ADVERTISEMENT

ರಾಜ್ಯ ಮಹಿಳಾ ಫುಟ್‌ಬಾಲ್ ಲೀಗ್: ರೆಬೆಲ್ಸ್‌, ಯುನೈಟೆಡ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 16:05 IST
Last Updated 22 ಫೆಬ್ರುವರಿ 2021, 16:05 IST
ಫುಟ್‌ಬಾಲ್‌
ಫುಟ್‌ಬಾಲ್‌   

ಬೆಂಗಳೂರು: ನಿಸೀಲಿಯ ಮಾಜೋ ಗಳಿಸಿದ ಹ್ಯಾಟ್ರಿಕ್ ಗೋಲುಗಳ ಬಲದಿಂದ ರೆಬೆಲ್ಸ್ ವಿಮೆನ್ಸ್ ಎಫ್‌ಸಿ ತಂಡ ರಾಜ್ಯ ಫುಟ್‌ಬಾಲ್ ಸಂಸ್ಥೆ ಆಯೋಜಿಸಿರುವ ಸೂಪರ್ ಡಿವಿಷನ್ ತಂಡಗಳ ಮಹಿಳಾ ಲೀಗ್‌ನಲ್ಲಿ ಸೋಮವಾರ ಭರ್ಜರಿ ಜಯ ಗಳಿಸಿತು.

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರೆಬೆಲ್ಸ್‌ ಏಕಪಕ್ಷೀಯವಾದ ಏಳು ಗೋಲುಗಳಿಂದ ಬೆಂಗಳೂರು ಸಾಕರ್ ಗ್ಯಾಲಕ್ಸಿ ತಂಡವನ್ನು ಮಣಿಸಿತು. ವಂದಶೀಶ ಮರ್ವೆ ಐದನೇ ನಿಮಿಷದಲ್ಲಿ ತಂದುಕೊಟ್ಟ ಗೋಲಿನ ಬಲದಿಂದ ಮುನ್ನಡೆದ ರೆಬೆಲ್ಸ್‌ 90+1ನೇ ನಿಮಿಷದಲ್ಲಿ ಅರ್ಚನ ಗಳಿಸಿದ ಗೋಲಿನ ವರೆಗೂ ಎದುರಾಳಿಗಳನ್ನು ಕಾಡಿತು. ನಿಸೀಲಿಯ 29, 50 ಮತ್ತು 68ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ವಂದಶೀಶ 56ನೇ ನಿಮಿಷದಲ್ಲಿ ತಮ್ಮ ಎರಡನೇ ಗೋಲು ಗಳಿಸಿದರು. ನಮಿತಾ ಶ್ರೀಪಾದ್ 60ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು.

ಮಾತೃ ಪ್ರತಿಷ್ಠಾನದ ಎದುರಿನ ಪಂದ್ಯದಲ್ಲಿ ಬೆಂಗಳೂರು ಯುನೈಟೆಡ್ ಎಫ್‌ಸಿ 2–1 ಅಂತರದಲ್ಲಿ ಜಯ ಗಳಿಸಿತು.ಯುನೈಟೆಡ್ ಪರ ಪೂರ್ಣಿಮಾ ಸೇಠ್‌ (67 ಮತ್ತು 71ನೇ ನಿ) ಹಾಗೂ ಮಾತೃ ಪ್ರತಿಷ್ಠಾನಕ್ಕಾಗಿ ಜ್ಯೋತಿ (47ನೇ ನಿ) ಗೋಲು ಗಳಿಸಿದರು.

ADVERTISEMENT

ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಕಿಕ್‌ಸ್ಟಾರ್ಟ್ ಎಫ್‌ಸಿ ಮತ್ತು ಬೆಂಗಳೂರು ಬ್ರೇವ್ಸ್‌, 11 ಗಂಟೆಗೆ ಇಂಡಿಯನ್ ಫುಟ್‌ಬಾಲ್ ಫ್ಯಾಕ್ಟರಿ ಮತ್ತು ಪರಿಕ್ರಮ ಎಫ್‌ಸಿ ತಂಡಗಳು ಸೆಣಸಲಿವೆ.

ಶಿವಶಕ್ತಿ ಹ್ಯಾಟ್ರಿಕ್‌: ಬಿಎಫ್‌ಸಿ ಜಯಭೇರಿ

ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಆಯೋಜಿಸಿರುವ ಪುರುಷರ ಸೂಪರ್ ಡಿವಿಷನ್ ಲೀಗ್‌ನಲ್ಲಿ ಬೆಂಗಳೂರು ಎಫ್‌ಸಿ ಮತ್ತು ಎಂಇಜಿ–ಸೆಂಟರ್ ಎಫ್‌ಸಿ ತಂಡಗಳು ಜಯ ಗಳಿಸಿದವು. ಬೆಂಗಳೂರು ಇಂಡಿಪೆಂಡೆಂಟ್ಸ್‌ ಎಫ್‌ಸಿ ಎದುರಿನ ಪಂದ್ಯದಲ್ಲಿ ಬಿಎಫ್‌ಸಿ 3–0ಯಿಂದ ಜಯ ಗಳಿಸಿತು. ಶಿವಶಕ್ತಿ (6, 9 ಮತ್ತು 32ನೇ ನಿ) ಹ್ಯಾಟ್ರಿಕ್ ಗಳಿಸಿ ಮಿಂಚಿದರು. ಶುಭಂ ರಾಣಾ (90+3ನೇ ನಿ) ಗಳಿಸಿದ ಏಕೈಕ ಗೋಲಿನ ಬಲದಿಂದ ಎಂಇಜಿ ಆ್ಯಂಡ್ ಸೆಂಟರ್‌ ತಂಡ ಕಿಕ್‌ಸ್ಟಾರ್ಟ್‌ ಎಫ್‌ಸಿಯನ್ನು ಮಣಿಸಿತು.

ಮಂಗಳವಾರ ಮಧ್ಯಾಹ್ನ 1.30ಕ್ಕೆ ಎಎಸ್‌ಸಿ ಆ್ಯಂಡ್ ಸೆಂಟರ್ ಎಫ್‌ಸಿ ಮತ್ತು ಬೆಂಗಳೂರು ಯುನೈಟೆಡ್‌, 3.30ಕ್ಕೆ ಯಂಗ್ ಚಾಲೆಂಜರ್ಸ್‌ ಎಫ್‌ಸಿ ಮತ್ತು ಬೆಂಗಳೂರು ಈಗಲ್ಸ್‌ ಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.