ADVERTISEMENT

ಖೇಲೊ ಇಂಡಿಯಾ: ಕೇರಳದ ಆ್ಯನ್ಸಿಗೆ ಎರಡು ಚಿನ್ನ

ಪಿಟಿಐ
Published 12 ಜನವರಿ 2020, 19:52 IST
Last Updated 12 ಜನವರಿ 2020, 19:52 IST

ಗುವಾಹಟಿ : ಕೇರಳದ ಆ್ಯನ್ಸಿ ಸೋಜನ್, ಇಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ಯೂತ್ ಗೇಮ್ಸ್‌ನ ಮೂರನೇ ದಿನವಾದ ಭಾನುವಾರ ಎರಡು ಚಿನ್ನ ಗೆದ್ದುಕೊಂಡರು. 21 ವರ್ಷದೊಳಗಿನ ಮಹಿಳೆಯರ 100 ಮೀಟರ್ಸ್ ಓಟದಲ್ಲಿ 12.21 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ಲಾಂಗ್‌ಜಂಪ್‌ನಲ್ಲಿ 6.36 ಮೀಟರ್ಸ್ ಸಾಧನೆ ಮಾಡಿದ ಅವರು ಕೂಟ ದಾಖಲೆಯನ್ನೂ ಮಾಡಿದರು. 18 ವರ್ಷದ ಸೋಜನ್ 20 ವರ್ಷದೊಗಳಗಿನವರ ವಿಭಾಗದ ರಾಷ್ಟ್ರೀಯ ದಾಖಲೆಯನ್ನೂ ತಮ್ಮ ಹೆಸರಿಗೆ ದಾಖಲಿಸಿಕೊಂಡರು. ತಮಿಳುನಾಡಿನ ಶೆರೀನ್ ಅಬ್ದುಲ್ ಗಫೂರ್ ಬೆಳ್ಳಿ ಪದಕ ಗಳಿಸಿದರು.

ತ್ರಿಶೂರ್‌ನ ನಾಟಿಕದಲ್ಲಿರುವ ಸರ್ಕಾರಿ ಫಿಷರೀಸ್ ಶಾಲೆಯ ವಿದ್ಯಾರ್ಥಿನಿಯಾಗಿರುವ ಸೋಜನ್ ಕಳೆದ ವಾರ ನಡೆದಿದ್ದ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ನಾಲ್ಕು ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದರು.

ADVERTISEMENT

21 ವರ್ಷದೊಳಗಿನ ಪುರುಷರ 100 ಮೀಟರ್ಸ್ ಓಟದಲ್ಲಿ ಹರಿಯಾಣದ ನುಸ್ರತ್ ಅಲಿ 10.77 ಸೆಕೆಂಡುಗಳ ಸಾಧನೆಯೊಂದಿಗೆ ಚಿನ್ನ ಗಳಿಸಿದರು. 17 ವರ್ಷದೊಳಗಿನ ಬಾಲಕಿಯರ ವಿಭಾಗದ 100 ಮೀಟರ್ಸ್ ಓಟದಲ್ಲಿ ತೆಲಂಗಾಣದ ಜೀವಾಂಜಿ ದೀಪ್ತಿ ಮತ್ತು ತಮಿಳುನಾಡಿನ ಋತಿಕಾ ಸರವಣನ್ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದುಕೊಂಡರು. ಇಬ್ಬರೂ 12.26 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು. ಫೋಟೊ ಫಿನಿಷ್‌ನಲ್ಲಿ ದೀಪ್ತಿಗೆ ಚಿನ್ನ ಒಲಿಯಿತು.

ಜಾರ್ಖಂಡ್‌ನ ಸದಾನಂದ ಕುಮಾರ್ 17 ವರ್ಷದೊಳಗಿನ ಬಾಲಕರ 100 ಮೀಟರ್ಸ್ ಓಟದಲ್ಲಿ 10.95 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದರು. ಮಹಾರಾಷ್ಟ್ರದ ಆಕಾಶ್‌ ಸಿಂಗ್ ಬೆಳ್ಳಿ ಪದಕ ಗೆದ್ದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.