ADVERTISEMENT

ಗೋಕುಲಂ–ಕ್ರಿಪ್ಶಾ ಪೈಪೋಟಿ

ಮಹಿಳೆಯರ ಫುಟ್‌ಬಾಲ್ ಲೀಗ್ ಫೈನಲ್ ಹಣಾಹಣಿ ಇಂದು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 19:17 IST
Last Updated 13 ಫೆಬ್ರುವರಿ 2020, 19:17 IST
ಗೋಕುಲಂ ಎಫ್‌ಸಿ ಆಟಗಾರ್ತಿಯರು ಫೈನಲ್‌ನಲ್ಲಿ ಉತ್ತಮ ಸಾಮರ್ಥ್ಯ ತೋರುವ ಭರವಸೆಯಲ್ಲಿದ್ದಾರೆ –ಪ್ರಜಾವಾಣಿ ಚಿತ್ರ
ಗೋಕುಲಂ ಎಫ್‌ಸಿ ಆಟಗಾರ್ತಿಯರು ಫೈನಲ್‌ನಲ್ಲಿ ಉತ್ತಮ ಸಾಮರ್ಥ್ಯ ತೋರುವ ಭರವಸೆಯಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಜನವರಿ 19ರಿಂದ ಉದ್ಯಾನ ನಗರಿಯಲ್ಲಿ ನಡೆಯುತ್ತಿರುವ ಮಹಿಳೆಯರ ಫುಟ್‌ಬಾಲ್ ಲಿಗ್‌ ಅಂತಿಮ ಘಟ್ಟ ತಲುಪಿದೆ.

ರಾಜ್ಯ ಫುಟ್‌ಬಾಲ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಮಣಿಪುರದ ಕಂಚುಪ್ ರೋಡ್ ಯಂಗ್ ಫಿಜಿಕಲ್ ಆ್ಯಂಡ್ ಸ್ಪೋರ್ಟ್ಸ್ ಅಸೋಸಿಯೇಷನ್ (ಕ್ರಿಪ್ಶಾ) ಮತ್ತು ಗೋಕುಲಂ ಎಫ್‌ಸಿ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ಎರಡೂ ತಂಡಗಳು ಅಂತರರಾಷ್ಟ್ರೀಯ ಆಟಗಾರ್ತಿಯರನ್ನು ಒಳ ಗೊಂಡಿರುವುದರಿಂದ ಫೈನಲ್ ಪಂದ್ಯ ಪ್ರೇಕ್ಷಕರಿಗೆ ರೋಮಾಂಚನ ನೀಡುವ ಸಾಧ್ಯತೆ ಇದೆ.

ADVERTISEMENT

ಕಳೆದ ಬಾರಿ ರನ್ನರ್ಸ್ ಅಪ್ ಮಣಿಪುರ ಪೊಲೀಸ್ ತಂಡವನ್ನು ಮಣಿಪುರ ಲೀಗ್‌ನಲ್ಲಿ ಹಿಂದಿಕ್ಕಿ ಕ್ರಿಪ್ಶಾ ತಂಡ ಈ ಬಾರಿ ಮಹಿಳಾ ಲೀಗ್‌ಗೆ ಅರ್ಹತೆ ಪಡೆದಿತ್ತು. ರಾಷ್ಟ್ರೀಯ ತಂಡದ ಆಟಗಾರ್ತಿಯರಾದ ಆಶಾಲತಾ ದೇವಿ, ಡಂಗ್ಮೆ ಗ್ರೇಸ್, ರತಬನ್‌ಬಾಲಾ ದೇವಿ ಮುಂತಾದವರು ಈ ತಂಡದ ಶಕ್ತಿ.

ಕಳೆದ ಬಾರಿ ಸೆಮಿಫೈನಲ್ ಪ್ರವೇಶಿಸಿದ್ದ ಗೋಕುಲಂ ಎಫ್‌ಸಿಯಲ್ಲಿ ದಾಲಿಮಾ ಚಿಬ್ಬೇರ್, ಲಿಂನ್ತೊಂಯ್ಗಂಬಿ ದೇವಿ, ಸಂಜು ಯಾದವ್, ಅಂಜು ತಮಾಂಗ್ ಮತ್ತು ಮನಿಷಾ ಕಲ್ಯಾಣ್ ಇದ್ದಾರೆ. ಕೇರಳದಲ್ಲಿ ಮಹಿಳಾ ಲೀಗ್ ಇಲ್ಲದಿರುವ ಕಾರಣ ಈ ತಂಡ ಭಾರತ ಇತರೆ ತಂಡಗಳ ನಡುವಿನ ಹಣಾಹಣಿಯಲ್ಲಿ ಗೆದ್ದು ಲೀಗ್ ಪ್ರವೇಶಿಸಿದೆ.

ಈ ಬಾರಿಯ ಸೆಮಿಫೈನಲ್‌ನಲ್ಲಿ ಗೋಕುಲಂ 3–0 ಅಂತರದಲ್ಲಿ ಸೇತು ಎಫ್‌ಸಿಯನ್ನು ಮಣಿಸಿತ್ತು. ಕೆಂಕ್ರೆ ಎಫ್‌ಸಿ ವಿರುದ್ಧ 3–1ರಲ್ಲಿ ಗೆದ್ದು ಕ್ರಿಪ್ಶಾ ಫೈನಲ್ ಪ್ರವೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.