ADVERTISEMENT

FIFA World Cup: ಬ್ರೆಜಿಲ್‌ಗೆ ಗಾಯದ ಸಮಸ್ಯೆ

ಸ್ವಿಟ್ಜರ್‌ಲೆಂಡ್‌ ವಿರುದ್ಧ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 14:40 IST
Last Updated 27 ನವೆಂಬರ್ 2022, 14:40 IST
   

ಅಲ್‌ ರಯ್ಯಾನ್‌, ಕತಾರ್‌ : ಐದು ಬಾರಿಯ ಚಾಂಪಿಯನ್‌ ಬ್ರೆಜಿಲ್‌ ತಂಡ ವಿಶ್ವಕಪ್‌ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಸೋಮವಾರ ಸ್ವಿಟ್ಜರ್‌ಲೆಂಡ್‌ ವಿರುದ್ಧ ಪೈಪೋಟಿ ನಡೆಸಲಿದೆ.

ಪ್ರಮುಖ ಆಟಗಾರರು ಗಾಯಗೊಂಡಿರುವುದರಿಂದ ಹೊಸಬರಲ್ಲಿ ಯಾರಿಗೆ ಸ್ಥಾನ ನೀಡಬೇಕು ಎಂಬುದು ಕೋಚ್‌ ಟೀಟೆ ಅವರ ಚಿಂತೆಗೆ ಕಾರಣವಾಗಿದೆ. ಸರ್ಬಿಯಾ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದ ಸ್ಟ್ರೈಕರ್‌ ನೇಮರ್‌ ಮತ್ತು ಫುಲ್‌ಬ್ಯಾಕ್‌ ಆಟಗಾರ ಡ್ಯಾನಿಲೊ ಈ ಪಂದ್ಯದಲ್ಲಿ ಆಡುತ್ತಿಲ್ಲ.

ಮಿಡ್‌ಫೀಲ್ಡರ್‌ ಲುಕಾಸ್‌ ಪಕೇಟಾ ಅವರೂ ಫಿಟ್‌ನೆಸ್‌ ಸಮಸ್ಯೆ ಎದುರಿಸುತ್ತಿದ್ದು, ಸೋಮವಾರ ಕಣಕ್ಕಿಳಿಯುವ ಸಾಧ್ಯತೆ ತೀರಾ ಕಡಿಮೆ. ಟೀಟೆ ಅವರು ತಂಡದ ಆಯ್ಕೆಯ ಬಗ್ಗೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

ADVERTISEMENT

ಬ್ರೆಜಿಲ್‌ ತಂಡ ಶನಿವಾರ ಅಲ್‌ ಅರಬಿ ಕ್ರೀಡಾಂಗಣದಲ್ಲಿ ತರಬೇತಿ ನಡೆಸಿದೆ. ಈ ವೇಳೆ ಮಾಧ್ಯಮದವರಿಗೆ ಪ್ರವೇಶ ನೀಡಿಲ್ಲ. ಪಕೇಟಾ ತರಬೇತಿ ಅವಧಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿದರು ಎಂದು ಮೂಲಗಳು ಹೇಳಿವೆ.

ನೇಮರ್‌ ಅನುಪಸ್ಥಿತಿಯಲ್ಲಿ ಪಕೇಟಾ ಅವರನ್ನು ಆರಂಭದಲ್ಲೇ ಕಣಕ್ಕಿಳಿಸಲು ಕೋಚ್‌ ಬಯಸಿದ್ದರು. ಇದೀಗ ಅವರೂ ಅಲಭ್ಯರಾದರೆ, ರಿಯಲ್‌ ಮ್ಯಾಡ್ರಿಡ್‌ಗೆ ಆಡುವ ಯುವ ಆಟಗಾರ ರಾಡ್ರಿಗೊ ಆರಂಭಿಕ ಇಲೆವೆನ್‌ನಲ್ಲಿ ಕಾಣಿಸಿಕೊಳ್ಳಬಹುದು. ವಿನೀಸಿಯಸ್‌ ಜೂನಿಯರ್‌, ರಿಚಾರ್ಲಿಸನ್‌ ಮತ್ತು ರಫೀನಿಯಾ ಜತೆ ರಾಡ್ರಿಗೊ ಅವರು ಆಕ್ರಮಣ ವಿಭಾಗದಲ್ಲಿ ಆಡಬಹುದು.

ಮಿಡ್‌ಫೀಲ್ಡ್‌ಗೆ ಬಲ ತುಂಬಲ ಕ್ಯಾಸೆಮಿರೊ ಅವರನ್ನು ಆಡಿಸುವ ಸಾಧ್ಯತೆಯೂ ಇದೆ. ಡ್ಯಾನಿಲೊ ಸ್ಥಾನದಲ್ಲಿ ಸೆಂಟರ್‌ ಬ್ಯಾಕ್‌ ಆಟಗಾರ ಎಡೆರ್‌ ಮಿಲಿಟಾವೊ ಅವಕಾಶ ಪಡೆಯಬಹುದು ಎಂದು ಮೂಲಗಳು ಹೇಳಿವೆ.

‘ಆರಂಭಿಕ ಇಲೆವೆನ್‌ನಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬುದನ್ನು ಈಗಾಗಲೇ ನಿರ್ಧರಿಸಿದ್ದೇನೆ. ಪಂದ್ಯ ಆರಂಭವಾಗುವವರೆಗೆ ಅದನ್ನು ಬಹಿರಂಗಪಡಿಸುವುದಿಲ್ಲ’ ಎಂದು ಬ್ರೆಜಿಲ್‌ ಕೋಚ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.