ADVERTISEMENT

ಬರೋಡಾ ಎಫ್‌ಸಿ ಜಯಭೇರಿ

ರಾಷ್ಟ್ರೀಯ ಮಹಿಳಾ ಲೀಗ್‌ ಫುಟ್‌ಬಾಲ್‌

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 9:58 IST
Last Updated 1 ಫೆಬ್ರುವರಿ 2020, 9:58 IST
ಕ್ರಿಪ್‌ಶಾ (ನೀಲಿ ಪೋಷಾಕು) ಮತ್ತು ಬರೋಡಾ ತಂಡದ ಆಟಗಾರ್ತಿಯರ ಪೈಪೋಟಿಯ ಕ್ಷಣ –ಪ್ರಜಾವಾಣಿ ಚಿತ್ರ
ಕ್ರಿಪ್‌ಶಾ (ನೀಲಿ ಪೋಷಾಕು) ಮತ್ತು ಬರೋಡಾ ತಂಡದ ಆಟಗಾರ್ತಿಯರ ಪೈಪೋಟಿಯ ಕ್ಷಣ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಆಟದ ಎಲ್ಲಾ ವಿಭಾಗಗಳಲ್ಲಿ ಆಧಿಪತ್ಯ ಸಾಧಿಸಿದ ಬರೋಡಾ ಎಫ್‌ಸಿ ತಂಡ ರಾಷ್ಟ್ರೀಯ ಮಹಿಳಾ ಫುಟ್‌ಬಾಲ್‌ ಲೀಗ್‌ನ ಪಂದ್ಯದಲ್ಲಿ ಗೆದ್ದಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ‘ಎ’ ಗುಂಪಿನ ಪೈ‍ಪೋಟಿಯಲ್ಲಿ ಬರೋಡಾ ಎಫ್‌ಸಿ 4–0 ಗೋಲುಗಳಿಂದ ಕ್ರಿಪ್‌ಶಾ ಎಫ್‌ಸಿ ತಂಡವನ್ನು ಸೋಲಿಸಿತು.

ಮೊದಲಾರ್ಧದಲ್ಲಿ ಉಭಯ ತಂಡಗಳು ಸಮಬಲದಿಂದ ಸೆಣಸಿದವು. ವಿರಾಮದ ನಂತರ ಬರೋಡಾ ತಂಡ ಮೇಲುಗೈ ಸಾಧಿಸಿತು. ಅಸೆಮ್‌ ರೋಜಾ ದೇವಿ 57ನೇ ನಿಮಿಷದಲ್ಲಿ ತಂಡದ ಖಾತೆ ತೆರೆದರು. 77ನೇ ನಿಮಿಷದಲ್ಲಿ ಅಂಜು ತಮಂಗ್‌ ಗೋಲು ಬಾರಿಸಿ 2–0 ಮುನ್ನಡೆಗೆ ಕಾರಣರಾದರು.

ADVERTISEMENT

80ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶದಲ್ಲಿ ರತನ್‌ಬಾಲಾ ದೇವಿ ಚೆಂಡನ್ನು ಗುರಿ ಮುಟ್ಟಿಸಿದರು. ಹೆಚ್ಚುವರಿ ಅವಧಿಯಲ್ಲಿ (90+2) ರಂಜನಾ ಚಾನು ಗೋಲು ಹೊಡೆದು ಗೆಲುವಿನ ಅಂತರ ಹೆಚ್ಚಿಸಿದರು.

‘ಬಿ’ ಗುಂಪಿನ ಹಣಾಹಣಿಯಲ್ಲಿ ಕೆಂಕ್ರೆ ಎಫ್‌ಸಿ 3–1 ಗೋಲುಗಳಿಂದ ಬಿದೇಶ್‌ ಇಲೆವನ್‌ ಸ್ಪೋರ್ಟ್ಸ್‌ ಕ್ಲಬ್‌ ತಂಡವನ್ನು ಪರಾಭವಗೊಳಿಸಿತು.

ಕೆಂಕ್ರೆ ತಂಡದ ಸೌಮ್ಯಾ ಗುಗುಲೊತ್‌ (18ನೇ ನಿ.), ಜ್ಯೋತಿ (54) ಮತ್ತು ಪೂಜಾ ಕರ್ಮಾಕರ್‌ (89) ಅವರು ಗೋಲು ಬಾರಿಸಿದರು. ಬಿದೇಶ್‌ ತಂಡದ ಮಾಕ್ರೆನಾ ದಿಯಾಸ್‌ 90+3ನೇ ನಿಮಿಷದಲ್ಲಿ ಗೋಲು ದಾಖಲಿಸಿ ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.