ADVERTISEMENT

ಫುಟ್‌ಬಾಲ್‌: ಡ್ರಾ ಪಂದ್ಯದಲ್ಲಿ ದಕ್ಷಿಣ ಕೊರಿಯಾ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 16:43 IST
Last Updated 24 ನವೆಂಬರ್ 2022, 16:43 IST
ದಕ್ಷಿಣ ಕೊರಿಯಾದ ಗೋಲ್‌ಕೀಪರ್ ಕಿಮ್ ಸಿಯಾಂಗ್ ಜಿಯು ಉರುಗ್ವೆಯ  ಆಟಗಾರನ ಗೋಲು ಗಳಿಸುವ ಪ್ರಯತ್ನವನ್ನು ತಡೆದರು  –ಎಎಫ್‌ಪಿ ಚಿತ್ರ
ದಕ್ಷಿಣ ಕೊರಿಯಾದ ಗೋಲ್‌ಕೀಪರ್ ಕಿಮ್ ಸಿಯಾಂಗ್ ಜಿಯು ಉರುಗ್ವೆಯ  ಆಟಗಾರನ ಗೋಲು ಗಳಿಸುವ ಪ್ರಯತ್ನವನ್ನು ತಡೆದರು  –ಎಎಫ್‌ಪಿ ಚಿತ್ರ   

ದೋಹಾ (ಎಎಫ್‌ಪಿ): ಫುಟ್‌ಬಾಲ್‌ನಲ್ಲಿ ‘ಏಷ್ಯಾದ ಹುಲಿ’ ದಕ್ಷಿಣ ಕೊರಿಯಾ ತಂಡ ಮತ್ತು ಉರುಗ್ವೆ ನಡುವಣ ಪಂದ್ಯವು ಡ್ರಾನಲ್ಲಿ ಮುಕ್ತಾಯವಾಯಿತು.

ಖ್ಯಾತನಾಮ ಆಟಗಾರ ಸನ್ ಹೆಂಗ್ ಮೆನ್ ಕೊರಿಯಾ ತಂಡಕ್ಕೆ ಮರಳಿದ್ದರು. ಅದರಿಂದಾತಿ ತಂಡವು ಜಯಿಸುವ ವಿಶ್ವಾಸ ಗರಿಗೆದರಿತ್ತು. ಆದರೆ, ಉರುಗ್ವೆಯ ನಾಯಕ ಡೀಗೊ ಗಾಡಿನ್ ಹಾಗೂ ರಿಯಲ್‌ ಮ್ಯಾಡ್ರಿಡ್‌ ಮಿಡ್‌ಫೀಲ್ಡರ್‌ ಆಗಿರುವ ಫೆಡೆರಿಕೊ ವಾಲ್ವೆರ್ಡೆ ಅವರ ಗೋಲುಗಳಿಕೆಯ ಪ್ರಯತ್ನಗಳೂ ಫಲ ಕೊಡಲಿಲ್ಲ.

ಕೊರಿಯಾದ ವಾಂಗ್ ಯು ಜೊ ತಮಗೆ ಸಿಕ್ಕಿದ್ದ ಸುಲಭ ಅವಕಾಶವನ್ನೂ ಕೈಚೆಲ್ಲಿದರು. 10 ಯಾರ್ಡ್‌ ದೂರದಿಂದ ಗೋಲ್‌ಕೀಪರ್‌ ಅಷ್ಟೇ ಇದ್ದ ಪೋಸ್ಟ್‌ಗೆ ನಿಖರವಾಗಿ ಕಿಕ್ ಮಾಡುವಲ್ಲಿ ವಾಂಗ್ ವಿಫಲರಾದರು. ಅವರು ಒದ್ದ ಚೆಂಡು ಗೋಲುಪೋಸ್ಟ್‌ ಮೇಲಿಂದ ಸಾಗಿಹೋಯಿತು.

ADVERTISEMENT

ಎಚ್‌ ಗುಂಪಿನ ಈ ಪಂದ್ಯದಲ್ಲಿ ಉಭಯ ತಂಡಗಳು ಅಂಕಗಳನ್ನು ಹಂಚಿಕೊಂಡವು.

‘ಇದೊಂದು ಉತ್ತಮ ಪಂದ್ಯ. ಮೊದಲಾರ್ಧದಲ್ಲಿ ನಮ್ಮ ತಂಡದ ಆಟಗಾರರು ಚೆನ್ನಾಗಿ ಆಡಿದರು. ಅದರಲ್ಲಿ ಕೆಲವು ಸಂದರ್ಭಗಳಲ್ಲಿ ಕೈತಪ್ಪಿ ಹೋಗುವ ಪಂದ್ಯವನ್ನು ಮರಳಿ ವಶಕ್ಕೆ ಪಡೆದಿದ್ದೆವು’ ಎಂದು ಕೊರಿಯಾದ ಕೋಚ್, ಪೋರ್ಚುಗೀಸ್ ಮೂಲದ ಪಾಲೊ ಬೆಂಟೊ ಹೇಳಿದರು.

ಪಂದ್ಯ ಕುರಿತು ಪ್ರತಿಕ್ರಿಯಿಸಿದ ಉರುಗ್ವೆ ಕೋಚ್ ಡೀಗೊ ಅಲೊನ್ಸೊ, ‘ ಉತ್ತಮ ಪಂದ್ಯ ಇದಾಗಿತ್ತು. ಎರಡು ತಂಡಗಳ ಕಠಿಣ ಪೈಪೋಟಿ ಇದರಲ್ಲಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.