ADVERTISEMENT

ಮಿಡ್‌ಫೀಲ್ಡರ್‌ ಕೆಸುಕಿ ಹೊಂಡಾ ವಿದಾಯ

ರಾಯಿಟರ್ಸ್
Published 3 ಜುಲೈ 2018, 19:43 IST
Last Updated 3 ಜುಲೈ 2018, 19:43 IST
ಕೆಸುಕಿ ಹೊಂಡಾ 
ಕೆಸುಕಿ ಹೊಂಡಾ    

ರೊಸ್ತೋವ್‌ ಆನ್‌ ಡಾನ್‌: ಜಪಾನ್‌ ಫುಟ್‌ಬಾಲ್‌ ತಂಡದ ಮಿಡ್‌ಫೀಲ್ಡ್‌ ವಿಭಾಗದ ಪ್ರಮುಖ ಆಟಗಾರ ಕೆಸುಕಿ ಹೊಂಡಾ ಅವರು ಅಂತರರಾಷ್ಟ್ರೀಯ ಫುಟ್‌ಬಾಲ್‌ ಬದುಕಿಗೆ ವಿದಾಯ ಹೇಳಿದ್ದಾರೆ.

ಸೋಮವಾರ ಬೆಲ್ಜಿಯಂ ತಂಡದ ವಿರುದ್ಧ ನಡೆದ ಪ್ರೀ ಕ್ವಾರ್ಟರ್‌ಫೈನಲ್‌ ಪಂದ್ಯದ ನಂತರ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಈ ಪಂದ್ಯದಲ್ಲಿ ಜಪಾನ್‌ ತಂಡವು 2–3ರಿಂದ ಬೆಲ್ಜಿಯಂ ತಂಡಕ್ಕೆ ಮಣಿದು ಟೂರ್ನಿಯಿಂದ ಹೊರಬಿದ್ದಿತ್ತು.

ಪಂದ್ಯದ ನಂತರ ಮಾತನಾಡಿದ ಹೊಂಡಾ, ‘ಈ ವಿಶ್ವಕಪ್‌ನಲ್ಲಿ ಜಪಾನ್‌ ತಂಡವು ಉತ್ತಮ ಸಾಮರ್ಥ್ಯ ತೋರಿದೆ. ಹದಿನಾರರ ಘಟ್ಟದ ಪಂದ್ಯದಲ್ಲೂ ನಾವು ಬಲಿಷ್ಠ ತಂಡಕ್ಕೆ ಪೈಪೋಟಿ ನೀಡಿದೇವು. ಭವಿಷ್ಯದಲ್ಲಿ ಜಪಾನ್‌ ತಂಡವು ಶ್ರೇಷ್ಠ ತಂಡವಾಗಿ ಬೆಳೆಯಬೇಕು’ ಎಂದು ಹೇಳಿದ್ದಾರೆ.

ADVERTISEMENT

‘ಇನ್ನು ಮುಂದೆ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ನಾನು ಆಡುವುದಿಲ್ಲ. ತಂಡದಲ್ಲಿ ಹಲವು ಯುವ ಆಟಗಾರರಿದ್ದಾರೆ. ಅವರೆಲ್ಲರ ಬಲದಿಂದ ಜಪಾನ್‌ ತಂಡವು ಫುಟ್‌ಬಾಲ್‌ ಜಗತ್ತಿನಲ್ಲಿ ಇತಿಹಾಸ ನಿರ್ಮಿಸುವ ಸಾಮರ್ಥ್ಯ ಹೊಂದಿದೆ’ ಎಂದೂ ಹೇಳಿದ್ದಾರೆ.

’ನನ್ನ ಸಾಮರ್ಥ್ಯ ಮೀರಿ ಆಡಿದ್ದೇನೆ. ಜಪಾನ್‌ ತಂಡವು ಕ್ವಾರ್ಟರ್‌ಫೈನಲ್‌ ಹಂತಕ್ಕೆ ತಲುಪಬೇಕು ಎಂಬ ಆಕಾಂಕ್ಷೆ ಇತ್ತು. ಆದರೆ, ನಿರ್ಣಾಯಕ ಪಂದ್ಯದಲ್ಲಿ ನಾವು ಸೋತೆವು. ಈ ಬಗ್ಗೆ ನನಗೆ ತೀವ್ರ ಬೇಸರವಿದೆ’ ಎಂದು ಅವರು ತಿಳಿಸಿದ್ದಾರೆ.

ಕೆಸುಕಿ ಅವರು ಪ್ರತಿಷ್ಠಿತ ಎ. ಸಿ. ಮಿಲಾನ್‌ ಕ್ಲಬ್‌ ಪರವಾಗಿ ಕೆಲಕಾಲ ಆಡಿದ್ದರು. ಮೂರು ವಿಶ್ವಕ‍ಪ್‌ಗಳಲ್ಲಿ ಆಡಿರುವ ಅವರು ಮಿಡ್‌ಫೀಲ್ಡ್‌, ರಕ್ಷಣಾ ಹಾಗೂ ವಿಂಗರ್‌ ವಿಭಾಗಗಳಲ್ಲಿ ಆಡುವ ಫುಟ್‌ಬಾಲ್‌ ಜಗತ್ತಿನ ಪ್ರತಿಭಾಶಾಲಿ ಆಟಗಾರ ಎಂದೇ ಹೆಗ್ಗಳಿಕೆ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.