ADVERTISEMENT

ಹಣದ ವಂಚನೆ ಪ್ರಕರಣ: ಫಿಫಾದ ಮಾಜಿ ಮುಖ್ಯಸ್ಥರಾದ ಬ್ಲಾಟರ್, ಪ್ಲಾಟಿನಿ ಆರೋಪಮುಕ್ತ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 13:40 IST
Last Updated 9 ಜುಲೈ 2022, 13:40 IST
ಮೈಕೆಲ್ ಪ್ಲಾಟಿನಿ
ಮೈಕೆಲ್ ಪ್ಲಾಟಿನಿ   

ಬೆಲಿಂಝೊನಾ, ಸ್ವಿಟ್ಜರ್‌ಲೆಂಡ್: ಫಿಫಾದ ಮಾಜಿ ಮುಖ್ಯಸ್ಥರಾದ ಸೆಪ್ ಬ್ಲಾಟರ್ ಮತ್ತು ಮೈಕೆಲ್ ಪ್ಲಾಟಿನಿ ಅವರನ್ನು ಹಣದ ವಂಚನೆ ಆರೋಪದಿಂದ ಮುಕ್ತಗೊಳಿಸಲಾಗಿದೆ.

ಶುಕ್ರವಾರ ಸ್ವಿಟ್ಜರ್‌ಲೆಂಡ್‌ನ ಬೆಲಿಂಜೊನಾ ಫೆಡರಲ್ ಕ್ರಿಮಿನಲ್ ಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ಇವರಿಬ್ಬರನ್ನೂ ಆರೋ‍ಪಮುಕ್ತಗೊಳಿಸಲಾಯಿತು. 2015ರಲ್ಲಿ ಇಬ್ಬರೂ ಈ ಆರೋಪಕ್ಕೆ ಸಿಲುಕಿದರು. ಆಗಿನಿಂದಲೂ ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು. ಸರ್ಕಾರದ ಪರ ವಕೀಲರು ಅವರಿಬ್ಬರನ್ನು 20 ತಿಂಗಳ ಸೆರೆವಾಸಕ್ಕೆ ಕಳುಹಿಸಬೇಕು ಎಂದು ಸಲ್ಲಿಸಿದ್ದ ಮನವಿಯನ್ನೂ ಈ ಸಂದರ್ಭದಲ್ಲಿ ತಳ್ಳಿಹಾಕಲಾಯಿತು. 86 ವರ್ಷದ ಬ್ಲಾಟರ್ ಮತ್ತು 67 ವರ್ಷದ ಪ್ಲಾಟಿನಿ ಅವರು ಕೋರ್ಟ್‌ನಲ್ಲಿ ಹಾಜರಿದ್ದರು.

‘ನಾನು ಏಳು ವರ್ಷಗಳಿಂದ ಹೇಳುತ್ತಿದ್ದ ಮಾತುಗಳನ್ನೇ ಇವತ್ತು ನ್ಯಾಯಾಲಯವು ಹೇಳಿದೆ. ಅಂತಿಮವಾಗಿ ಸತ್ಯಕ್ಕೆ ಜಯ ಲಭಿಸಿದೆ. ಅಪಾರ ಸಂತಸವಾಗುತ್ತಿದೆ’ ಎಂದು ಪ್ಲಾಟಿನಿ ಹೇಳಿದರು.

ADVERTISEMENT

1998ರಲ್ಲಿ ಅಧ್ಯಕ್ಷರಾಗಿದ್ದ ಬ್ಲಾಟರ್‌ ಅವರಿಗೆ ಸಲಹೆಗಾರರಾಗಿದ್ದ ಪ್ಲಾಟಿನಿ ಮಾಡಿದ ಹಣ ಪಾವತಿಯಲ್ಲಿ ವಂಚನೆ ಆಗಿದ್ದ ಪ್ರಕರಣ ದಾಖಲಾಗಿತ್ತು. 2011ರಲ್ಲಿ ಪ್ಲಾಟಿನಿ ನಕಲಿ ರಸೀತಿ ನೀಡಿದ್ದರೆಂಬ ಆರೋಪಕ್ಕೊಳಗಾಗಿದ್ದರು.

ವಿಶ್ವದ ಫುಟ್‌ಬಾಲ್ ಕ್ಷೇತ್ರದಲ್ಲಿ ಖ್ಯಾತನಾಮರಾಗಿದ್ದ ಇಬ್ಬರು ಭಾಗಿಯಾಗಿದ್ದರೆನ್ನಲಾದ ವಂಚನೆ ಪ್ರಕರಣವು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.