ಆಕ್ಲೆಂಡ್: ನಾರ್ವೆ ಮತ್ತು ಸ್ವಿಟ್ಜರ್ಲೆಂಡ್ ತಂಡಗಳು ಮಹಿಳಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ 16ರ ಘಟ್ಟ ಪ್ರವೇಶಿಸಿದರೆ, ಆತಿಥೇಯ ನ್ಯೂಜಿಲೆಂಡ್ ಲೀಗ್ ಹಂತದಲ್ಲೇ ಹೊರಬಿತ್ತು.
ಭಾನುವಾರ ನಡೆದ ‘ಎ’ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ನಾರ್ವೆ 6–0 ಗೋಲುಗಳಿಂದ ಫಿಲಿಪ್ಪೀನ್ಸ್ ತಂಡವನ್ನು ಮಣಿಸಿತು. ಸ್ವಿಟ್ಜರ್ಲೆಂಡ್ ತಂಡ ನ್ಯೂಜಿಲೆಂಡ್ ಜತೆ ಗೋಲು ರಹಿತ ಡ್ರಾ ಸಾಧಿಸಿತು.
ಮೂರು ಪಂದ್ಯಗಳಿಂದ ಐದು ಪಾಯಿಂಟ್ಸ್ ಗಳಿಸಿದ ಸ್ವಿಟ್ಜರ್ಲೆಂಡ್, ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ನಾಕೌತ್ ಹಂತ ಪ್ರವೇಶಿಸಿತು. ನಾರ್ವೆ ಮತ್ತು ನ್ಯೂಜಿಲೆಂಡ್ ತಂಡಗಳು ತಲಾ ನಾಲ್ಕು ಪಾಯಿಂಟ್ಸ್ ಗಳಿಸಿದವು. ಉತ್ತಮ ಗೋಲು ವ್ಯತ್ಯಾಸದಲ್ಲಿ ನಾರ್ವೆ ಮುಂದಿನ ಹಂತ ಪ್ರವೇಶಿಸಿದರೆ, ಆತಿಥೇಯರ ಹೋರಾಟಕ್ಕೆ ತೆರೆಬಿತ್ತು. ಮೂರು ಪಾಯಿಂಟ್ಸ್ ಗಳಿಸಿದ ಫಿಲಿಪ್ಪೀನ್ಸ್ ಕೂಡಾ ನಾಕೌಟ್ ಪ್ರವೇಶಿಸಲು ವಿಫಲವಾಯಿತು.
16ರ ಘಟ್ಟ ಪ್ರವೇಶಿಸಲು ದೊಡ್ಡ ಅಂತರದ ಗೆಲುವು ಅಗತ್ಯವಿದ್ದ ಕಾರಣ ನಾರ್ವೆ ಆಕ್ರಮಣಕಾರಿಯಾಗಿ ಆಡಿತು. ಸೋಫಿ ರೋಮನ್ ಹಾಗ್ ( 6, 17 ಮತ್ತು 90+5 ನೇ ನಿ.) ಅವರು ಹ್ಯಾಟ್ರಿಕ್ ಗಳಿಸಿ ಮಿಂಚಿದರು. ಕರೋಲಿನ್ ಗ್ರಹಾಂ ಹ್ಯಾನ್ಸೆನ್ (31) ಮತ್ತು ಗ್ಯುರೊ ರೀಟೆನ್ (53) ತಲಾ ಒಂದು ಗೋಲು ಗಳಿಸಿದರೆ, ಮತ್ತೊಂದು ಗೋಲು ‘ಉಡುಗೊರೆ’ ರೂಪದಲ್ಲಿ ಬಂತು.
ಜರ್ಮನಿಗೆ ಆಘಾತ: ಭಾನುವಾರ ನಡೆದ ‘ಎಚ್’ ಗುಂಪಿನ ಪಂದ್ಯದಲ್ಲಿ ಕೊಲಂಬಿಯಾ 2–1 ಗೋಲುಗಳಿಂದ ಜರ್ಮನಿಗೆ ಆಘಾತ ನೀಡಿತು. ಲಿಂಡಾ ಕೈಸೆಡೊ 52ನೇ ನಿಮಿಷದಲ್ಲಿ ಕೊಲಂಬಿಯಾಕ್ಕೆ ಮುನ್ನಡೆ ತಂದಿತ್ತರೆ, ಜರ್ಮನಿ ತಂಡದ ನಾಯಕಿ ಅಲೆಕ್ಸಾಂಡ್ರಾ ಪಾಪ್ ಅವರು 89ನೇ ನಿಮಿಷದಲ್ಲಿ ಗೋಲು ಗಳಿಸಿ ಪಂದ್ಯವನ್ನು ಸಮಸ್ಥಿತಿಗೆ ತಂದರು. ಆದರೆ ಪಂದ್ಯ ಕೊನೆಗೊಳ್ಳಲು ಕೆಲವೇ ಸೆಕೆಂಡುಗಳಿರುವಾಗ ಮನುಯೇಲಾ ವನೇಗಾಸ್ (90+7ನೇ ನಿ.) ಅವರು ಗೋಲು ಗಳಿಸಿ ಕೊಲಂಬಿಯಾ ತಂಡಕ್ಕೆ ರೋಚಕ ಜಯ ತಂದಿತ್ತರು.
ಇದೇ ಗುಂಪಿನ ಇನ್ನೊಂದು ಪಂದ್ಯದಲ್ಲಿ ಮೊರೊಕ್ಕೊ 1–0 ಯಿಂದ ದಕ್ಷಿಣ ಕೊರಿಯಾ ವಿರುದ್ಧ ಗೆದ್ದಿತು. ಆರು ಪಾಯಿಂಟ್ಸ್‌ಗಳೊಂದಿಗೆ ಕೊಲಂಬಿಯಾ ಅಗ್ರಸ್ಥಾನದಲ್ಲಿದ್ದರೆ, ಜರ್ಮನಿ ಮತ್ತು ಮೊರೊಕ್ಕೊ ತಲಾ ಮೂರು ಪಾಯಿಂಟ್ಸ್ ಹೊಂದಿವೆ. ಲೀಗ್‌ನ ಅಂತಿಮ ಪಂದ್ಯದಲ್ಲಿ ಜರ್ಮನಿ–ದಕ್ಷಿಣ ಕೊರಿಯಾ ಮತ್ತು ಕೊಲಂಬಿಯಾ– ಮೊರೊಕ್ಕೊ ಎದುರಾಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.