ಮರ್ಚಂಟ್ ಎಫ್‌ಸಿ ತಂಡದ ವೆಲೆಂಟೈನ್ ಅವರ ಕಿಕ್ ತಡೆಯಲು ಕಸಬಾ ಬ್ರದರ್ಸ್ ಎಫ್‌ಸಿ ತಂಡದ ಆಟಗಾರರು ಪ್ರಯತ್ನಿಸಿದರು
–ಪ್ರಜಾವಾಣಿ ಚಿತ್ರ /ಫಕ್ರುದ್ದೀನ್ ಎಚ್
ಮಂಗಳೂರು: ಜಿದ್ದಾಜಿದ್ದಿಯ ಪೈಪೋಟಿಯಲ್ಲಿ ಸ್ಥಳೀಯ ಕಸಬಾ ಬ್ರದರ್ಸ್ ವಿರುದ್ಧ ಜಯ ಗಳಿಸಿದ ನಗರದ ಮರ್ಚಂಟ್ ಎಫ್‌ಸಿ ತಂಡ, ಸರೋಜಿನಿ ಪುಂಡಲೀಕ ಕರ್ಕೇರ ಬೆಂಗ್ರೆ ಸ್ಮಾರಕ ಆಹ್ವಾನಿತ ಫುಟ್‌ಬಾಲ್ ಟೂರ್ನಿ ‘ಬಿವಿಎಸ್ ಅಮೃತ ಮಹೋತ್ಸವ ಟ್ರೋಫಿ’ಯ ಫೈನಲ್ ಪ್ರವೇಶಿಸಿತು.
ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲದ ಅಮೃತ ಮಹೋತ್ಸವದ ಅಂಗವಾಗಿ ನೆಹರೂ ಮೈದಾನದಲ್ಲಿ ನಡೆಯುತ್ತಿರುವ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಮರ್ಚಂಟ್ 1–0ಯಿಂದ ಶನಿವಾರ ಜಯ ಸಾಧಿಸಿತು. ಮತ್ತೊಂದು ಸೆಮಿಫೈನಲ್‌ನಲ್ಲಿ ತಮಿಳುನಾಡಿನ ರತ್ನಂ ಎಫ್‌ಸಿ 6–1ರಲ್ಲಿ ಗೋವಾ ಬಾಯ್ಸ್ ವಿರುದ್ಧ ಗೆದ್ದಿತು.
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಗೋವಾ ಎದುರು ಅರಂಭದಿಂದಲೇ ರತ್ನಂ ಎಫ್‌ಸಿ ಆಧಿಪತ್ಯ ಸ್ಥಾಪಿಸಿತು. ಮೊದಲನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಶಾರ್ಸನ್, ತಂಡಕ್ಕೆ ಮುನ್ನಡೆ ತಂದುಕೊಟ್ಟರು. ನಂತರ ಆಶಿಕ್ ಮಿಂಚಿದರು. 26, 45 ಮತ್ತು 55ನೇ ನಿಮಿಷಗಳಲ್ಲಿ ಗೋಲು ಗಳಿಸಿದ ಅವರು ಹ್ಯಾಟ್ರಿಕ್ ಸಾಧನೆಯ ಸಂಭ್ರಮ ಆಚರಿಸಿದರು. ರಸೂಲ್ (52ನೇ ನಿಮಿಷ) ಮತ್ತು ಜಯ ಗಣೇಶ್ (63ನೇ ನಿ) ಗೋಲು ತಂದುಕೊಟ್ಟರು. ಗೋವಾದ ಏಕೈಕ ಗೋಲು 60ನೇ ನಿಮಿಷದಲ್ಲಿ ಅಲಾಯ್ಡ್ ಕೊಲ್ಯಾಕೊ ಮೂಲಕ ಬಂತು.
ನಾಲ್ಕರ ಘಟ್ಟದ ಎರಡನೇ ಪಂದ್ಯ ಸ್ಥಳೀಯ ತಂಡಗಳ ನಡುವಿನ ರೋಚಕ ಕಾದಾಟಕ್ಕೆ ಸಾಕ್ಷಿಯಾಯಿತು. 70 ನಿಮಿಷಗಳ ಪಂದ್ಯದ ಕೊನೆಯ ಕ್ಷಣದಲ್ಲಿ ಗುರಿ ಮುಟ್ಟಿದ ಜಮ್ಶೀರ್ ಅವರು ಮರ್ಚಂಟ್ ಎಫ್‌ಸಿಯನ್ನು ಪ್ರಶಸ್ತಿ ಸುತ್ತಿಗೆ ತಲುಪಿಸಿದರು. ಭಾನುವಾರ ಸಂಜೆ 4 ಗಂಟೆಗೆ ಫೈನಲ್ ಪಂದ್ಯ ನಡೆಯಲಿದೆ.
ಆಟಗಾರರ ನಡುವೆ ಜಗಳ: ಎರಡೂ ಸೆಮಿಫೈನಲ್ ಪಂದ್ಯಗಳಲ್ಲಿ ಆಟಗಾರರ ನಡುವೆ ಜಗಳ ಉಂಟಾಯಿತು. ತಮಿಳುನಾಡು ತಂಡದ ಪರವಾಗಿ ರೆಫರಿಗಳು ‘ಆಟವಾಡಿದ್ದಾರೆ’ ಎಂದು ಆರೋಪಿಸಿ ಗೋವಾ ಆಟಗಾರರು ಮೈದಾನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ವಿಕೋಪಕ್ಕೆ ತಲುಪಿ ಆಟಗಾರರು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಕಸಬಾ ಬ್ರದರ್ಸ್ ಮತ್ತು ಮರ್ಚಂಟ್ ಎಫ್‌ಸಿ ನಡುವಿನ ಪಂದ್ಯ ಮುಗಿದು ಆಟಗಾರರು ಹೊರಹೋಗುತ್ತಿರುವಾಗ ಮಾತಿನ ಚಕಮಕಿ ನಡೆದು ಹೊಡೆದಾಡುವ ಹಂತಕ್ಕೆ ತಲುಪಿತ್ತು.
ಮರ್ಚಂಟ್ ಎಫ್‌ಸಿ ತಂಡದ ವೆಲೆಂಟೈನ್ (ಮಧ್ಯ) ಅವರ ಮುನ್ನಡೆ ತಡೆಯಲು ಪ್ರಯತ್ನಿಸಿದ ಕಸಬಾ ಬ್ರದರ್ಸ್ ಎಫ್‌ಸಿ ತಂಡದ ಫಯಾಜ್
ತಮಿಳುನಾಡಿನ ರತ್ನಂ ಎಫ್‌ಸಿಯ ಫೆಲಿಕ್ಸ್ (ಬಲ) ಅವರಿಂದ ಚೆಂಡು ಕಸಿದುಕೊಂಡು ಮುಂದೆ ಸಾಗಿದ ಗೋವಾ ಬಾಯ್ಸ್ ತಂಡದ ಶಾನಯ್ ಕೊಲ್ಯಾಕೊ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.