ADVERTISEMENT

ಸೆಮಿಫೈನಲ್‌ಗೆ ಚಾನು, ಅರುಂಧತಿ

ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌

ಪಿಟಿಐ
Published 20 ಏಪ್ರಿಲ್ 2021, 13:44 IST
Last Updated 20 ಏಪ್ರಿಲ್ 2021, 13:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಭಾರತದ ಬೇಬಿರೋಜಿಸನಾ ಚಾನು ಅವರು ಹಾಲಿ ಯೂರೋಪಿಯನ್ ಚಾಂಪಿಯನ್‌ ಅಲೆಕ್ಸಾಸ್‌ ಕ್ಯುಬಿಕಾ ಅವರನ್ನು ಮಣಿಸಿ ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಪೋಲೆಂಡ್‌ನ ಕಿಯೆಲ್ಸೆಯಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮಂಗಳವಾರ ಭಾರತದ ಏಳು ಮಂದಿ ನಾಲ್ಕರ ಘಟ್ಟ ತಲುಪಿದರು.

ಬೇಬಿರೋಜಿಸನಾ (51 ಕೆಜಿ ವಿಭಾಗ) ಅವರೊಂದಿಗೆ ಅರುಂಧತಿ ಚೌಧರಿ (69 ಕೆಜಿ), ಸನಮಚಾ ಚಾನು (75 ಕೆಜಿ), ಅಂಕಿತ್ ನರ್ವಾಲ್‌ (64 ಕೆಜಿ), ವಿಶಾಲ್ ಗುಪ್ತಾ (91 ಕೆಜಿ), ವಿಶ್ವಾಮಿತ್ರ ಚೋಂಗ್ದಮ್‌ (49 ಕೆಜಿ) ಹಾಗೂ ಸಚಿನ್‌ (56 ಕೆಜಿ) ಸೆಮಿಫೈನಲ್ ತಲುಪಿದವರು.

ಸೋಮವಾರ ನಾಲ್ವರು ಬಾಕ್ಸರ್‌ಗಳು (ವಿಂಕಾ, ಅಲ್ಫಿಯಾ, ಗೀತಿಕಾ ಹಾಗೂ ಪೂನಂ) ನಾಲ್ಕರ ಘಟ್ಟ ಪ್ರವೇಶಿಸಿದ್ದರು.

ADVERTISEMENT

ಬೇಬಿರೋಜಿಸನಾ ಅವರು ಪೋಲೆಂಡ್‌ನ ಕ್ಯೂಬಿಕಾ ಎದುರು 5–0 ಅಂತರದ ಜಯ ಸಂಪಾದಿಸಿದರು. ಕ್ವಾರ್ಟರ್‌ಫೈನಲ್‌ನ ಇನ್ನುಳಿದ ಹಣಾಹಣಿಗಳಲ್ಲಿ ಅರುಂಧತಿ 5–0ಯಿಂದ ಉಕ್ರೇನ್‌ನ ಆ್ಯನಾ ಸೆಜ್ಕೊ ಎದುರು, ಸನಾಮಚಾ ಅವರು ರಷ್ಯಾದ ಮಾರ್ಗರಿಟಾ ಜ್ವೆವಾ ವಿರುದ್ಧ ಗೆದ್ದು ಸಂಭ್ರಮಿಸಿದರು.

ಪುರುಷರ ವಿಭಾಗದಲ್ಲಿ ಏಷ್ಯನ್ ಜೂನಿಯರ್ ಚಾಂಪಿಯನ್‌ ವಿಶ್ವಾಮಿತ್ರ ಹಾಗೂ ನರ್ವಾಲ್‌ ಅವರು ಕ್ರಮವಾಗಿ ಸರ್ಬಿಯಾದ ಒಮರ್ ಅಮೆಟೊವಿಕ್‌ ಹಾಗೂ ಬ್ರೆಜಿಲ್‌ನ ಇಜೆಕ್ವಿಲ್ ಡ ಕ್ರೂಜ್‌ ಅವರನ್ನು ಸುಲಭವಾಗಿ ಪರಾಭವಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.