ADVERTISEMENT

ತವರಿನ ಕ್ರೀಡಾ ಸಂಸ್ಕೃತಿಗೆ ಮಣಿಪುರ ದಿಗ್ಗಜರ ಖುಷಿ

ವಿಕ್ರಂ ಕಾಂತಿಕೆರೆ
Published 3 ಜನವರಿ 2021, 16:35 IST
Last Updated 3 ಜನವರಿ 2021, 16:35 IST
ಅಮರ್‌ಜೀತ್ ಸಿಂಗ್ ಕೈಯಾಮ್ –ಎಐಎಫ್‌ಎಫ್‌ ಚಿತ್ರ
ಅಮರ್‌ಜೀತ್ ಸಿಂಗ್ ಕೈಯಾಮ್ –ಎಐಎಫ್‌ಎಫ್‌ ಚಿತ್ರ   

ಪೂರ್ವಿಕರಿಂದಲೇ ನಮ್ಮಲ್ಲಿ ಕ್ರೀಡಾ ಸಂಸ್ಕೃತಿ ಬೆಳೆದಿದೆ. ಕ್ರೀಡಾಸ್ಫೂರ್ತಿ ನಮ್ಮ ರಕ್ತದಲ್ಲೇ ಸೇರಿಕೊಂಡಿದೆ ಎಂಬುದನ್ನು ರಾಜ್ಯದ ಪ್ರತಿಯೊಬ್ಬರೂ ನಂಬಿದ್ದಾರೆ. ಈ ಕ್ಷೇತ್ರದಲ್ಲಿ ಪ್ರತಿಭೆಗಳು ಬೆಳೆಯಲು ಇಂಥ ನಂಬಿಕೆಗಳೇ ಕಾರಣ..

ಭಾರತ ಮಹಿಳಾ ಫುಟ್‌ಬಾಲ್ ತಂಡದ ಮಿಡ್‌ಫೀಲ್ಡರ್ ಡಂಗ್ಮೆ ಗ್ರೇಸ್ ಈ ಮಾತನ್ನು ಆಡುವಾಗ ಭಾವುಕರಾಗಿದರು. ಮಣಿಪುರದ ಮೇಲಿನ ಅಭಿಮಾನ ಅವರ ಅವರಲ್ಲಿ ತುಂಬಿ ತುಳುಕಿತು. ಅವರ ಮಾತಿಗೆ ಯುವ ಫುಟ್‌ಬಾಲ್ ಆಟಗಾರ ಅಮರ್‌ಜೀತ್ ಸಿಂಗ್ ಕೈಯಾಮ್, ರಾಷ್ಟ್ರೀಯ ಮಹಿಳಾ ತಂಡದ ಬಾಲಾ ದೇವಿ ಮತ್ತು ಆಶಾಲತಾ ದೇವಿ ಕೂಡ ದನಿಗೂಡಿಸಿದರು. ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು ಮಣಿಪುರದ ಕ್ರೀಡಾಪಟುಗಳನ್ನೂ ಅಲ್ಲಿ ಕ್ರೀಡೆ ಬೆಳೆಯಲು ಕಾರಣರಾದವರನ್ನೂ ಅಭಿನಂದಿಸಿದರು.

‘ಮೂಲಸೌಲಭ್ಯ ಅಭಿವೃದ್ಧಿಗಾಗಿಯೇ ಕಾಯದೇ ಆಸಕ್ತಿಯಿಂದ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮಣಿಪುರದಲ್ಲಿ ಕಂಡುಬರುತ್ತಿದೆ. ಹೀಗಾಗಿಯೇ ಇಲ್ಲಿ ಅನೇಕ ಒಲಿಂಪಿಯನ್ಸ್ ಉದಯಿಸಿದರು. ಮಣಿಪುರದ ಜನರ ದೇಹರಚನೆಯೂ ಕ್ರೀಡೆಗೆ ಸೂಕ್ತವಾಗಿದೆ. ವೇಗ ಮತ್ತು ಯಾವುದೇ ಪರಿಸ್ಥಿತಿಗೆ ಹೊಂದಿಕೊಳ್ಳುವ ಗುಣ ಮಣಿಪುರದ ಕ್ರೀಡಾಪಟುಗಳಿಗೆ ಸಹಜವಾಗಿ ಬಂದಿದೆ. ಹೀಗಾಗಿ ಈ ರಾಜ್ಯವು ಕ್ರೀಡೆಯ ಶಕ್ತಿಕೇಂದ್ರವಾಗಿ ಬೆಳೆದಿದೆ’ ಎಂಬುದು ಡಂಗ್ಮೆ ಅವರ ಅನಿಸಿಕೆ.

ADVERTISEMENT

ಐ–ಲೀಗ್ ಟೂರ್ನಿಯಲ್ಲಿ ಬ್ಲೂ ಟೈಗರ್ಸ್ ತಂಡವನ್ನು ಪ್ರತಿನಿಧಿಸುವ ಮತ್ತು 2017ರಲ್ಲಿ ನಡೆದ 17 ವರ್ಷದೊಳಗಿನವರ ವಿಶ್ವಕಪ್‌ ಫುಟ್‌ಬಾಲ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಮಿಡ್‌ಫೀಲ್ಡರ್ ಅಮರ್‌ಜೀತ್ ಸಿಂಗ್ ಕೈಯಾಮ್ ಕೂಡ ತವರಿನ ಕ್ರೀಡಾಸಾಮರ್ಥ್ಯದ ಬಗ್ಗೆ ಅಭಿಮಾನದ ನುಡಿಗಳನ್ನಾಡಿದರು. ಫುಟ್‌ಬಾಲ್, ಹಾಕಿ, ಬಾಕ್ಸಿಂಗ್‌, ಕುಸ್ತಿಯಂಥ ಯಾವುದೇ ಕ್ರೀಡೆ ಇರಲಿ, ಮಣಿಪುರದ ಜನರು ಅದರಲ್ಲಿ ತನ್ಮಯದಿಂದ ಪಾಲ್ಗೊಳ್ಳುತ್ತಾರೆ, ವೀಕ್ಷಿಸುತ್ತಾರೆ, ಪ್ರೋತ್ಸಾಹಿಸುತ್ತಾರೆ. ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್, ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡದ ನಾಯಕತ್ವ ವಹಿಸಿದ್ದ ಸುಶೀಲಾ ಚಾನು ಮುಂತಾದವರು ನಮ್ಮ ರಾಜ್ಯದವರು ಎಂಬುದು ಅಭಿಮಾನದ ಸಂಗತಿ ಎಂದರು.

ರಾಷ್ಟ್ರೀಯ ಮಹಿಳಾ ತಂಡದ ಆಟಗಾರ್ತಿ ಬಾಲಾ ದೇವಿ ಮತ್ತು ಆಶಾಲತಾ ದೇವಿ ಅವರೂ ರಾಜ್ಯದ ಕ್ರೀಡಾಸಂಸ್ಕೃತಿಯನ್ನು ಮುಕ್ತಕಂಠದಿಂದ ಕೊಂಡಾಡಿದರು. ‘ನಾನು ಸಣ್ಣವಳಿದ್ದಾಗ ಹುಡುಗರ ಜೊತೆ ಫುಟ್‌ಬಾಲ್ ಆಡುತ್ತಿದ್ದೆ. ನನ್ನ ತಂದೆ ಇದಕ್ಕೆ ಯಾವ ರೀತಿಯ ಅಡ್ಡಿಯನ್ನೂ ಮಾಡಲಿಲ್ಲ. ಆದ್ದರಿಂದ ಬೆಳೆಯಲು ಸಾಧ್ಯವಾಯಿತು’ ಎಂದು ಬಾಲಾದೇವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.