ಲಯೊನೆಲ್ ಮೆಸ್ಸಿ ಸಂಗ್ರಹ ಚಿತ್ರ
ಕೋಲ್ಕತ್ತ: ಎಲ್ಲವೂ ಅಂದುಕೊಂಡಂತೆ ನಡೆದರೆ, ಫುಟ್‌ಬಾಲ್ ದಿಗ್ಗಜ ಲಯೋನೆಲ್ ಮೆಸ್ಸಿ ಅವರನ್ನು ದಶಕದ ನಂತರ ಮೊದಲ ಬಾರಿ ಕಾಣುವ ಅವಕಾಶ ಕೋಲ್ಕತ್ತದ ಫುಟ್‌ಬಾಲ್ ಪ್ರಿಯರಿಗೆ ಡಿಸೆಂಬರ್‌ನಲ್ಲಿ ಒದಗಲಿದೆ. ಅರ್ಜೆಂಟೀನಾದ ತಾರೆಯ ಮೂರು ದಿನಗಳ ಭಾರತ ಪ್ರವಾಸ ಇಲ್ಲಿಂದಲೇ ಶುರುವಾಗಲಿದೆ.
ಅವರು ಅಹ್ಮದಾಬಾದ್, ಮುಂಬೈ ಮತ್ತು ನವದೆಹಲಿಗೂ ಭೇಟಿ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯೊಂದಿಗೆ ಭಾರತ ಪ್ರವಾಸ ಕೊನೆಗೊಳ್ಳಲಿದೆ.
‘ಎಲ್ಲ ಏರ್ಪಾಡುಗಳು ಅಂತಿಮಗೊಳ್ಳುತ್ತಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದದ ಬುಕ್ಕಿಂಗ್ ಕೂಡ ಆಗಿದೆ. ಆದರೆ ಮೆಸ್ಸಿ ಅವರ ಅಧಿಕೃತ ಒಪ್ಪಿಗೆಗೆ ಕಾಯಲಾಗುತ್ತಿದೆ ಎಂದು ಈ ಬೆಳವಣಿಗೆ ಅನುಸರಿಸುತ್ತಿರುವ ಮೂಲವೊಂದು ತಿಳಿಸಿದೆ. ಮೆಸ್ಸಿ ಅವರ ಸಾಮಾಜಿಕ ಜಾಲತಾಣದಿಂದ ಯಾವುದೇ ಕ್ಷಣದಲ್ಲಿ ಒಪ್ಪಿಗೆ ಬರಬಹುದು ಎಂದೂ ಮೂಲ ತಿಳಿಸಿದೆ.
ವೇಳಾಪಟ್ಟಿಯ ಅನುಸಾರ ಮೆಸ್ಸಿ ಡಿಸೆಂಬರ್ 12ರ ರಾತ್ರಿ ಕೋಲ್ಕತ್ತಕ್ಕೆ ಬಂದಿಳಿಯಲಿದ್ದಾರೆ.
ಮೆಸ್ಸಿ ಪ್ರತಿಮೆ: ಕೋಲ್ಕತ್ತದ ವಿಐಪಿ ರಸ್ತೆಯ ಲೇಕ್‌ಟೌನ್‌ನ ಶ್ರೀಭೂಮಿಯಲ್ಲಿ ಮೆಸ್ಸಿ ಅವರ 70 ಅಡಿ ಎತ್ತರದ ಪ್ರತಿಮೆಯನ್ನು ಸ್ವತಃ ಅವರೇ ಡಿ. 13ರಂದು ಬೆಳಿಗ್ಗೆ ಅನಾವರಣಗೊಳಿಸಲಿದ್ದಾರೆ. ‘ವಿಶ್ವದಲ್ಲೇ ಇದು ವಿಶ್ವಕಪ್ ವಿಜೇತನ ಅತಿ ದೊಡ್ಡ ಪ್ರತಿಮೆಯಾಗಲಿದೆ’ ಎಂದು ಸಂಘಟಕರು ತಿಳಿಸಿದ್ದಾರೆ.
ಅವರು ನಂತರ ಮಧ್ಯಾಹ್ನ 12 ರಿಂದ ಈಡನ್‌ಗಾರ್ಡನ್‌ನಲ್ಲಿ ತಲಾ ಏಳು ಮಂದಿ ಇರುವ ತಂಡಗಳ ನಡುವೆ ಆಡಲಾಗುವ ‘ಗೋಟ್ ಕಪ್’ ಪ್ರದರ್ಶನ ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.
13ರಂದು ಅವರು ಅಹಮದಾಬಾದಿಗೆ ತೆರಳಲಿದ್ದು ಶಾಂತಿಗ್ರಾಮದಲ್ಲಿ ಅದಾನಿ ಪ್ರತಿಷ್ಠಾನದ ಖಾಸ್ಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. 14ರಂದು ಅವರು ಮುಂಬೈ ತಲುಪಲಿದ್ದು ಅಂದು ಸಂಜೆ ಗೋಟ್ ಕನ್ಸರ್ಟ್ ಮತ್ತು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಗೋಟ್ ಕಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
15ರಂದು ಅವರು ನವದೆಹಲಿಯಲ್ಲಿ ಕಳೆಯಲಿದ್ದಾರೆ. ಪ್ರಧಾನಿ ಮೋದಿ ಅವರೊಂದಿಗೆ ಭೇಟಿಯ ನಂತರ ಫಿರೋಜ್ ಶಾ ಕೋಟ್ಲಾದಲ್ಲಿ ಪ್ರದರ್ಶನ ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.
2011ರಲ್ಲಿ ಭೇಟಿ: ಮೆಸ್ಸಿ ಅವರು ಮೊದಲ ಬಾರಿ 2011ರ ಆಗಸ್ಟ್‌ನಲ್ಲಿ ಭಾರತಕ್ಕೆ ಬಂದಿದ್ದರು. ಆಗಸ್ಟ್ 31ರಂದು ಕೋಲ್ಕತ್ತಕ್ಕೆ ಬಂದಿಳಿದ ಅವರು ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ವೆನೆಜುವೆಲಾ ವಿರುದ್ಧ ಪ್ರದರ್ಶನ ಪಂದ್ಯದಲ್ಲಿ ಆಡಿದ್ದರು. ಮೆಸ್ಸಿ ತಂಡ 1–0 ಯಿಂದ ಆ ಪಂದ್ಯ ಜಯಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.