ADVERTISEMENT

ಇರಾನ್‌– ಅಮೆರಿಕ ‍ಪಂದ್ಯ ಇಂದು

ರಾಜಕೀಯ ಬದ್ಧವೈರಿಗಳ ನಡುವಣ ಹಣಾಹಣಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 14:34 IST
Last Updated 28 ನವೆಂಬರ್ 2022, 14:34 IST
ಅಮೆರಿಕ ತಂಡದ ಜೊವಾನಿ ರೀನಾ (ಎಡ) ಮತ್ತು ಕ್ರಿಸ್ಟಿಯನ್‌ ಪುಲಿಸಿಚ್‌ ಅವರು ಅಭ್ಯಾಸ ನಡೆಸಿದರು –ಎಎಫ್‌ಪಿ ಚಿತ್ರ
ಅಮೆರಿಕ ತಂಡದ ಜೊವಾನಿ ರೀನಾ (ಎಡ) ಮತ್ತು ಕ್ರಿಸ್ಟಿಯನ್‌ ಪುಲಿಸಿಚ್‌ ಅವರು ಅಭ್ಯಾಸ ನಡೆಸಿದರು –ಎಎಫ್‌ಪಿ ಚಿತ್ರ   

ದೋಹಾ (ಎಎಫ್‌ಪಿ): ಅಮೆರಿಕ ಮತ್ತು ಇರಾನ್‌ ನಡುವಿನ ರಾಜಕೀಯ ವೈರತ್ವ ಏನೆಂಬುದು ಇಡೀ ಜಗತ್ತಿಗೆ ತಿಳಿದಿದೆ. ಈ ಎರಡು ದೇಶಗಳ ತಂಡಗಳು ವಿಶ್ವಕಪ್‌ ಟೂರ್ನಿಯಲ್ಲಿ ಮಂಗಳವಾರ ಪರಸ್ಪರ ಪೈಪೋಟಿ ನಡೆಸಲಿದ್ದು, ಫುಟ್‌ಬಾಲ್‌ ಪ್ರೇಮಿಗಳಲ್ಲಿ ಕುತೂಹಲ ಗರಿಗೆದರಿದೆ.

ಅಲ್‌ ತುಮಾಮಾ ಕ್ರೀಡಾಂಗಣದಲ್ಲಿ ನಡೆಯುವ ‘ಬಿ’ ಗುಂಪಿನ ಪಂದ್ಯದಲ್ಲಿ ತುರುಸಿನ ಪೈಪೋಟಿ ನಿರೀಕ್ಷಿಸಲಾಗಿದೆ. ಉಭಯ ತಂಡಗಳಿಗೂ ಇದು ಕೊನೆಯ ಪಂದ್ಯವಾಗಿದ್ದು, ಗೆಲುವು ಪಡೆಯುವವರು 16ರ ಘಟ್ಟ ಪ್ರವೇಶಿಸಲಿದ್ದಾರೆ. ಸೋಲು ಅನುಭವಿಸುವ ತಂಡ ಟೂರ್ನಿಯಿಂದ ಹೊರಬೀಳಲಿದೆ.

ನಾಲ್ಕು ಪಾಯಿಂಟ್ಸ್‌ ಹೊಂದಿರುವ ಇಂಗ್ಲೆಂಡ್‌ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಮೂರು ಪಾಯಿಂಟ್ಸ್‌ಗಳೊಂದಿಗೆ ಇರಾನ್‌ ಎರಡನೇ ಸ್ಥಾನದಲ್ಲಿದ್ದರೆ, ಎರಡು ಪಾಯಿಂಟ್ಸ್‌ ಗಳಿಸಿರುವ ಅಮೆರಿಕ ಬಳಿಕದ ಸ್ಥಾನದಲ್ಲಿದೆ.

ADVERTISEMENT

ಇರಾನ್‌ ಮತ್ತು ಅಮೆರಿಕ ನಡುವಿನ ಸೈದ್ಧಾಂತಿಕ ಭಿನ್ನತೆ, ರಾಜಕೀಯ ಹಗೆತನಕ್ಕೆ ನಾಲ್ಕು ದಶಕಗಳ ಸುದೀರ್ಘ ಇತಿಹಾಸವಿದೆ. 1979 ರಲ್ಲಿ ಇರಾನ್‌ನಲ್ಲಿ ನಡೆದ ಇಸ್ಲಾಮಿಕ್‌ ಕ್ರಾಂತಿಯ ಬಳಿಕ ಅಮೆರಿಕವು ಆ ದೇಶದ ಜತೆಗಿನ ಎಲ್ಲ ರೀತಿಯ ರಾಜತಾಂತ್ರಿಕ ಸಂಬಂಧ ಕಡಿದುಕೊಂಡಿದೆ.

ಆದರೆ ಈ ಪಂದ್ಯಕ್ಕೆ ರಾಜಕೀಯ ಬಣ್ಣ ಬಳಿಯಬಾರದು ಎಂಬುದು ಅಮೆರಿಕ ತಂಡದ ಕೋಚ್‌ ಗ್ರೆಗ್‌ ಬೆರ್‌ಹಾಲ್ಟರ್‌ ಅವರ ಹೇಳಿಕೆ. ‘ಎರಡೂ ತಂಡಗಳು ನಾಕೌಟ್‌ ಹಂತ ಪ್ರವೇಶಿಸುವ ಗುರಿ ಹೊಂದಿರುವುರಿಂದ ಈ ಪಂದ್ಯದಲ್ಲಿ ತುರುಸಿನ ಪೈಪೋಟಿ ನಡೆಯಲಿದೆಯೇ ಹೊರತು, ರಾಜಕೀಯ ಅಥವಾ ಉಭಯ ದೇಶಗಳ ನಡುವಿನ ಸಂಬಂಧ ಪಂದ್ಯದ ಕಾವು ಹೆಚ್ಚಲು ಕಾರಣವಾಗುವುದಿಲ್ಲ’ ಎಂದಿದ್ದಾರೆ.

‘ನಾವೆಲ್ಲರೂ ಫುಟ್‌ಬಾಲ್‌ ಆಟಗಾರರಾಗಿದ್ದು, ಇಲ್ಲಿ ಆಟವಾಡಲು ಬಂದಿದ್ದೇವೆ. ಅವರು ಕೂಡಾ ಇಲ್ಲಿ ಆಟವಾಡಲು ಬಂದಿದ್ದಾರೆ’ ಎಂದು ನುಡಿದಿದ್ದಾರೆ.

ಇಂದಿನಿಂದ ಕೊನೆಯ ಸುತ್ತಿನ ಹಣಾಹಣಿ: ವಿಶ್ವಕಪ್‌ ಟೂರ್ನಿಯ ಲೀಗ್‌ ಹಂತದ ಕೊನೆಯ ಸುತ್ತಿನ ಪಂದ್ಯಗಳು ಇಂದಿನಿಂದ ನಡೆಯಲಿವೆ. ಆತಿಥೇಯ ಕತಾರ್‌ ತಂಡ ಪ್ರಬಲ ನೆದರ್ಲೆಂಡ್ಸ್‌ ವಿರುದ್ದ ಪೈಪೋಟಿ ನಡೆಸಲಿದೆ. ಇತರ ಪಂದ್ಯಗಳಲ್ಲಿ ವೇಲ್ಸ್‌– ಇಂಗ್ಲೆಂಡ್‌ ಮತ್ತು ಈಕ್ವೆಡಾರ್– ಸೆನೆಗಲ್‌ ಎದುರಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.