ADVERTISEMENT

ಪೆಂಕಾಕ್ ಸಿಲಾಟ್‌ನಲ್ಲಿ ಗುಲಬರ್ಗಾ ವಿವಿ ಛಾಪು

ಸತೀಶ ಬಿ.
Published 31 ಮಾರ್ಚ್ 2019, 13:15 IST
Last Updated 31 ಮಾರ್ಚ್ 2019, 13:15 IST
ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಚಾಂಪಿಯನ್‌ಷಿಪ್‌ನಲ್ಲಿ ಪದಕ ಜಯಿಸಿದ ಗುಲಬರ್ಗಾ ವಿವಿ ತಂಡ. (ಎಡದಿಂದ ನಿಂತವರು) ಆಕಾಶ್ ಪವಾರ್, ಸಿದ್ಧಾರ್ಥ್ ಮೋರೆ, ಸಾವಿತ್ರಮ್ಮ, ಮಂಗಳಾ ವಿನಿತಾ, ಶರೀಫ್. (ಎಡದಿಂದ ಕುಳಿತವರು) ಮಾಲಾಶ್ರೀ, ಕೋಚ್ ಚಂದ್ರಶೇಖರ್ ಹಂಚಿನಾಳ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಎಂ.ಎಸ್.ಪಾಸೋಡಿ, ದೈಹಿಕ ಶಿಕ್ಷಣ ಕಾಲೇಜಿನ ಪ್ರಾಚಾರ್ಯ ಡಾ.ಎನ್.ಜಿ.ಕಣ್ಣೂರ, ಕೋಚ್ ಅಬ್ದುಲ್ ರಜಾಕ್ ಟೇಲರ್, ಸುವಿತ್ ಮೋರೆಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್‌.ಜಿ
ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಚಾಂಪಿಯನ್‌ಷಿಪ್‌ನಲ್ಲಿ ಪದಕ ಜಯಿಸಿದ ಗುಲಬರ್ಗಾ ವಿವಿ ತಂಡ. (ಎಡದಿಂದ ನಿಂತವರು) ಆಕಾಶ್ ಪವಾರ್, ಸಿದ್ಧಾರ್ಥ್ ಮೋರೆ, ಸಾವಿತ್ರಮ್ಮ, ಮಂಗಳಾ ವಿನಿತಾ, ಶರೀಫ್. (ಎಡದಿಂದ ಕುಳಿತವರು) ಮಾಲಾಶ್ರೀ, ಕೋಚ್ ಚಂದ್ರಶೇಖರ್ ಹಂಚಿನಾಳ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಎಂ.ಎಸ್.ಪಾಸೋಡಿ, ದೈಹಿಕ ಶಿಕ್ಷಣ ಕಾಲೇಜಿನ ಪ್ರಾಚಾರ್ಯ ಡಾ.ಎನ್.ಜಿ.ಕಣ್ಣೂರ, ಕೋಚ್ ಅಬ್ದುಲ್ ರಜಾಕ್ ಟೇಲರ್, ಸುವಿತ್ ಮೋರೆಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್‌.ಜಿ   

ಗುಲಬರ್ಗಾವಿಶ್ವವಿದ್ಯಾಲಯವು ಆರಂಭವಾಗಿ ಮೂರೂವರೆ ದಶಕಗಳಾಗಿವೆ. ಇದೇ ಮೊದಲ ಬಾರಿಗೆ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪೆಂಕಾಕ್ ಸಿಲಾಟ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಕ್ರೀಡೆಯಲ್ಲಿ ತನ್ನ ಛಾಪು ಮೂಡಿಸಿದೆ.

ಅಮೃತಸರದ ಗುರುನಾನಕ್ ದೇವ್ ವಿಶ್ವವಿದ್ಯಾಲಯದಲ್ಲಿ ಕಳೆದ ವಾರ ಮುಕ್ತಾಯವಾದ ಚಾಂಪಿಯನ್‌ಷಿಪ್‌ನಲ್ಲಿ ವಿವಿಯ ಸುವಿತ್ ಮೋರೆ ತುಂಗಲ್ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದು ಇಡೀ ವಿವಿ ಸಂಭ್ರಮಪಡುವಂತೆ ಮಾಡಿದ್ದಾರೆ. ಅಲ್ಲದೆ, ವಿವಿಯ ಮಹಿಳಾ ಹಾಗೂ ಪುರುಷರ ತಂಡಗಳು ವಿವಿಧ ವಿಭಾಗಗಳಲ್ಲಿ ಒಟ್ಟು ನಾಲ್ಕು ಬೆಳ್ಳಿ, ಏಳು ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಿವೆ.

2014ರಲ್ಲಿ ಕೊನೆಯ ಬಾರಿಗೆ ವಿವಿಗೆ ಪದಕ ಲಭಿಸಿತ್ತು. ಮಂಜುನಾಥ ಮಾದರ ಅವರು ಕುಸ್ತಿಯಲ್ಲಿ ಬೆಳ್ಳಿ ಪದಕ ತಂದು ಕೊಟ್ಟಿದ್ದರು. ಈ ಹಿಂದಿನ ಕ್ರೀಡಾಕೂಟಗಳಲ್ಲಿ ವಿವಿಯ ತಂಡಗಳು ಮುಖ್ಯ ಸುತ್ತಿನವರೆಗೆ ಹೋಗಿ ಪ್ರಶಸ್ತಿ ಗೆಲ್ಲದೆ ನಿರಾಸೆ ಅನುಭವಿಸುತ್ತಿದ್ದವು. ಈಗಿನ ಸಾಧನೆ ಕ್ರೀಡಾಪಟುಗಳಲ್ಲಿ ಹೊಸ ಚೈತನ್ಯವನ್ನು ಮೂಡಿಸಿದೆ.

ADVERTISEMENT

ಪೆಂಕಾಕ್ ಸಿಲಾಟ್‌ನಲ್ಲಿ ವಿವಿಯ ಕ್ರೀಡಾಪಟುಗಳು ಸಾದನೆ ಮಾಡಿ ಕೀರ್ತಿ ತಂದಿದ್ದಾರೆ. ಈ ಕ್ರೀಡೆಯನ್ನು ನಮ್ಮ ಭಾಗದಲ್ಲಿ ಇನ್ನಷ್ಟು ಬೆಳೆಸಲು ಅವಕಾಶ ಇದೆ. ಅದಕ್ಕೆ ವಿವಿಯಿಂದ ಅಗತ್ಯ ಪ್ರೋತ್ಸಾಹ ನೀಡಲಾಗುವುದು ಎನ್ನುತ್ತಾರೆ ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಎಂ.ಎಸ್.ಪಾಸೋಡಿ.

ಬೀದರ್, ರಾಯಚೂರು ಯಾದಗಿರಿ ಮತ್ತು ಕಲಬುರ್ಗಿಯಲ್ಲಿ ಒಂದು ದೈಹಿಕ ಶಿಕ್ಷಣ ಕಾಲೇಜು ಸೇರಿ ಒಟ್ಟು 485 ಕಾಲೇಜುಗಳಿವೆ. ಎಲ್ಲ ಕಾಲೇಜುಗಳಲ್ಲಿಯೂ ಪೆಂಕಾಕ್ ಸಿಲಾಟ್ ಕ್ರೀಡೆಯ ತರಬೇತಿ ಕೊಡಿಸಲಾಗುವುದು. ಮುಂದಿನ ದಿನಗಳಲ್ಲಿ ಆಲ್ ಇಂಡಿಯಾ ಪೆಂಕಾಕ್ ಸಿಲಾಟ್ ಮತ್ತು ಜಂಪ್‌ರೋಪ್ ಚಾಂಪಿಯನ್‌ಷಿಪ್‌ಗಳನ್ನು ಆಯೋಜಿಸಲು ಚಿಂತನೆ ನಡೆದಿದೆ ಎಂದರು.

‘ಐದು ವರ್ಷದವನಿದ್ದಾಗಿನಿಂದ ಮಾರ್ಷಲ್ ಆರ್ಟ್ ಕಲಿಯಲು ಆರಂಭಿಸಿದೆ. ಒಂದು ವರ್ಷದಿಂದ ಪೆಂಕಾಕ್ ಸಿಲಾಟ್ ತರಬೇತಿ ಪಡೆಯುತ್ತಿದ್ದೇನೆ. ಫೆಬ್ರುವರಿಯಲ್ಲಿ ನಡೆದ ಆಲ್ ಇಂಡಿಯಾ ಇಂಟರ್ ಜೋನಲ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದೆ. ಈಗ ಚಿನ್ನ ಗೆದ್ದಿರುವುದಕ್ಕೆ ಖುಷಿಯಾಗಿದೆ. ಏಷ್ಯನ್ ಗೇಮ್ಸ್, ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ, ಪದಕ ಗೆಲ್ಲಬೇಕು ಎಂಬುದು ನನ್ನ ಗುರಿ’ ಎಂದು ಸುವಿತ್ ಮೋರೆ ತಮ್ಮ ಕನಸು ಬಿಚ್ಚಿಟ್ಟರು. ಸುವಿತ್ ಬೀದರ್‌ನ ಅಂಬೇಡ್ಕರ್ ಕಾಲೇಜಿನಲ್ಲಿ ಬಿಎ ಓದುತ್ತಿದ್ದಾರೆ.

‘ನಾನು ಕರಾಟೆ ಕಲಿಯುತ್ತಿದ್ದುದರಿಂದ ಪೆಂಕಾಕ್ ಸಿಲಾಟ್‌ ಕಷ್ಟವಾಗಲಿಲ್ಲ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಮೂರು ಗಂಟೆ ಅಭ್ಯಾಸ ಮಾಡುತ್ತಿದ್ದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲಬೇಕು ಎಂಬುದು ನನ್ನ ಕನಸು. ಆ ನಿಟ್ಟಿನಲ್ಲಿ ಅಭ್ಯಾಸ ಮಾಡುತ್ತೇನೆ’ ಎಂದು ಬೆಳ್ಳಿ ಪದಕ ಜಯಿಸಿರುವ ಮಾಲಾಶ್ರೀ ಮನೋಹರ್ ಹೇಳಿದರು. ಮಾಲಾಶ್ರೀ ವಿವಿಯ ದೈಹಿಕ ಶಿಕ್ಷಣ ಕಾಲೇಜಿನಲ್ಲಿ ಬಿಪಿ.ಇಡಿ ವ್ಯಾಸಂಗ ಮಾಡುತ್ತಿದ್ದಾರೆ.

ಸಿಬ್ಬಂದಿ ಕೊರತೆ
ವಿವಿ ಅಡಿ ಇರುವ 485 ಕಾಲೇಜುಗಳ ಪೈಕಿ ಕೇವಲ 35 ಕಾಲೇಜುಗಳಲ್ಲಿ ಮಾತ್ರ ದೈಹಿಕ ಶಿಕ್ಷಣ ಶಿಕ್ಷಕರಿದ್ದಾರೆ. ಇದರಿಂದ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಡಲು ಸಾಧ್ಯವಾಗುತ್ತಿಲ್ಲ ಎಂದು ವಿವಿಯ ಸಿಬ್ಬಂದಿಯೊಬ್ಬರು ಹೇಳಿದರು.

ಎಲ್ಲ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಿ, ಅಗತ್ಯ ತರಬೇತಿ ನೀಡಿದರೆ ಹೆಚ್ಚಿನ ಸಾಧನೆ ಮೂಡಿಬರುತ್ತದೆ ಎಂಬುದು ಅವರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.