ADVERTISEMENT

ಸೋಲಿನ ನಿರಾಸೆ: ಗಲಾಟೆ ಮಾಡಿದ ಫುಟ್‌ಬಾಲ್ ಅಭಿಮಾನಿಗಳ ಬಂಧನ

ಆರನೇ ಬಾರಿ ಪ್ರಶಸ್ತಿ ಗೆದ್ದ ಮ್ಯೂನಿಚ್

ಏಜೆನ್ಸೀಸ್
Published 24 ಆಗಸ್ಟ್ 2020, 12:11 IST
Last Updated 24 ಆಗಸ್ಟ್ 2020, 12:11 IST
ಬಯೇನ್ ಮ್ಯೂನಿಚ್ ತಂಡದ ಕಿಂಗ್ಸ್‌ಲಿ ಕೋಮಾನ್ ಪ್ರಶಸ್ತಿ ಎತ್ತಿ ಹಿಡಿದು ಸಹ ಆಟಗಾರರೊಂದಿಗೆ ಸಂಭ್ರಮಿಸಿದರು –ಪಿಟಿಐ ಚಿತ್ರ
ಬಯೇನ್ ಮ್ಯೂನಿಚ್ ತಂಡದ ಕಿಂಗ್ಸ್‌ಲಿ ಕೋಮಾನ್ ಪ್ರಶಸ್ತಿ ಎತ್ತಿ ಹಿಡಿದು ಸಹ ಆಟಗಾರರೊಂದಿಗೆ ಸಂಭ್ರಮಿಸಿದರು –ಪಿಟಿಐ ಚಿತ್ರ   

ಪ್ಯಾರಿಸ್/ಲಿಸ್ಬನ್: ಸೋಲಿನಿಂದ ಬೇಸರಗೊಂಡು ಅಧಿಕಾರಿಗಳ ಜೊತೆ ಜಗಳಕ್ಕಿಳಿದು ಕಾರುಗಳಿಗೆ ಬೆಂಕಿ ಹಚ್ಚಿದ ಪ್ಯಾರಿಸ್ ಸೇಂಟ್ ಜರ್ಮನ್ (ಪಿಎಸ್‌ಜಿ) ತಂಡದ 148 ಮಂದಿ ಅಭಿಮಾನಿಗಳನ್ನು ಪ್ಯಾರಿಸ್ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ.

ಪೋರ್ಚುಗಲ್‌ನಲ್ಲಿ ಭಾನುವಾರ ರಾತ್ರಿ ನಡೆದ ಚಾಂಪಿಯನ್ಸ್ ಲೀಗ್ ಫುಟ್‌ಬಾಲ್ ಟೂರ್ನಿಯ ಫೈನಲ್‌ನಲ್ಲಿ ಬಯೇನ್ ಮ್ಯೂನಿಚ್ ತಂಡ 1–0 ಅಂತರದಲ್ಲಿ ಪಿಎಸ್‌ಜಿಯನ್ನು ಮಣಿಸಿತ್ತು. ಉದ್ರಿಕ್ತ ಅಭಿಮಾನಿಗಳು ಬೀದಿಗೆ ಇಳಿದು ಗಲಾಟೆ ಮಾಡಿದ್ದರು. ಮಾಸ್ಕ್ ಧರಿಸಿದೆ ಹೊರಗೆ ಬಂದದ್ದಕ್ಕೆ ನೂರಾರು ಮಂದಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಕೂಡ ಪೊಲೀಸರು ಸೋಮವಾರ ತಿಳಿಸಿದ್ದಾರೆ.

‘ಗಲಾಟೆಯಲ್ಲಿ 16 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಫುಟ್‌ಬಾಲ್ ಪ್ರಿಯರ ಪೈಕಿಎಷ್ಟು ಮಂದಿಗೆ ಗಾಯಗಳಾಗಿವೆ ಎಂಬುದರ ಮಾಹಿತಿ ಸಿಗಲಿಲ್ಲ ಎಂದು ಸಚಿವ ಜೆರಾಲ್ಡ್ ಡರ್ಮಾನಿನ್ ಟ್ವೀಟ್ ಮಾಡಿದ್ದಾರೆ.

ADVERTISEMENT

ಪಂದ್ಯದ ನಂತರ ಬೀದಿಯಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ಗೆದ್ದ ತಂಡದ ಅಭಿಮಾನಿಗಳು ಪಟಾಕಿ ಸಿಡಿಸಿ ಕುಣಿದಾಡುತ್ತ ಸಂಭ್ರಮಿಸಿದರೆ ಸೋತ ತಂಡದವರು ಅಲ್ಲಲ್ಲಿ ಬೆಂಕಿ ಹಚ್ಚಿದರು. ಪೊಲೀಸರು ಮಾಸ್ಕ್ ಧರಿಸದವರನ್ನು ಮತ್ತು ಅಂತರ ಕಾಯ್ದುಕೊಳ್ಳದವರನ್ನು ಗುಂಪಿನಿಂದ ಚದುರಿಸಿದರು. ಬಾರ್ ಮತ್ತು ಹೋಟೆಲ್‌ಗಳಲ್ಲಿ ಸೇರಿದ್ದ ಜನರನ್ನು ನಿಯಂತ್ರಿಸಲು ಅಶ್ರುವಾಯು ಸಿಡಿಸಿದರು. ಪ್ಯಾರಿಸ್‌ನ ಕ್ರೀಡಾಂಗಣವೊಂದರ ಹೊರಗೆ ಎರಡು ಬೃಹತ್ ಪರದೆಗಳಲ್ಲಿ ಪಂದ್ಯದ ನೇರ ಪ್ರಸಾರ ಮಾಡಲಾಗಿತ್ತು. ಅಂತರ ಕಾಯ್ದುಕೊಳ್ಳುವುದಕ್ಕಾಗಿ ಕೇವಲ ಐದು ಸಾವಿರ ಮಂದಿಗೆ ಪ್ರವೇಶ ಕಲ್ಪಿಸಲಾಗಿತ್ತು.

ಆರನೇ ಬಾರಿ ಪ್ರಶಸ್ತಿ ಗೆದ್ದ ಮ್ಯೂನಿಚ್

ಕಿಂಗ್ಸ್‌ಲಿ ಕೋಮಾನ್ ಗಳಿಸಿದ ಏಕೈಕ ಗೋಲಿನಿಂದ ಪಿಎಸ್‌ಜಿ ತಂಡವನ್ನು ಮಣಿಸಿದ ಬಯೇನ್ ಮ್ಯೂನಿಚ್ ಆರನೇ ಬಾರಿ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಪೋರ್ಚುಗಲ್‌ನ ಲಿಸ್ಬನ್‌ನಲ್ಲಿರುವ ಎಸ್ಟಾಡಿಯಾ ಡಿ ಲೂಜ್ ಕ್ರೀಡಾಂಗಣದಲ್ಲಿ ನಡೆದ ಪೈನಲ್ ಪಂದ್ಯ ಪ್ರತಿ ಕ್ಷಣವೂ ರೋಚಕವಾಗಿತ್ತು. 59ನೇ ನಿಮಿಷದಲ್ಲಿ ಜೋಶುವಾ ಕಿಮಿಚ್ ನೀಡಿದ ಕ್ರಾಸ್‌ನಲ್ಲಿ ಚೆಂಡನ್ನು ಹೆಡ್ ಮಾಡಿದ ಕೋಮಾನ್ ಅವರು ಮೋಹಕವಾಗಿ ಗೋಲು ಗಳಿಸಿದರು. ಈ ಮುನ್ನಡೆಯನ್ನು ಕೊನೆಯ ವರೆಗೂ ಉಳಿಸಿಕೊಂಡ ತಂಡ ಗೆಲುವಿನ ನಗೆ ಸೂಸಿತು. ತಂಡ ಈಗಾಗಲೇ ಬಂಡೆಸ್‌ಲೀಗಾ ಮತ್ತು ಜರ್ಮನ್ ಕಪ್ ಪ್ರಶಸ್ತಿ ಗಳಿಸಿದೆ.

24 ವರ್ಷದ ಕೋಮಾನ್ ಪ್ಯಾರಿಸ್‌ನಲ್ಲಿ ಜನಿಸಿದವರು. ಆರಂಭದಲ್ಲಿ ಪಿಎಸ್‌ಜಿ ತಂಡದಲ್ಲಿದ್ದ ಅವರು 2014ರಲ್ಲಿ ಯುವೆಂಟಸ್ ಪರ ಆಡಲು ತಂಡವನ್ನು ತೊರೆದಿದ್ದರು. ನಂತರ ಮ್ಯೂನಿಚ್ ತಂಡವನ್ನು ಸೇರಿದ್ದರು. ಲಿಯೋನ್ ಎದುರು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ ಫೈನಲ್‌ ಪಂದ್ಯದಲ್ಲಿ ಭರವಸೆ ಇರಿಸಿ ಕಣಕ್ಕೆ ಇಳಿಸಲಾಗಿತ್ತು. ಅವರಿಗಾಗಿ ಇವಾನ್ ಪೆರಿಸಿಕ್‌ಗೆ ವಿಶ್ರಾಂತಿ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.