ADVERTISEMENT

ಸೋತರೂ ಪ್ರೀ ಕ್ವಾರ್ಟರ್‌ಗೆ ಜಪಾನ್‌; ಗೆದ್ದರೂ ಹೊರಬಿದ್ದ ಪೋಲೆಂಡ್‌

ದ್ವಿತೀಯಾರ್ಧದ ಆರಂಭದಲ್ಲಿ ಗೋಲು ಗಳಿಸಿ ಮಿಂಚಿದ ಪೋಲೆಂಡ್‌ ತಂಡದ ಬೆಡ್ನಾರೆಕ್‌

ಏಜೆನ್ಸೀಸ್
Published 28 ಜೂನ್ 2018, 20:19 IST
Last Updated 28 ಜೂನ್ 2018, 20:19 IST
ಜಪಾನ್ ಎದುರಿನ ಪಂದ್ಯದಲ್ಲಿ ಪೋಲೆಂಡ್‌ನ ಜಾನ್ ಬೆಡ್ನಾರೆಕ್‌ ಗೋಲು ಗಳಿಸಿದ ಸಂದರ್ಭ. ಎಎಫ್‌ಪಿ ಚಿತ್ರ
ಜಪಾನ್ ಎದುರಿನ ಪಂದ್ಯದಲ್ಲಿ ಪೋಲೆಂಡ್‌ನ ಜಾನ್ ಬೆಡ್ನಾರೆಕ್‌ ಗೋಲು ಗಳಿಸಿದ ಸಂದರ್ಭ. ಎಎಫ್‌ಪಿ ಚಿತ್ರ   

ವೊಲ್ಗೊಗ್ರಾಡ್‌: ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಜಯ ಗಳಿಸುವ ಜಪಾನ್ ತಂಡದ ಆಸೆ ಈಡೇರಲಿಲ್ಲ. ಟೂರ್ನಿಯ ಮೊದಲ ಜಯ ಗಳಿಸಿದ ಪೋಲೆಂಡ್‌ ತಂಡ ಗುರುವಾರ ರಾತ್ರಿ ನಡೆದ ವಿಶ್ವಕಪ್‌ನ ‘ಎಚ್‌’ ಗುಂಪಿನ ಪಂದ್ಯದಲ್ಲಿ ಜಪಾನ್ ತಂಡದ ಸವಾಲು ಮೆಟ್ಟಿ ನಿಂತಿತು. ವಿಶ್ವಕಪ್ ಇತಿಹಾಸದಲ್ಲಿ ಒಮ್ಮೆಯೂ ಗುಂಪು ಹಂತದ ಎಲ್ಲ ಪಂದ್ಯಗಳನ್ನು ಸೋಲದ ಪೋಲೆಂಡ್‌ ಆ ದಾಖಲೆಯನ್ನು ಇಲ್ಲೂ ಉಳಿಸಿಕೊಂಡಿತು.

ಪಂದ್ಯದಲ್ಲಿ ಸೋತರೂ ಜಪಾನ್‌ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್ ಹಂತಕ್ಕೆ ಲಗ್ಗೆ ಇರಿಸಿತು. ವೊಲ್ಗೊಗ್ರಾಡ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಪೋಲೆಂಡ್‌ 1–0 ಗೋಲಿನಿಂದ ಗೆದ್ದಿತು. ಮೂರು ಪಂದ್ಯಗಳಿಂದ ನಾಲ್ಕು ಪಾಯಿಂಟ್ ಗಳಿಸಿದ ಜಪಾನ್‌ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿತು.

ಶಿಂಜಿ ಒಕಾಜಾಕಿ ಮತ್ತು ಯೋಶಿನೊರಿ ಮುಟೊ ಅವರ ಹೆಗಲಿಗೆ ಫಾರ್ವರ್ಡ್ ವಿಭಾಗದ ಜವಾಬ್ದಾರಿ ವಹಿಸಿದ ಜಪಾನ್ ಕೋಚ್‌ 4–4–2 ಮಾದರಿಯಲ್ಲಿ ತಂಡವನ್ನು ಕಣಕ್ಕೆ ಇಳಿಸಲು ನಿರ್ಧರಿಸಿದ್ದರು. ಒಟ್ಟು ಆರು ಬದಲಾವಣೆಯೊಂದಿಗೆ ತಂಡ ಆಡಿತ್ತು. ಈ ತಂತ್ರಕ್ಕೆ ತಕ್ಕ ಉತ್ತರ ನೀಡಿದ ಪೋಲೆಂಡ್‌ ಆರಂಭದಿಂದಲೇ ಆಕ್ರಮಣಕ್ಕೆ ಮುಂದಾಯಿತು. ಜಪಾನ್‌ನ ಮುನ್ನಡೆಯನ್ನು ತಡೆಯುವಲ್ಲೂ ಯಶಸ್ವಿಯಾಯಿತು.

ADVERTISEMENT

ವೃತ್ತಿ ಜೀವನದ 60ನೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ ಕಮಿಲ್ ಗ್ರೊಸಿಕಿ 21ನೇ ನಿಮಿಷದಲ್ಲಿ ಜಪಾನ್‌ ಆವರಣದಲ್ಲಿ ಆತಂಕ ಸೃಷ್ಟಿಸಿದರು. ಗುರಿಯತ್ತ ಒದ್ದ ಚೆಂಡು ಗೋಲ್‌ಕೀಪರ್‌ನ ಕೈಗೆ ತಾಗಿ ಹೊರಗೆ ಚಿಮ್ಮಿತು.

ಮೊದಲಾರ್ಧದಲ್ಲಿ ಚೆಂಡಿನ ಮೇಲೆ ಪೂರ್ಣ ನಿಯಂತ್ರಣ ಸಾಧಿಸಿದ ಪೋಲೆಂಡ್‌ ಗೋಲು ಗಳಿಸಲಿಲ್ಲ. ಆದರೆ ಎದುರಾಳಿಗಳಿಗೆ ಗೊಳು ಬಿಟ್ಟುಕೊಡಲೂ ಇಲ್ಲ. ದ್ವಿತೀಯಾರ್ಧದಲ್ಲಿ ಪ್ರಬಲ ಆಟ ಆಡಿದ ಪೋಲೆಂಡ್‌ 59ನೇ ನಿಮಿಷದಲ್ಲಿ ಬೆಡ್ನಾರೆಕ್‌ ಗಳಿಸಿದ ಗೋಲಿನ ಮೂಲಕ ಮುನ್ನಡೆ ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.