ADVERTISEMENT

ನೇಷನ್ಸ್ ಕಪ್‌: ಸೆನೆಗಲ್‌ನಲ್ಲಿ ಸಂಭ್ರಮದ ಅಲೆ

ಸಲಾ ನಾಯಕತ್ವದ ಈಜಿಪ್ಟ್‌ ಎದುರು ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದ ಮಾನೆ ಬಳಗ

ಏಜೆನ್ಸೀಸ್
Published 7 ಫೆಬ್ರುವರಿ 2022, 13:31 IST
Last Updated 7 ಫೆಬ್ರುವರಿ 2022, 13:31 IST
ಪ್ರಶಸ್ತಿ ಗೆದ್ದ ಸೆನೆಗಲ್ ತಂಡದ ಆಟಗಾರರ ಸಂಭ್ರಮ –ರಾಯಿಟರ್ಸ್ ಚಿತ್ರ
ಪ್ರಶಸ್ತಿ ಗೆದ್ದ ಸೆನೆಗಲ್ ತಂಡದ ಆಟಗಾರರ ಸಂಭ್ರಮ –ರಾಯಿಟರ್ಸ್ ಚಿತ್ರ   

ಡಕಾರ್‌: ಮೊತ್ತಮೊದಲ ಬಾರಿ ಆಫ್ರಿಕಾದ ನೇಷನ್ಸ್ ಕಪ್‌ನ ಚಾಂಪಿಯನ್ ಪಟ್ಟಕ್ಕೇರಿದ ಸೆನೆಗಲ್‌ ಫುಟ್‌ಬಾಲ್ ತಂಡ ದೇಶದಲ್ಲಿ ಸಂಭ್ರಮದ ಅಲೆಯೇಳುವಂತೆ ಮಾಡಿದೆ. ತಂಡದ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿರುವ ಅಧ್ಯಕ್ಷ ಮೆಕೆ ಸಾಲ್ ಸೋಮವಾರ ರಾಷ್ಟ್ರೀಯ ರಜೆ ಘೋಷಿಸಿದ್ದರು.

ಕ್ಯಾಮರೂನ್‌ನಲ್ಲಿ ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಸಲಾ ನಾಯಕತ್ವದ ಈಜಿಪ್ಟ್ ವಿರುದ್ಧ ಸೆನೆಗಲ್ ಪೆನಾಲ್ಟಿ ಶೂಟೌಟ್‌ನಲ್ಲಿ ಜಯ ಗಳಿಸಿತ್ತು. ನಿಗದಿತ ಅವಧಿಯಲ್ಲಿ ಮತ್ತು ಹೆಚ್ಚುವರಿ ಸಮಯದಲ್ಲಿ ಎರಡೂ ತಂಡಗಳು ಗೋಲು ಗಳಿಸಲು ವಿಫಲವಾದವು. ಲಿವರ್‌ಪೂಲ್ ನಾಯಕ ಸ್ಯಾಡಿಯೊ ಮಾನೆ ನೇತೃತ್ವದಲ್ಲಿ ಕಣಕ್ಕೆ ಇಳಿದಿದ್ದ ಸೆನೆಗಲ್ ಪೆನಾಲ್ಟಿ ಶೂಟೌಟ್‌ನಲ್ಲಿ ಯಶಸ್ಸು ಕಂಡಿತು.

ತಂಡ ಗೆಲುವು ಸಾಧಿಸಿದ ವಿಷಯ ತಿಳಿದ ಕೂಡಲೇ ರಾಷ್ಟ್ರಾಧ್ಯಕ್ಷರು ಈಜಿಪ್ಟ್ ಮತ್ತು ಇಥಿಯೋಪಿಯಾ ಪ್ರವಾಸವನ್ನು ಮೊಟಕುಗೊಳಿಸಿ ವಾಪಸಾಗಿದ್ದಾರೆ. ಪ್ರವಾಸ ಕೊನೆಯ ಘಟ್ಟದಲ್ಲಿದ್ದ ಸಾಲ್ ಅವರು ಕೊಮೊರೊಸ್‌ಗೆ ಭೇಟಿ ನೀಡಬೇಕಾಗಿತ್ತು. ಅದನ್ನು ರದ್ದುಪಡಿಸಿ ತಂಡದ ಆಟಗಾರರನ್ನು ಸ್ವಾಗತಿಸಲು ದೇಶಕ್ಕೆ ಮರಳಿದ್ದಾರೆ. ಅಧ್ಯಕ್ಷರ ಪ್ಯಾಲೇಸ್‌ನಲ್ಲಿ ಮಂಗಳವಾರ ನಡೆಯಲಿರುವ ಸಮಾರಂಭದಲ್ಲಿ ಅವರು ತಂಡದ ಆಟಗಾರರನ್ನು ಸನ್ಮಾನಿಸುವರು

ADVERTISEMENT

2002 ಮತ್ತು 2019ರಲ್ಲೂ ಸೆನೆಗಲ್ ಪ್ರಶಸ್ತಿ ಸುತ್ತು ಪ್ರವೇಶಿಸಿತ್ತು. ಆದರೆ ರನ್ನರ್ ಅಪ್ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡಿತ್ತು. ಭಾನುವಾರದ ಫೈನಲ್‌ನಲ್ಲಿ ನಿರ್ಣಾಯಕ ಗೋಲು ಗಳಿಸಿ ಮಾನೆ ತಂಡಕ್ಕೆ ಜಯ ತಂದುಕೊಟ್ಟರು. ಸ್ವಾತಂತ್ರ್ಯ ಚೌಕದಲ್ಲಿ ಸೇರಿದ ಫುಟ್‌ಬಾಲ್ ಅಭಿಮಾನಿಗಳು ರಾತ್ರಿಯಿಡೀ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.