ADVERTISEMENT

ಫುಟ್‌ಬಾಲ್: ಭಾರತ ತಂಡದ ಹೆಡ್‌ ಕೋಚ್‌ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ ಝಾವಿ!

ಎಐಎಫ್‌ಎಫ್‌ಗೆ ಅಚ್ಚರಿ

ಪಿಟಿಐ
Published 25 ಜುಲೈ 2025, 15:49 IST
Last Updated 25 ಜುಲೈ 2025, 15:49 IST
<div class="paragraphs"><p>ಫುಟ್‌ಬಾಲ್</p></div>

ಫುಟ್‌ಬಾಲ್

   

ನವದೆಹಲಿ: ಭಾರತ ಫುಟ್‌ಬಾಲ್‌ ತಂಡದ ಹೆಡ್‌ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದವರಲ್ಲಿ ವಿಶ್ವಕಪ್‌ ಗೆದ್ದ ಸ್ಪೇನ್‌ ತಂಡದ ಮಿಡ್‌ಫೀಲ್ಡರ್‌ ಝಾವಿ ಹೆರ್ನಾಂಡಿಸ್‌ ಅವರೂ ಒಳಗೊಂಡಿರುವುದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ಗೆ ಅನಿರೀಕ್ಷಿತ ಖುಷಿ ತಂದಿದೆ. ಆದರೆ ಅವರ ಅರ್ಜಿಯನ್ನು ಪುರಸ್ಕರಿಸುವಂತೆಯೂ ಇಲ್ಲ.

45 ವರ್ಷ ವಯಸ್ಸಿನ ಝಾವಿ ಈ ಹುದ್ದೆಗೆ ಸ್ವಂತ ಇ–ಮೇಲ್‌ ಖಾತೆಯಿಂದಲೇ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ವಿಶ್ವದ ಅತ್ಯಂತ ಶ್ರೇಷ್ಠ ಮಿಡ್‌ಫೀಲ್ಡರ್‌ಗಳಲ್ಲಿ ಒಬ್ಬರಾಗಿರುವ ಅರ್ಜಿಗೆ ಮನ್ನಣೆ ನೀಡಿದರೆ, ಅವರ ನೇಮಕ ಎಐಎಫ್‌ಎಫ್‌ಗೆ ‘ಬಿಳಿಯಾನೆ’ ಆಗಬಹುದು.

ADVERTISEMENT

‘ನಿಜ, ಝಾವಿ ಅವರು ಸೀನಿಯರ್ ಫುಟ್‌ಬಾಲ್ ತಂಡದ ಹೆಡ್‌ ಕೋಚ್‌ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅವರು ತಮ್ಮ ಮೇಲ್‌ನಿಂದಲೇ ತಾಂತ್ರಿಕ ಸಮಿತಿ ಸದಸ್ಯರಿಗೆ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಈ ಸ್ಥಾನ ನಿರ್ವಹಿಸಲು ತುಂಬಾ ಆಸಕ್ತಿ ಇದ್ದಂತೆ ಕಾಣುತ್ತಿದೆ’ ಎಂದು ಎಐಎಫ್‌ಎಫ್‌ನ ಮೂಲವೊಂದು ಶುಕ್ರವಾರ ಪಿಟಿಐಗೆ ತಿಳಿಸಿದೆ.

ಆದರೆ ಅಂತಿಮವಾಗಿ ಫೆಡರೇಷನ್‌ ಸಮ್ಮತಿ ಪಡೆಯಲು ಕಾರ್ಯಕಾರಿ ಸಮಿತಿಗೆ ಆಯ್ದ ಕೋಚ್‌ಗಳನ್ನು ಶಿಫಾರಸು ಮಾಡುವ ತಾಂತ್ರಿಕ ಸಮಿತಿ ಸದಸ್ಯರಿಗೆ ಈ ಕೆಲಸ ಸುಲಭವಲ್ಲ ಎಂದು ತಿಳಿಯದ ವಿಚಾರವನೇಲ್ಲ.

ಗ್ರೀಸ್‌ ಮೂಲದ ಇಂಗ್ಲೆಂಡ್‌ನ ಸ್ಟೀಫನ್‌ ಕಾನ್‌ಸ್ಟಂಟಿನ್, ಸ್ಲೊವೇನಿಯಾದ ಸ್ಟಿಫಾನ್ ಟಾರ್ಕೊವಿಕ್‌ ಮತ್ತು ಭಾರತದವರೇ ಆಗಿರುವ ಖಾಲಿದ್‌ ಜಮಿಲ್ ಅವರು ಶಾರ್ಟ್‌ಲಿಸ್ಟ್‌ ಆದವರ ಪಟ್ಟಿಯಲ್ಲಿದ್ದಾರೆ. ಈ ಮೂವರಲ್ಲಿ ಜಮೀಲ್ ಹೆಸರು ಮುಂಚೂಣಿಯಲ್ಲಿದೆ.

ವರ್ಷದಿಂದ ತಂಡದ ನಿರ್ವಹಣೆ ಕಳಪೆಯಾದ ಕಾರಣ ಕೋಚ್‌ ಮನೊಲೊ ಮಾರ್ಕ್ವೆಝ್ ಅವರು ಹುದ್ದೆ ತೊರೆದ ಕಾರಣ ಆ ಸ್ಥಾನಕ್ಕೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ತಂಡ ವಿಶ್ವ ರ‍್ಯಾಂಕಿಂಗ್‌ನಲ್ಲಿ 133ನೇ ಸ್ಥಾನಕ್ಕೆ ಕುಸಿದಿದ್ದು, ಇದು 9 ವರ್ಷಗಳಲ್ಲೇ ಅತ್ಯಂತ ಕಡಿಮೆ ರ‍್ಯಾಂಕಿಂಗ್ ಆಗಿದೆ.

ಜುಲೈ 4ರಂದು ಎಐಎಫ್‌ಎಫ್‌ ಅರ್ಜಿಗಳನ್ನು ಆಹ್ವಾನಿಸಿದ್ದು, 13 ಕೊನೆಯ ದಿನವಾಗಿತ್ತು. ಲಿವರ್‌ಪೂಲ್‌ ತಾರೆಯರಾದ ರಾಬಿ ಫೌಲರ್‌, ಹ್ಯಾರಿ ಕೆವೆಲ್‌ ಅವರನ್ನೂ ಒಳಗೊಂಡು 170 ಅರ್ಜಿಗಳು ಸಲ್ಲಿಕೆಯಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.