ADVERTISEMENT

ಐಎಸ್‌ಎಲ್‌: ಮತ್ತೆ ಡ್ರಾಗೆ ತೃಪ್ತಿಪಟ್ಟ ಗೋವಾ

ನಾರ್ತ್ ಈಸ್ಟ್ ಎದುರಿನ ಪಂದ್ಯದಲ್ಲೂ ಜಯ ಕಾಣದ ಆತಿಥೇಯರು: ಸಿಲ್ಲಾ, ಆಂಗುಲೊಗೆ ಗೋಲು

ಪಿಟಿಐ
Published 1 ಡಿಸೆಂಬರ್ 2020, 3:52 IST
Last Updated 1 ಡಿಸೆಂಬರ್ 2020, 3:52 IST
ಗೋಲು ಗಳಿಸಿದ ಇದ್ರಿಸಾ ಸಿಲ್ಲಾ ಅವರನ್ನು ಸಹ ಆಟಗಾರರು ಅಭಿನಂದಿಸಿದರು –ಐಎಸ್‌ಎಲ್‌ ಮೀಡಿಯಾ ಚಿತ್ರ
ಗೋಲು ಗಳಿಸಿದ ಇದ್ರಿಸಾ ಸಿಲ್ಲಾ ಅವರನ್ನು ಸಹ ಆಟಗಾರರು ಅಭಿನಂದಿಸಿದರು –ಐಎಸ್‌ಎಲ್‌ ಮೀಡಿಯಾ ಚಿತ್ರ   

ಫತೋರ್ಡ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಏಳನೇ ಆವೃತ್ತಿಯಲ್ಲಿ ಜಯದ ಖಾತೆ ತೆರೆಯುವ ಆತಿಥೇಯ ಎಫ್‌ಸಿ ಗೋವಾ ತಂಡದ ಕನಸು ಸೋಮವಾರವೂ ನನಸಾಗಲಿಲ್ಲ. ನಾರ್ತ್ ಈಸ್ಟ್ ಯುನೈಟೆಡ್‌ ಎದುರಿನ ಪಂದ್ಯದಲ್ಲಿ ಭಾರಿ ಪೈಪೋಟಿ ಒಡ್ಡಿದ ಗೋವಾ 1–1ರ ಸಮಬಲಕ್ಕೆ ತೃಪ್ತಿಪಟ್ಟುಕೊಂಡಿತು. ಎರಡೂ ತಂಡಗಳ ಗೋಲು ಮೊದಲಾರ್ಧದಲ್ಲಿ ಮೂಡಿಬಂದವು.

ಈ ಪಂದ್ಯಕ್ಕೂ ಮೊದಲು ತಲಾ ಎರಡು ಪಂದ್ಯಗಳನ್ನು ಆಡಿದ್ದ ಉಭಯ ತಂಡಗಳ ಪೈಕಿ ನಾರ್ತ್ ಈಸ್ಟ್ ಉತ್ತಮ ಸಾಧನೆ ಮಾಡಿತ್ತು. ಆ ತಂಡ ಒಂದರಲ್ಲಿ ಜಯ ಗಳಿಸಿ ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಆದರೆ ಆತಿಥೇಯರು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದು ಮತ್ತೊಂದರಲ್ಲಿ ಸೋತಿತ್ತು. ಹಿಂದಿನ ಎರಡು ಪಂದ್ಯಗಳಲ್ಲಿ ಸೊಗಸಾದ ಆಟವಾಡಿದ್ದರೂ ನಿರೀಕ್ಷೆಗೆ ತಕ್ಕ ಫಲ ಕಾಣದೇ ಇದ್ದ ಗೋವಾ ಸೋಮವಾರ ಪ್ರಬಲ ಸ್ಪರ್ಧೆಯೊಡ್ಡುವ ಯೋಜನೆಯೊಂದಿಗೆ ಕಣಕ್ಕೆ ಇಳಿದಿತ್ತು. ನಾರ್ತ್ ಈಸ್ಟ್ ಯುನೈಟೆಡ್‌ ಕೂಡ ಭಾರಿ ಪೈಪೋಟಿ ಒಡ್ಡಿದ್ದರಿಂದ ಆರಂಭದಿಂದಲೇ ಪಂದ್ಯ ರೋಚಕವಾಯಿತು.

ಎರಡನೇ ನಿಮಿಷದಲ್ಲೇ ನಾರ್ತ್ ಈಸ್ಟ್ ತಂಡಕ್ಕೆ ಕಾರ್ನರ್ ಅವಕಾಶ ಲಭಿಸಿತು. ಮಿಗುಯೆಲ್ ಮಚಾದೊ ಅವರ ಕಾರ್ನರ್ ಕಿಕ್‌ ಗುರಿ ಮುಟ್ಟುವ ಮುನ್ನ ಗೋವಾದ ರಕ್ಷಣಾ ವಿಭಾಗದವರ ಚಾಕಚಕ್ಯ ಆಟದಿಂದ ಹೊರಗೆ ಚಿಮ್ಮಿತು. ಐದನೇ ನಿಮಿಷದಲ್ಲಿ ಗೋವಾ ತಂಡದ ಬ್ರೆಂಡನ್ ಫರ್ನಾಂಡಿಸ್ ಪ್ರಬಲ ಆಕ್ರಮಣ ನಡೆಸಿ ಭರವಸೆ ಮೂಡಿಸಿದರು. ಏಳನೇ ನಿಮಿಷದಲ್ಲಿ ತಂಡಕ್ಕೆ ಮೊದಲ ಕಾರ್ನರ್ ಅವಕಾಶ ಲಭಿಸಿತು. ಆದರೆ ಗೋಲು ಗಳಿಸುವ ಪ್ರಯತ್ನವನ್ನು ಎದುರಾಳಿ ತಂಡದವರು ವಿಫಲಗೊಳಿಸಿದರು. 33ನೇ ನಿಮಿಷದಲ್ಲಿ ಲಭಿಸಿದ ಫ್ರೀ ಕಿಕ್‌ನಲ್ಲಿ ಮಚಾದೊ ಒದ್ದ ಚೆಂಡು ಗೋಲುಪೆಟ್ಟಿಗೆಯಿಂದ ಹೊರಹೋಯಿತು.

ADVERTISEMENT

40ನೇ ನಿಮಿಷದಲ್ಲಿ ನಾರ್ತ್ ಈಸ್ಟ್‌ ತಂಡಕ್ಕೆ ಪೆನಾಲ್ಟಿ ಅವಕಾಶ ಲಭಿಸಿತು. ಆದರೆ ಕಿಕ್‌ ಮಾಡಿದ ನಂತರ ನಾಟಕೀಯ ಪ್ರಸಂಗ ನಡೆಯಿತು. ಇದ್ರಿಸಾ ಸಿಲ್ಲಾ ಅವರು ಒದ್ದ ಚೆಂಡು ಗೋಲ್‌ಕೀಪರ್‌ ಮೊಹಮ್ಮದ್ ನವಾಜ್ ಅವರನ್ನು ವಂಚಿಸಿ ಬಲೆಗೆ ಮುತ್ತಿಕ್ಕಿತು. ಆದರೆ ರೆಫರಿ ಮತ್ತೊಮ್ಮೆ ಕಿಕ್ ತೆಗೆಯುವಂತೆ ಸೂಚಿಸಿದರು. ತಂಡದ ಲಾಲ್‌ರೆಂಪುಯಾ ಫೆನಾಯ್, ನಿಯಮ ಉಲ್ಲಂಘಿಸಿ ಚಲಿಸಿದ್ದರಿಂದ ಮರು ಕಿಕ್‌ಗೆ ಸೂಚನೆ ನೀಡಲಾಯಿತು. ಈ ಪ್ರಯತ್ನದಲ್ಲೂ ಸಿಲ್ಲಾ ಯಶಸ್ಸು ಕಂಡರು. ಚೆಂಡನ್ನು ನಿಖರವಾಗಿ ಗುರಿ ಮುಟ್ಟಿಸಿದ ಅವರು ತಂಡಕ್ಕೆ ಮುನ್ನಡೆ ಗಳಿಸಿಕೊಟ್ಟರು.

ಆದರೆ ತಂಡದ ಸಂಭ್ರಮ ಹೆಚ್ಚು ಉಳಿಯಲಿಲ್ಲ. ಮೂರೇ ನಿಮಿಷಗಳಲ್ಲಿ ತಿರುಗೇಟು ನೀಡಿದ ಗೋವಾ ಸಮಬಲ ಸಾಧಿಸಿತು. ಎಡಬದಿಯಲ್ಲಿ ಚೆಂಡನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಬ್ರೆಂಡನ್ ಫರ್ನಾಂಡಿಸ್ ನಿಖರವಾಗಿ ಗೋಲುಪೆಟ್ಟಿಗೆಯತ್ತ ಕ್ರಾಸ್ ಮಾಡಿದರು. ಅಲ್ಲಿ ಕಾಯುತ್ತಿದ್ದ ಇಗರ್ ಆಂಗುಲೊ, ಚೆಂಡನ್ನು ಸೊಗಸಾಗಿ ಒದ್ದು ಗೋಲು ತಂದುಕೊಟ್ಟರು. ದ್ವಿತೀಯಾರ್ಧದಲ್ಲಿ ಮುನ್ನಡೆಗಾಗಿ ಉಭಯ ತಂಡಗಳು ನಡೆಸಿದ ಪ್ರಯತ್ನಗಳೆಲ್ಲವೂ ವಿಫಲವಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.