ಅದಿತಿ ಅಶೋಕ್
ಸಂಗ್ರಹ ಚಿತ್ರ
ಬೆಂಗಳೂರು: ದೇಶದ ಮೊದಲ ಮಹಿಳಾ ಗಾಲ್ಫ್ ಲೀಗ್ ಇದೇ ತಿಂಗಳ 13, 20 ಮತ್ತು 27ರಂದು ಬೆಂಗಳೂರಿನ ಗಾಲ್ಫ್ ಕ್ಲಬ್‌ನಲ್ಲಿ ನಡೆಯಲಿದೆ. ಒಟ್ಟು 90 ಆಟಗಾರ್ತಿಯರು ಭಾಗವಹಿಸುತ್ತಿದ್ದು, ಆರು ಫ್ರಾಂಚೈಸಿ ತಂಡಗಳಲ್ಲಿ ಆಡಲಿದ್ದಾರೆ.
ಮಹಿಳಾ ಮಾಲೀಕತ್ವದ ದೇಶದ ಮೊದಲ ಗಾಲ್ಫ್ ಕಂಪನಿಯಾದ 180 ಗಾಲ್ಫ್, ಮಹಿಳಾ ಗಾಲ್ಫ್ ಲೀಗ್‌ನ ಉದ್ಘಾಟನಾ ಆವೃತ್ತಿಯನ್ನು ಪರಿಚಯಿಸುತ್ತಿದೆ ಎಂದು ಕಂಪನಿಯ ಸಿಇಒ ಅಂಜಲಿ ಅತ್ತಾವರ ಸಂತೋಷ್ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪಾಲ್ಗೊಳ್ಳುತ್ತಿರುವ ಆರು ತಂಡಗಳೆಂದರೆ – ಟೀಮ್ ಈಸ್ಟ್‌ವೆಸ್ಟ್ ಎಲೀಟ್ಸ್, ಟೀಮ್ ಗೋಪಾಲನ್ ಜೈಂಟ್ಸ್, ಟೀಮ್ ರಾಮಯ್ಯ ರಾಯಲ್ಸ್, ಟೀಮ್ ಮೊರಡೊ ಮಹಿಳಾಸ್, ಟೀಮ್ ರಾಜ್ ಇನ್‌ಫ್ರಾ ಗ್ರೀನ್ ಲೆಜೆಂಡ್ಸ್ ಮತ್ತು ಟೀಮ್ ಸುದರ್ಶನ್ ಸ್ಪೈಕರ್ಸ್. ಫೆಬ್ರುವರಿಯಲ್ಲಿ ಆಟಗಾರ್ತಿಯರ ಬಿಡ್ಡಿಂಗ್ ನಡೆದಿದೆ ಎಂದರು.
ರಾಜ್ಯದಲ್ಲಿ ಪ್ರಸ್ತುತ 350 ಮಂದಿ ಮತ್ತು ರಾಜಧಾನಿಯಲ್ಲಿ 200 ಮಂದಿ ಮಹಿಳೆಯರು ಗಾಲ್ಫ್ ಆಡುತ್ತಿದ್ದಾರೆ. ಮಹಿಳೆಯರಿಗೆ ಸ್ಪರ್ಧಿಸಲು ಅವಕಾಶ ನೀಡುವುದು ಮತ್ತು ಬೆಂಬಲ ನೀಡುವುದು 180ಗಾಲ್ಫ್ ಉದ್ದೇಶ. ಈ ಲೀಗ್‌ಅನ್ನು ಪ್ರತಿ ವರ್ಷ ನಡೆಸಲು ಉದ್ದೇಶಿಸಿದ್ದೇವೆ ಎಂದು ವಿವರಿಸಿದರು.
ಸ್ಪರ್ಧಿಗಳಲ್ಲಿ ಬಹುತೇಕ ಮಂದಿ ಬೆಂಗಳೂರಿನವರು. ನಗರದಲ್ಲಿ ಉದ್ಯೋಗದಲ್ಲಿರುವ ಕೊರಿಯಾದ ಆಟಗಾರ್ತಿಯರು, ಕೋಲ್ಕತ್ತದಿಂದ ಆಟಗಾರ್ತಿಯೊಬ್ಬರು ಇವರಲ್ಲಿ ಒಳಗೊಂಡಿದ್ದಾರೆ ಎಂದರು.
ಟೂರ್ನಿಯ ಅಧ್ಯಕ್ಷ ವಿಘ್ನೇಶ್ ಹೆಬ್ಬಾರ್ ಅವರು ಲೀಗ್‌ನ ಮಾದರಿಯನ್ನು ವಿವರಿಸಿದರು. ಆರು ತಂಡಗಳು ಮಾ.13, 20ರಂದು ಅರ್ಹತಾ ಲೀಗ್ ಸುತ್ತುಗಳನ್ನು ಆಡಲಿವೆ. ಅಗ್ರ ನಾಲ್ಕು ತಂಡಗಳು 27ರಂದು ಫೈನಲ್ ಆಡಲಿವೆ ಎಂದರು.
180ಗಾಲ್ಫ್‌ನ ಸ್ಥಾಪಕರಾದ ಹೇಮಪ್ರಿಯಾ, ಸಮೃದ್ಧಿ ಸುಜೇಶ್, ತನಿಶಾ ರೊಹಿರಾ ಅವರೂ ಇದ್ದರು.
ಇದೇ ವೇಳೆ ಲೀಗ್‌ನ ಲೋಗೊ ಅನಾವರಣ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.