ADVERTISEMENT

ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿ: ಬ್ರೆಜಿಲ್‌ ಗೆಲುವಿನ ಆರಂಭ

ರಿಚಾರ್ಲಿಸನ್ ಎರಡು ಗೋಲು; ಸರ್ಬಿಯಾಗೆ ನಿರಾಸೆ

ಏಜೆನ್ಸೀಸ್
Published 25 ನವೆಂಬರ್ 2022, 13:29 IST
Last Updated 25 ನವೆಂಬರ್ 2022, 13:29 IST
ಬ್ರೆಜಿಲ್‌ನ ರಿಚಾರ್ಲಿಸನ್ ಅವರು ಎರಡನೇ ಗೋಲು ಗಳಿಸಿದ ಕ್ಷಣ –ಎಎಫ್‌ಪಿ ಚಿತ್ರ
ಬ್ರೆಜಿಲ್‌ನ ರಿಚಾರ್ಲಿಸನ್ ಅವರು ಎರಡನೇ ಗೋಲು ಗಳಿಸಿದ ಕ್ಷಣ –ಎಎಫ್‌ಪಿ ಚಿತ್ರ   

ದೋಹಾ: ದಾಖಲೆಯ ಆರನೇ ಪ್ರಶಸ್ತಿಯತ್ತ ಕಣ್ಣಿಟ್ಟಿರುವ ಬ್ರೆಜಿಲ್‌ ತಂಡ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಲುಸೈಲ್‌ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಬ್ರೆಜಿಲ್‌, 2–0 ಗೋಲುಗಳಿಂದ ಸರ್ಬಿಯಾ ತಂಡವನ್ನು ಮಣಿಸಿತು. ಎರಡೂ ಗೋಲುಗಳನ್ನು ಗಳಿಸಿದ ರಿಚಾರ್ಲಿಸನ್‌ ಗೆಲುವಿನ ರೂವಾರಿ ಎನಿಸಿಕೊಂಡರು.

ಮೊದಲ ಅವಧಿಯ ಆಟದಲ್ಲಿ ಸರ್ಬಿಯಾ ತಂಡದವರು ಬಲಿಷ್ಠ ಎದುರಾಳಿಗಳಿಗೆ ತಕ್ಕ ಪೈಪೋಟಿ ನೀಡುವಲ್ಲಿ ಯಶಸ್ವಿಯಾದರು. ಆದರೆ ಎರಡನೇ ಅವಧಿಯಲ್ಲಿ ಚುರುಕಿನ ಆಟವಾಡಿದ ಬ್ರೆಜಿಲ್‌ 62 ಮತ್ತು 73ನೇ ನಿಮಿಷಗಳಲ್ಲಿ ಗೋಲು ಗಳಿಸಿತು.

ADVERTISEMENT

ಪ್ರಥಮಾರ್ಧದಲ್ಲಿ ಗೋಲು ಗಳಿಸುವ ಕೆಲವೊಂದು ಸುಂದರ ಅವಕಾಶಗಳನ್ನು ಬ್ರೆಜಿಲ್‌ ಸೃಷ್ಟಿಸಿತ್ತಾದರೂ, ಎದುರಾಳಿ ಡಿಫೆಂಡರ್‌ಗಳು ಮತ್ತು ಗೋಲ್‌ಕೀಪರ್‌ ತಡೆಯಾದರು. ಮೊದಲ ಗೋಲು ಗಳಿಸಲು 62ನೇ ನಿಮಿಷದವರೆಗೆ ಕಾಯಬೇಕಾಯಿತು.

ನೇಮರ್ ಅವರು ನೀಡಿದ ಪಾಸ್‌ನಲ್ಲಿ ವಿನೀಸಿಯಸ್ ಜೂನಿಯರ್‌ ಗುರಿಯತ್ತ ಒದ್ದ ಚೆಂಡನ್ನು ಗೋಲ್‌ಕೀಪರ್‌ ಮುಂದಕ್ಕೆ ತಳ್ಳಿದರು. ಅಲ್ಲೇ ಕಾಯುತ್ತಿದ್ದ ರಿಚಾರ್ಲಿಸನ್‌ ನಿರಾಯಾಸದಿಂದ ಗುರಿ ಸೇರಿಸಿದರು. ಗೋಲು ಬಿದ್ದದ್ದೇ ತಡ, ಬ್ರೆಜಿಲ್‌ ತನ್ನ ಆಕ್ರಮಣದ ವೇಗವನ್ನು ಹೆಚ್ಚಿಸಿತು.

ಸುಂದರ ಗೋಲು: ರಿಚಾರ್ಲಿಸನ್‌ 73ನೇ ನಿಮಿಷದಲ್ಲಿ ಗಳಿಸಿದ ಎರಡನೇ ಗೋಲು ಚೇತೋಹಾರಿಯಾಗಿತ್ತು. ವಿನೀಸಿಯಸ್ ನೀಡಿದ ನಿಖರ ಪಾಸ್‌ನಲ್ಲಿ ರಿಚಾರ್ಲಿಸನ್‌ ಅವರು ಚೆಂಡನ್ನು ತಮ್ಮ ಎಡಗಾಲಿನ ಮೂಲಕ ಅಲ್ಪ ಮೇಲಕ್ಕೆ ಅಟ್ಟಿದರು. ಚೆಂಡು ನೆಲಕ್ಕೆ ಬೀಳುವ ಮುನ್ನವೇ ಮೇಲಕ್ಕೆ ಜಿಗಿದು ‘ಅಕ್ರೊಬ್ಯಾಟಿಕ್‌’ ಶೈಲಿಯಲ್ಲಿ ಬಲಗಾಲಿನಲ್ಲಿ ಮಿಂಚಿನ ವೇಗದಲ್ಲಿ ಗೋಲುಪೆಟ್ಟಿಗೆಯತ್ತ ಒದ್ದರು. ಇಬ್ಬರು ಡಿಫೆಂಡರ್‌ಗಳು ಮತ್ತು ಗೋಲ್‌ಕೀಪರ್‌ಅನ್ನು ದಾಟಿದ ಚೆಂಡು ನೆಟ್‌ನೊಳಕ್ಕೆ ಸೇರಿದಾಗ ಬ್ರೆಜಿಲ್‌ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಈ ಗೆಲುವಿನ ಮೂಲಕ ಬ್ರೆಜಿಲ್‌ ತಂಡ ವಿಶ್ವಕಪ್‌ ಟೂರ್ನಿಯ ಗುಂಪು ಹಂತದಲ್ಲಿ ತನ್ನ ಅಜೇಯ ಸಾಧನೆಯನ್ನು ಮತ್ತಷ್ಟು ವಿಸ್ತರಿಸಿದೆ. 1998ರ ಟೂರ್ನಿಯಲ್ಲಿ ನಾರ್ವೆ ಎದುರು ಸೋತ ಬಳಿಕ ಫಿಫಾ ವಿಶ್ವಕಪ್‌ನ ಲೀಗ್‌ ಹಂತದಲ್ಲಿ ಒಮ್ಮೆಯೂ ಪರಾಭವಗೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.