ಬೆಂಗಳೂರು: ಮುಹಮ್ಮದ್ ಉನೈಸ್ ಎಂ. (22ನೇ ನಿ. ಹಾಗೂ 36ನೇ ನಿ.) ಮತ್ತು ಬಿ.ಎಸ್. ಮೃಣಾಲ್ ಮುತುನ್ನಾ (45ನೇ ನಿ. ಹಾಗೂ 65ನೇ ನಿ.) ಅವರ ಅವಳಿ ಗೋಲುಗಳ ನೆರವಿನಿಂದ ಕೊಡಗು ಫುಟ್‌ಬಾಲ್ ಕ್ಲಬ್ ತಂಡವು ಕೆಎಸ್‌ಎಫ್‌ಎ ಸೂಪರ್ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 4–1ರಿಂದ ಬೆಂಗಳೂರು ಡ್ರೀಮ್ ಯುನೈಟೆಡ್ ಎಫ್‌ಸಿ ತಂಡವನ್ನು ಮಣಿಸಿತು.
ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಡ್ರೀಮ್ ಯುನೈಟೆಡ್ ತಂಡದ ಕೆ. ಲಾಲರಿನ್‌ಫೆಲಾ (70ನೇ ನಿ.) ಏಕೈಕ ಗೋಲು ದಾಖಲಿಸಿದರು.
ಇನ್ನೊಂದು ಪಂದ್ಯದಲ್ಲಿ ಹೆಂಗೌಲಲ್ ಕಿಪ್‌ಜೆನ್ (2ನೇ, 27ನೇ ಹಾಗೂ 48ನೇ ನಿ.) ಅವರ ಹ್ಯಾಟ್ರಿಕ್ ಗೋಲಿನ ನೆರವಿನಿಂದ ಎಂಇಜಿ ಆ್ಯಂಡ್ ಸೆಂಟರ್ ಎಫ್‌ಸಿ ತಂಡವು 5–0 ಗೋಲುಗಳಿಂದ ಎಂಎಫ್‌ಎಆರ್ ಸ್ಟುಡೆಂಟ್ಸ್ ಯೂನಿಯನ್ ಎಫ್‌ಸಿ ತಂಡವನ್ನು ಸುಲಭವಾಗಿ ಸೋಲಿಸಿತು. ಅಶ್ವಥ್ ಟಿ.ಪಿ. (79ನೇ ನಿ.) ಹಾಗೂ ಗುರ್‌ನೂರ್ ಸಿಂಗ್ (90ನೇ ನಿ.) ತಲಾ ಒಂದು ಗೋಲು ಹೊಡೆದು ಕಿಪ್‌ಜೆನ್ ಅವರಿಗೆ ಉತ್ತಮ ಬೆಂಬಲ ನೀಡಿದರು.
ಮತ್ತೊಂದು ಪಂದ್ಯದಲ್ಲಿ ಬಿಎಫ್‌ಸಿ ತಂಡವು 3–1ರಿಂದ ಸ್ಪೋರ್ಟಿಂಗ್ ಕ್ಲಬ್ ಬೆಂಗಳೂರು ತಂಡದ ಎದುರು ಗೆಲುವು ದಾಖಲಿಸಿತು. ಬಿಎಫ್‌ಸಿ ತಂಡದ ಯೈಫರೆಂಬ ಚಿಂಗಖಂ (23ನೇ ನಿ.), ನಿಂಗಥೊಯಿ ಖೊಂಗಜೆಮ್ ರಿಷಿ ಸಿಂಗ್ (52ನೇ ನಿ.) ಹಾಗೂ ಶಮನಾದ್ ಕೆ.ಪಿ. (90+3ನೇ ನಿ.) ತಲಾ ಒಂದು ಗೋಲು ಗಳಿಸಿದರು. ಸ್ಪೋರ್ಟಿಂಗ್ ಕ್ಲಬ್ ತಂಡದ ಪರ ಮೊಹಮ್ಮದ್ ಸಫ್ವಾನ್ (90+1ನೇ ನಿ.) ಏಕೈಕ ಗೋಲು ಹೊಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.