ADVERTISEMENT

ಪಾಂಚಾಲ್ ಪಡೆಗೆ ಗೆಲುವಿನ ಭರವಸೆ

ಹುಬ್ಬಳ್ಳಿ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಶ್ರೀಲಂಕಾ ‘ಎ’ ವಿರುದ್ಧ ಎರಡನೇ ‘ಟೆಸ್ಟ್’ ಪಂದ್ಯ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 30 ಮೇ 2019, 20:17 IST
Last Updated 30 ಮೇ 2019, 20:17 IST
ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಭಾರತ ‘ಎ‘ ತಂಡದ ಆಟಗಾರರು ಗುರುವಾರ ಅಭ್ಯಾಸ ನಡೆಸಿದರು– ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌
ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಭಾರತ ‘ಎ‘ ತಂಡದ ಆಟಗಾರರು ಗುರುವಾರ ಅಭ್ಯಾಸ ನಡೆಸಿದರು– ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌   

ಹುಬ್ಬಳ್ಳಿ: ಭಾರತ ಹಾಗೂ ಶ್ರೀಲಂಕಾ ‘ಎ’ ತಂಡಗಳ ಎರಡನೇ ‘ಟೆಸ್ಟ್‌’ ಪಂದ್ಯ ಇಲ್ಲಿನ ಕೆಎಸ್‌ಸಿಎ ಮೈದಾನದಲ್ಲಿ ಶುಕ್ರವಾರ ಆರಂಭವಾಗಲಿದೆ. ಬೆಳಗಾವಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಜಯ ಸಾಧಿಸಿರುವ ಭಾರತ ತಂಡ ಸತತ ಗೆಲುವಿನ ನಿರೀಕ್ಷೆಯಲ್ಲಿದೆ. ಸಮಬಲ ಸಾಧಿಸುವ ತವಕದಲ್ಲಿ ಶ್ರೀಲಂಕಾ ತಂಡ ಕಣಕ್ಕೆ ಇಳಿಯಲಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತ ‘ಎ’ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್, ‘ಮೊದಲ ಪಂದ್ಯದಲ್ಲಿ ತಂಡ ಪೂರ್ಣ ಸಾಮರ್ಥ್ಯದೊಂದಿಗೆ ಆಡಿತ್ತು. ಎರಡನೇ ಪಂದ್ಯದಲ್ಲಿಯೂ ಉತ್ತಮ ಆಟವನ್ನು ಮುಂದುವರಿಸಿ ಗೆಲುವು ಸಾಧಿಸುವ ವಿಶ್ವಾಸ ಇದೆ’ ಎಂದರು. ಬೌಲರ್ ಅಂಕಿತ್ ರಜಪೂತ್ ಗಾಯಗೊಂಡಿದ್ದು, ಅವರ ಬದಲಿಗೆ ಯಾರನ್ನು ಆಡಿಸಬೇಕು ಎಂದು ಇನ್ನೂ ತೀರ್ಮಾನ ಮಾಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಹಲವಾರು ಬದಲಾವಣೆಗಳೊಂದಿಗೆ ಎರಡನೇ ಪಂದ್ಯದಲ್ಲಿ ಆತಿಥೇಯರನ್ನು ಎದುರಿಸಲು ಸಜ್ಜಾಗಿದ್ದೇವೆ. ಎರಡನೇ ಪಂದ್ಯದಲ್ಲಿ ಜಯ ಸಾಧಿಸುವ ವಿಶ್ವಾಸ ಇದೆ’ ಎಂದು ಶ್ರೀಲಂಕಾ ತಂಡದ ನಾಯಕ ಅಶಾನ್ ಪ್ರಿಯಂಜನ್ ತಿಳಿಸಿದರು.

ADVERTISEMENT

‘2013ರಲ್ಲಿ ಭಾರತ ‘ಎ’ ಹಾಗೂ ವೆಸ್ಟ್‌ಇಂಡೀಸ್ ‘ಎ’ ತಂಡಗಳ ನಡುವೆ ಇಲ್ಲಿ ಪಂದ್ಯ ನಡೆದಿತ್ತು. ಈಗ ಮತ್ತೆ ‘ಎ’ ತಂಡಗಳ ನಡುವಿನ ಪಂದ್ಯಕ್ಕೆ ಕ್ರೀಡಾಂಗಣ ಸಜ್ಜಾಗಿದೆ’ ಕೆಎಸ್‌ಸಿಎ ಧಾರವಾಡ ವಲಯ ಸಂಚಾಲಕ ಬಾಬಾ ಭೂಸದ್ ಹೇಳಿದರು.

ಎರಡೂ ತಂಡಗಳ ಆಟಗಾರರು ಗುರುವಾರ ಬೆಳಿಗ್ಗೆ ಕಠಿಣ ಅಭ್ಯಾಸ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.