ADVERTISEMENT

ಐಎಸ್‌ಎಲ್‌: ಸೋಮವಾರ ಹೈದರಾಬಾದ್‌ ಎಫ್‌ಸಿ–ಒಡಿಶಾ ಎಫ್‌ಸಿ ಪಂದ್ಯ

ನಿರಾಸೆ ಮರೆತು ಮುನ್ನುಗ್ಗುವ ವಿಶ್ವಾಸ

ಪಿಟಿಐ
Published 22 ನವೆಂಬರ್ 2020, 13:06 IST
Last Updated 22 ನವೆಂಬರ್ 2020, 13:06 IST
ಹೈದರಾಬಾದ್‌ ಎಫ್‌ಸಿ ಆಟಗಾರರ ತಾಲೀಮು–ಟ್ವಿಟರ್‌ ಚಿತ್ರ
ಹೈದರಾಬಾದ್‌ ಎಫ್‌ಸಿ ಆಟಗಾರರ ತಾಲೀಮು–ಟ್ವಿಟರ್‌ ಚಿತ್ರ   

ಬ್ಯಾಂಬೊಲಿಮ್‌, ಗೋವಾ: ಶುಭಾರಂಭದ ನಿರೀಕ್ಷೆಯಲ್ಲಿರುವ ಒಡಿಶಾ ಎಫ್‌ಸಿ ಹಾಗೂ ಹೈದರಾಬಾದ್ ಎಫ್‌ಸಿ ತಂಡಗಳುಇಂಡಿಯನ್‌ ಸೂಪರ್‌ ಲೀಗ್‌ ಟೂರ್ನಿಯಲ್ಲಿ ಸೋಮವಾರ ಮುಖಾಮುಖಿಯಾಗಲಿವೆ.

ಉಭಯ ತಂಡಗಳು ಹಿಂದಿನ ಋತುವಿನಲ್ಲಿ ಅನುಭವಿಸಿದ ನಿರಾಸೆಯ ಕಹಿಯನ್ನು ಮರೆತು ಮುನ್ನುಗ್ಗುವ ವಿಶ್ವಾಸದಲ್ಲಿವೆ. ಕಳೆದ ಆವೃತ್ತಿಯಲ್ಲಿ ಹೈದರಾಬಾದ್‌ 12 ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. 39 ಗೋಲುಗಳನ್ನು ಎದುರಾಳಿಗಳಿಗೆ ಬಿಟ್ಟುಕೊಟ್ಟಿತ್ತು. ಒಡಿಶಾ ಕೂಡ ಅಷ್ಟೇನೂ ಉತ್ತಮ ಆಟವಾಡಿರಲಿಲ್ಲ. 31 ಗೋಲುಗಳನ್ನು ಬಿಟ್ಟುಕೊಟ್ಟಿತ್ತು.

ಆದರೆ ಈ ಅಂಕಿ ಅಂಶ ಲೆಕ್ಕಕ್ಕೆ ಬರುವುದಿಲ್ಲ ಎಂಬುದು ಒಡಿಶಾ ಎಫ್‌ಸಿ ಕೋಚ್‌ ಸ್ಟುವರ್ಟ್‌ ಬ್ಯಾಕ್ಸ್‌ಟರ್‌ ಅಂಬೋಣ.

ADVERTISEMENT

‘ಆ ಇತಿಹಾಸ ಯಾರ ಉಪಯೋಗಕ್ಕೂ ಬರುವುದಿಲ್ಲ. ಟೂರ್ನಿಯಲ್ಲಿ ಎರಡು ಹೊಸ ತಂಡಗಳು ಸೇರ್ಪಡೆಯಾಗಿವೆ. ಹೊಸ ಆಟಗಾರರು ಎರಡೂ ತಂಡಗಳಲ್ಲೂ ಇದ್ದಾರೆ. ಭಿನ್ನ ರೂಪದಲ್ಲಿರುವ ಹೈದರಾಬಾದ್‌ಅನ್ನು ನಾವು ಎದುರಿಸಲಿದ್ದೇವೆ‘ ಎಂದಿದ್ದಾರೆ.

‘ಬ್ರೆಜಿಲ್ ಸ್ಟ್ರೈಕರ್ ಡಿಗೊ ಮೌರಿಸಿಯೊ ಹಾಗೂ ಈ ಮೊದಲು ಹೈದರಾಬಾದ್‌ ತಂಡದಲ್ಲಿದ್ದ ಮಾರ್ಸೆಲಿನೊ ಅವರನ್ನು ತಂಡಕ್ಕೆ ಸೇರಿಕೊಂಡಿದ್ದರಿಂದ ನಮ್ಮ ಬಲ ವೃದ್ಧಿಸಿದೆ‘ ಎಂದು ಬ್ಯಾಕ್ಸ್‌ಟರ್‌ ಹೇಳಿದ್ದಾರೆ.

ಹೋದ ಆವೃತ್ತಿಯಲ್ಲಿ ಹೈದರಾಬಾದ್‌ ತಂಡ ಕೊನೆಯ ಸ್ಥಾನ ಪಡೆದಿತ್ತು. ಕೇವಲ ಎರಡು ಪಂದ್ಯಗಳಲ್ಲಿ ಗೆದ್ದಿತ್ತು. ನೂತನ ಕೋಚ್‌ ಮ್ಯಾನ್ಯುಯೆಲ್‌ ಮಾರ್ಕ್ವೆಜ್‌ ರೋಕಾ ನೇತೃತ್ವದಲ್ಲಿ ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲು ಆ ತಂಡ ಸಜ್ಜಾಗಿದೆ.

‘ಯುವ ಆಟಗಾರರಾದ ರೋಹಿತ್ ದನು, ಲಿಸ್ಟನ್ ಕೊಲ್ಯಾಸೊ ಹಾಗೂ ಆಕಾಶ್‌ ಮಿಶ್ರಾ ಉತ್ತಮ ಆಟವಾಡಬಲ್ಲರು. ಭವಿಷ್ಯದ ದಿನಗಳಲ್ಲಿ ಹೈದರಾಬಾದ್‌ ತಂಡಕ್ಕೆ ದೊಡ್ಡ ಕೊಡುಗೆ ನೀಡಬಲ್ಲರು‘ ಎಂದು ರೋಕಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.