಸಿ ಅಮೋಘ ಆಟವಾಡಿದರೂ ನಾರ್ತ್ ಈಸ್ಟ್ ಯುನೈಟೆಡ್‌ ಎದುರು 0–1ರ ಅಂತರದಲ್ಲಿ ಸೋಲುಂಡಿತ್ತು. ಗೋವಾ ಮತ್ತು ಬೆಂಗಳೂರು ಎಫ್‌ಸಿ ನಡುವಿನ ಪಂದ್ಯ 2–2ರ ಸಮಬಲದಲ್ಲಿ ಮುಕ್ತಾಯಗೊಂಡಿತ್ತು. ಹೀಗಾಗಿ ಮೊದಲ ಗೆಲುವಿನ ಕನಸು ಹೊತ್ತು ಉಭಯ ತಂಡಗಳು ಕಣಕ್ಕೆ ಇಳಿದಿದ್ದವು. ಆರಂಭದಿಂದಲೇ ಜಿದ್ದಾಜಿದ್ದಿಯ ಪೈಪೋಟಿ ನಡೆಸಿದವು. ಆದ್ದರಿಂದ ರೋಚಕ ಕ್ಷಣಗಳಿಗೆ ಪಂದ್ಯ ಸಾಕ್ಷಿಯಾಯಿತು.

ಮಂದಾರ್ ರಾವ್ ದೇಸಾಯಿ ಮತ್ತು ಫಾರೂಕ್ ಚೌಧರಿ ಅವರು ಮುಂಬೈ ತಂಡಕ್ಕಾಗಿ ಅವಕಾಶಗಳನ್ನು ಸೃಷ್ಟಿಸಲು ಪ್ರಯತ್ನಿಸಿದರೆ, ಗೋವಾ ಪರ ಇವನ್ ಗೊಂಜಾಲೆಸ್ ಮತ್ತು ಸೆಮಿನ್ಲೆನ್ ಡೊಂಗೆಲ್ ಪ್ರಬಲ ಪೈಪೋಟಿ ನೀಡಿದರು. ಎಂಟನೇ ನಿಮಿಷದಲ್ಲಿ ಪಂದ್ಯದ ಮೊದಲ ಕಾರ್ನರ್ ಎಫ್‌ಸಿ ಗೋವಾಗೆ ಲಭಿಸಿತು. ಆದರೆ ಇದರ ಲಾಭ ಪಡೆದುಕೊಳ್ಳಲು ತಂಡಕ್ಕೆ ಸಾಧ್ಯವಾಗಲಿಲ್ಲ.

ADVERTISEMENT

ಮೊದಲಾರ್ಧದ ಮುಕ್ತಾಯದತ್ತ ಪಂದ್ಯ ಸಾಗುತ್ತಿದ್ದಂತೆ ಆಟಗಾರರ ಹುಮ್ಮಸ್ಸು ಹೆಚ್ಚಿತು. ಆಕ್ರಮಣಕಾರಿ ಆಟದೊಂದಿಗೆ ರಕ್ಷಣೆಗೆ ಒತ್ತು ನೀಡಿದ್ದರಿಂದ ಗೋಲು ಮೂಡಿಬರಲಿಲ್ಲ. 29ನೇ ನಿಮಿಷದಲ್ಲಿ ಮುಂಬೈ ಸಿಟಿಗೆ ಫ್ರೀ ಕಿಕ್ ಲಭಿಸಿದಾಗ ನಿರೀಕ್ಷೆ ಗರಿಗೆದರಿತು. ಆದರೆ ಚೆಂಡನ್ನು ಗುರಿ ಮುಟ್ಟಿಸಲಾಗದೆ ತಂಡ ನಿರಾಸೆಗೆ ಒಳಗಾಯಿತು. 32ನೇ ನಿಮಿಷದಲ್ಲಿ ಮುಂಬೈ ತಂಡದ ಆಕ್ರಮಣವನ್ನು ಚಿರತೆಯಂತೆ ಜಿಗಿದು ತಡೆದ ಗೋಲ್‌ಕೀಪರ್ ಮೊಹಮ್ಮದ್ ನವಾಜ್ ಮೆಚ್ಚುಗೆಗೆ ಪಾತ್ರರಾದರು. ಮೊದಲಾರ್ಧದ ಮುಕ್ತಾಯಕ್ಕೆ ಐದು ನಿಮಿಷ ಬಾಕಿ ಇರುವಾಗ ಗೋವಾದ ರೆಡೀಮ್ ತ್ಲಾಂಗ್ ಅವರು ರೆಡ್ ಕಾರ್ಡ್ ಪಡೆದು ಹೊರನಡೆದರು. ಹರ್ನಿಯನ್‌ ಸಂಟಾನ ಜೊತೆ ಚೆಂಡಿಗಾಗಿ ನಡೆಸಿದ ಹೋರಾಟದಲ್ಲಿ ತ್ಲಾಂಗ್ ಒರಟು ಆಟ ಆಡಿದ್ದರು. ‌

ಆಪತ್ತು ತಂದ ಹ್ಯಾಂಡ್‌ಬಾಲ್‌

ತ್ಲಾಂಗ್ ಹೊರಬಿದ್ದ ಕಾರಣ ಹತ್ತು ಮಂದಿಯ ಬಲದೊಂದಿಗೆ ದ್ವಿತೀಯಾರ್ಧದಲ್ಲಿ ಆಡಿದ ಗೋವಾ ಆಟಗಾರರು ಪಟ್ಟು ಬಿಡದೆ ಕಾದಾಡಿದರು. ಅಂತಿಮ ಕ್ಷಣಗಳಲ್ಲಿ ಮುಂಬೈ ತಂಡದ ಆಟ ಕಳೆಗಟ್ಟಿತು. ಹೀಗಾಗಿ ಪದೇ ಪದೇ ಅವಕಾಶಗಳು ಸೃಷ್ಟಿಯಾದವು. ಆದರೆ ಗೋಲ್ ಕೀಪರ್ ಮೊಹಮ್ಮದ್ ನವಾಜ್ ಎದುರಾಳಿಗಳ ಪ್ರಯತ್ನಗಳನ್ನು ವಿಫಲಗೊಳಿಸಿದರು. ಇಂಜುರಿ ಅವಧಿಯಲ್ಲಿ ಗೋವಾ ಆವರಣದಲ್ಲಿ ಪ್ರಬಲ ಆಕ್ರಮಣ ನಡೆಸಿದ ಮುಂಬೈಗೆ ಪೆನಾಲ್ಟಿ ಅವಕಾಶ ಲಭಿಸಿತು. ಆ್ಯಡಂ ಲೀ ಫಾಂಡ್ರೆ ಅವರು ಹೆಡ್ ಮಾಡಿದ ಚೆಂಡು ಗೋವಾ ಆಟಗಾರನ ಕೈಗೆ ಸೋಕಿತು. ಆದ್ದರಿಂದ ರೆಫರಿ ಪೆನಾಲ್ಟಿ ನೀಡಿದರು. ಫಾಂಡ್ರೆ ಬಲವಾಗಿ ಒದ್ದ ಚೆಂಡನ್ನು ನವಾಜ್ ತಡೆಯಲು ಪ್ರಯತ್ನಿಸಿದರು. ಅವರ ಗ್ಲೌಸ್‌ಗೆ ಸೋಕಿ ಚೆಂಡು ಬಲೆಯೊಳಗೆ ನುಗ್ಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.