ADVERTISEMENT

ಅಂಗವೈಕಲ್ಯ ಶಾಪವಲ್ಲ; ದೈವ ಕಾಣಿಕೆ

ಮನೆಯಂಗಳದಲ್ಲಿ ಮಾತುಕತೆಯಲ್ಲಿ ಅಂತರರಾಷ್ಟ್ರೀಯ ಪ್ಯಾರಾ ಅಥ್ಲೀಟ್ ಮಾಲತಿ ಹೊಳ್ಳ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2019, 20:00 IST
Last Updated 16 ಫೆಬ್ರುವರಿ 2019, 20:00 IST
   

ಬೆಂಗಳೂರು: ಅಂಗವೈಕಲ್ಯ ಎನ್ನುವುದು ಶಾಪವಲ್ಲ. ಅದು ದೇವರು ಕೊಟ್ಟ ಕಾಣಿಕೆ. ಕೀಳರಿಮೆ ಮತ್ತು ಅಸಾಧ್ಯ ಪದಗಳನ್ನು ಜೀವನದ ನಿಘಂಟಿನಿಂದ ಕಿತ್ತೊಗೆದರೆ ಯಶಸ್ಸು ಸಾಧ್ಯ ಎಂದು ಅಂತರರಾಷ್ಟ್ರೀಯ ಪ್ಯಾರಾ ಅಥ್ಲೀಟ್ ಮಾಲತಿ ಹೊಳ್ಳ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶನಿವಾರ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸೋಲ್‌ನಲ್ಲಿ ನಡೆದಿದ್ದ ಪ್ಯಾರಾಲಿಂಪಿಕ್ಸ್‌ನಲ್ಲಿ ವ್ಹೀಲ್‌ ಚೇರ್ 200 ಮೀಟರ್ಸ್‌ ವಿಭಾಗದಲ್ಲಿ ಫೈನಲ್ ತಲುಪಿದ್ದ ಮಾಲತಿ ತಮ್ಮ ಜೀವನದ ಕಥೆಯನ್ನು ಇಲ್ಲಿ ಬಿಚ್ಚಿಟ್ಟರು.

‘ನಮ್ಮ ಕುಟುಂಬವು ಉಡುಪಿ ಸಮೀಪದ ಕೋಟ ಊರಿನದ್ದು. ನಾಲ್ಕು ಮಕ್ಕಳಲ್ಲಿ ನಾನು ಒಬ್ಬಳು. ಕಡುಬಡತನದ ಜೀವನ. ಅಪ್ಪ ಅಮ್ಮ ಕುಟುಂಬ ಸಮೇತ ಬೆಂಗಳೂರಿಗೆ ಬಂದು ನೆಲೆಸಿದರು. ಇಲ್ಲಿ ಹೋಟೆಲ್‌ನಲ್ಲಿ ಕೆಲಸ ಮಾಡಿ ಕುಟುಂಬವನ್ನು ಸಲಹಿದರು. ದುರದೃಷ್ಟಕ್ಕೆ ನನಗೆ ಹತ್ತು ತಿಂಗಳು ತುಂಬಿದಾಗ ಪೊಲಿಯೊಗೆ ತುತ್ತಾದೆ. ಇಡೀ ದೇಹವೇ ತೊಂದರೆಗೊಳಗಾಯಿತು. ನನ್ನ ಪ್ರತಿಯೊಂದು ಕೆಲಸಕ್ಕೂ ಅಮ್ಮನೇ ಆಧಾರವಾಗಿದ್ದರು. ಎಷ್ಟೇ ತೊಂದರೆಯಾದರೂ ಅವರ ಉತ್ಸಾಹ ಕುಗ್ಗಲಿಲ್ಲ.

ADVERTISEMENT

ಅವರಿಗೆ ತಮ್ಮ ಮಗಳು ಯಾವುದೋ ಸಿನಿತಾರೆಯಂತೆ ಕಂಗೊಳಿಸಬೇಕು ಎಂಬ ಗುರಿ ಇರಲಿಲ್ಲ. ಆದರೆ ತನ್ನ ಇನ್ನುಳಿದ ಮೂವರು ಮಕ್ಕಳಂತೆ ಆದರೆ ಅಷ್ಟೇ ಸಾಕು ಎಂಬ ಆಸೆ ಇತ್ತು. ಆಗಿನ ಕಾಲದಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನೀಡುತ್ತಿದ್ದ ಶಾಕ್‌ ಟ್ರೀಟ್‌ಮೆಂಟ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಆರ್ಥಿಕ ಶಕ್ತಿ ಇರಲಿಲ್ಲ. ನಿಧಾನವಾಗಿ ಚಿಕಿತ್ಸೆಗೆ ಸ್ಪಂದಿಸಿದೆ. ದೇಹದ ಮೇಲ್ಭಾಗದಲ್ಲಿ ಚೈತನ್ಯ ಬರಲಾರಂಭಿಸಿತು. ಇದು ಆತ್ಮವಿಶ್ವಾಸ ಹೆಚ್ಚಿಸಿತು.

‘ಇದುವರೆಗೆ ನನ್ನ ಜೀವನದಲ್ಲಿ ಒಟ್ಟು 34 ಬಾರಿ ಶಸ್ತ್ರಚಿಕಿತ್ಸೆಗಳು ಆಗಿವೆ. ನನ್ನ ಬಾಲ್ಯವಂತೂ ಹಾಸಿಗೆಯ ಮೇಲೆ ಕಳೆದುಹೋಯಿತು. ಚೆನ್ನೈನಲ್ಲಿದ್ದ ಪುನಶ್ಚೇತನ ಶಿಬಿರದಲ್ಲಿ ನನ್ನ ಸೇರಿಸಿದ್ದರು. ಅಲ್ಲಿ ನನ್ನಂತಹ ಅಂಗವಿಕಲ ಮಕ್ಕಳೊಂದಿಗೆ ಬಾಲ್ಯ ಕಳೆಯಿತು. ಆದರೆ ಓದುವ ಅದ್ಯಮ ಆಸೆಯನ್ನು ಬಿಟ್ಟುಕೊಡಲಿಲ್ಲ. ನನ್ನ ಟೀಚರ್ ಸಂಪೂರ್ಣ ಬೆಂಬಲ ನೀಡಿದರು. ಹಾಸಿಗೆಯ ಮೇಲೆ ಮಲಗಿಯೇ ಪರೀಕ್ಷೆಗಳನ್ನು ಬರೆದೆ. ಮೊದಲ ರ‍್ಯಾಂಕ್ ಗಳಿಸಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಒಂದಿಲ್ಲೊಂದು ಶಸ್ತ್ರಚಿಕಿತ್ಸೆ ಇದ್ದೇ ಇರುತ್ತಿತ್ತು. ದೇಹದ ನೋವು, ಮನಸ್ಸಿನ ವೇದನೆ ಮರೆಯಲು ಓದು ಆಪ್ತವಾಯಿತು. ಹಾಸ್ಟೆಲ್ ವಾರ್ಡನ್ ಕೊಡುತ್ತಿದ್ದ ಪೆಟ್ಟುಗಳು ಹೋರಾಟ ಮನೋಭಾವ ಮತ್ತು ನಾಯಕತ್ವ ಗುಣಗಳನ್ನು ಉದ್ದೀಪಿಸಿದವು. ಅವು ಮುಂದೆ ಬಾಳಿಗೆ ಬೆಳಕಾದವು.

‘ಎಸ್ಸೆಸ್ಸೆಲ್ಸಿಯಾದ ನಂತರ ಬೆಂಗಳೂರಿಗೆ ಪಿಯುಸಿ ಓದಲು ಬಂದೆ. ಮಹಾರಾಣಿ ಕಾಲೇಜಿನಲ್ಲಿ ನನ್ನ ಕ್ಲಾಸು ಮೂರನೇ ಮಹಡಿಯಲ್ಲಿತ್ತು. ಆಗ ಉರುಗೋಲು ಬಳಸಿ ಓಡಾಡುತ್ತಿದ್ದೆ. ಮೆಟ್ಟಿಲು ಹತ್ತಿ ಕ್ಲಾಸ್ ಸೇರುವವರೆಗೆ ಪಾಠದ ಅವಧಿ ಮುಗಿದು ಹೋಗಿತ್ತು. ಒಂದರಡು ದಿನಗಳಾದ ಮೇಲೆ ಅಪ್ಪನ ಮುಂದೆ ಕುಳಿತು ನಾನಿನ್ನು ಕಾಲೇಜಿಗೆ ಹೋಗಲ್ಲ. ಆದರೆ ಓದುವ ಆಸೆ ಇದೆ ಎಂದು ಬೇಸರ ವ್ಯಕ್ತಪಡಿಸಿದೆ. ಆಗ ನನ್ನ ತಂದೆ,ಸಮಸ್ಯೆಗಳನ್ನು ಎದುರಿಸಿ ನಿಲ್ಲಬೇಕು. ಹತಾಶಳಾಗಬಾರದು. ನಾನು ದಾರಿ ತೋರಿಸಿದ್ದೇನೆ. ಅವಕಾಶ ಇದೆ. ಮುಂದೆ ನಡೆಯಬೇಕಿರುವುದು ನೀನು. ಇಡೀ ಕಾಲೇಜಿನಲ್ಲಿ ಒಬ್ಬಳೇ ಅಂಗವಿಕಲ ವಿದ್ಯಾರ್ಥಿನಿ ಇರುವುದು ನಿಮ್ಮ ಪ್ರಾಚಾರ್ಯರಿಗೆ ಗೊತ್ತಿರಲಿಕ್ಕಿಲ್ಲ. ಅವರನ್ನು ಭೇಟಿಯಾಗಿ ಮಾತನಾಡಬಾರದೇಕೆ? ಎಂದು ಸಲಹೆ ನೀಡಿದ್ದರು. ಮರುದಿನ ಸೀದಾ ಪ್ರಾಚಾರ್ಯರ ಬಳಿ ಹೋಗಿ ಸಮಸ್ಯೆ ಹೇಳಿಕೊಂಡೆ. ಅದಕ್ಕೆ ಸ್ಪಂದಿಸಿದ ಅವರು ಕ್ಲಾಸುಗಳನ್ನು ನೆಲಮಹಡಿಗೆ ಸ್ಥಳಾಂತರಿಸಿದರು. ಅದು ನನ್ನ ಆತ್ಮವಿಶ್ವಾಸವನ್ನು ಇಮ್ಮಡಿಸಿತು.

‘ದೇಹವನ್ನು ಗಟ್ಟಿಗೊಳಿಸಿಕೊಳ್ಳಲು ಕ್ರೀಡೆಯಲ್ಲಿ ಭಾಗವಹಿಸಬೇಕು ಎಂಬ ಛಲ ಮೂಡಿತು. ಆದ್ದರಿಂದ ಆಟೋಟಗಳಲ್ಲಿ ಭಾಗವಹಿಸಲು ಆರಂಭಿಸಿದೆ. ಕಾಲೇಜು, ಅಂತರ ಕಾಲೇಜು, ರಾಜ್ಯಮಟ್ಟದಲ್ಲಿ ಪದಕಗಳು ಒಲಿಯತೊಡಗಿದವು. ಸೋಲ್ ಪ್ಯಾರಾಲಿಂಪಿಕ್ಸ್‌ಗೆ ಆಯ್ಕೆಯಾದೆ. ಆ ಸಂದರ್ಭದಲ್ಲಿ ಕ್ರೀಡಾ ಸಚಿವರಿಂದ ಅನುಮತಿ ಪತ್ರ ಪಡೆಯಲು ಹೋದೆ. ಆದೇ ಹೊತ್ತಿಗೆ ಒಲಿಂಪಿಕ್ಸ್‌ಗೆ ಹೋದ ಅಥ್ಲೀಟ್‌ಗಳು ಪದಕಗಳಿಲ್ಲದೇ ಮರಳಿದ್ದ ಬೇಸರದಲ್ಲಿ ಸಚಿವರು ಇದ್ದರು. ನಾನು ಹೋಗಿ ಪತ್ರ ಕೇಳಿದ್ದಕ್ಕೆ, ಯಾಕೇ ಆತುರಪಡ್ತೀರಿ. ಪಿ.ಟಿ. ಉಷಾ ಅವರೇ ಗೆದ್ದು ಬಂದಿಲ್ಲ. ನೀವೇನು ಉಷಾನಾ ಎಂದು ಗದರಿದ್ದರು. ಅದಕ್ಕೆ ಉತ್ತರವಾಗಿ ನಾನು, ಉಷಾ ವ್ಹೀಲ್‌ಚೇರ್‌ನಲ್ಲಿ ನೂರು ಮೀಟರ್ಸ್‌ ಓಡಲು ಸಾಧ್ಯವಿಲ್ಲ. ನಾನು ಅವರಂತೆ ಬೂಟು ತೊಟ್ಟು ಟ್ರ್ಯಾಕ್‌ನಲ್ಲಿ ಓಡಲಾಗುವುದಿಲ್ಲ. ಅವರು ಅವರೇ, ನಾನು ನಾನೇ. ಕೊನೆ ಪಕ್ಷ ಫೈನಲ್‌ಗಾದರೂ ತಲುಪುವ ಪ್ರಯತ್ನ ಮಾಡ್ತೇನೆ ಎಂದಿದ್ದೆ. ಅನುಮತಿ ದೊರೆಯಿತು. ಗಾಲಿಕುರ್ಚಿಯ ನೂರು ಮೀಟರ್‌ನಲ್ಲಿ ವೈಫಲ್ಯ ಅನುಭವಿಸಿದೆ. ಆದರೆ 200 ಮೀಟರ್ಸ್‌ನಲ್ಲಿ ಫೈನಲ್ ತಲುಪಿದೆ. ಅದು ದಾಖಲೆಯಾಗಿದೆ

‘ಸಿಂಡಿಕೇಟ್ ಬ್ಯಾಂಕ್‌ನಲ್ಲಿ ನೌಕರಿ ಸಿಕ್ಕಿತು. ಜೀವನದಲ್ಲಿ ಹಣ, ಹೆಸರು ಎಲ್ಲವನ್ನೂ ದೇವರು ಕೊಟ್ಟ. ಸಮಾಜಕ್ಕೆ ನಾನೇನು ಕೊಟ್ಟೆ ಎಂಬ ಕೊರಗು ಕಾಡಲಾರಂಭಿಸಿತು. ಅದಕ್ಕಾಗಿ ಆರು ಜನ ಸಮಾನಮನಸ್ಕ ಸ್ನೇಹಿತರೊಂದಿಗೆ ಮಾತೃ ಫೌಂಡೇಷನ್ ಆರಂಭಿಸಿದೆ. ಎರಡು ಮಕ್ಕಳಿಂದ ಆರಂಭವಾದ ಸಂಸ್ಥೆ ಇವತ್ತು ಮೂವತ್ತು ಮಕ್ಕಳ ತುಂಬಿದ ಮನೆಯಾಗಿದೆ. ಗ್ರಾಮೀಣ ಪ್ರದೇಶಗಳ ಅಂಗವಿಕಲ ಮಕ್ಕಳನ್ನು ಸೇರಿಸಿಕೊಳ್ಳುತ್ತೇವೆ. ಅವರಿಗೆ ಚಿಕಿತ್ಸೆ, ವಿದ್ಯೆ, ತರಬೇತಿ, ಉದ್ಯೋಗ ಮಾರ್ಗದರ್ಶನ ನೀಡುತ್ತೇವೆ. ಅವರು ಸ್ವಾವಲಂಭಿಗಳಾದಾಗ ಸಾರ್ಧಕ ಭಾವ ಮೂಡುತ್ತದೆ. ಅಂಗವೈಕಲ್ಯ ಶಾಪವಲ್ಲ ಎಂದು ಸಾಬೀತುಪಡಿಸಿದ ತೃಪ್ತಿ ಸಿಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.