ADVERTISEMENT

ಮತ್ತೆ ಅಟ್ಯಾ ಪಟ್ಯಾ ಸದ್ದು...

ಪ್ರಮೋದ ಜಿ.ಕೆ
Published 13 ಜನವರಿ 2019, 20:00 IST
Last Updated 13 ಜನವರಿ 2019, 20:00 IST
ಅಟ್ಯಾ ಪಟ್ಯಾ ಪಂದ್ಯದ ನೋಟ
ಅಟ್ಯಾ ಪಟ್ಯಾ ಪಂದ್ಯದ ನೋಟ   

ಉತ್ತರ ಕರ್ನಾಟಕದಲ್ಲಿ ಹೆಚ್ಚು ಖ್ಯಾತಿ ಹೊಂದಿರುವ ಅಟ್ಯಾ ಪಟ್ಯಾ ಕ್ರೀಡೆಯಲ್ಲಿ ಕರ್ನಾಟಕದ ಆಟಗಾರರು ರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿ ಸುದ್ದಿ ಮಾಡಿದ್ದಾರೆ.

ಮೂರೂವರೆ ದಶಕದ ಇತಿಹಾಸ ಹೊಂದಿರುವ ಈ ಕ್ರೀಡೆ ಇತ್ತೀಚಿನ ವರ್ಷಗಳಲ್ಲಿ ಮುನ್ನಲೆಗೆ ಬರುತ್ತಿದೆ.ಧಾರವಾಡ, ಬೆಳಗಾವಿ ವಿಜಯಪುರ ಕಡೆ ತಿಳ್ಳಿ,ಸರಗೆರಿ, ಸರಮನಿ ಎಂತಲೂ ಇದನ್ನು ಕರೆಯುತ್ತಾರೆ. ಈ ಕ್ರೀಡೆಗೆಕಳೆದ ಒಂದು ದಶಕದಿಂದ ವೃತ್ತಿಪರ ಸ್ಪರ್ಶ ಲಭಿಸಿದೆ. ಇದರಿಂದ ಕರ್ನಾಟಕ ತಂಡದಲ್ಲಿ ಆಟಗಾರರ ಸಂಖ್ಯೆ ಹೆಚ್ಚಾಗುತ್ತಿದೆ.

1981ರಲ್ಲಿ ನಾಗಪುರದಲ್ಲಿ ಅಟ್ಯಾ ಪಟ್ಯಾ ಫೆಡರೇಷನ್‌ ಆರಂಭವಾಯಿತು. ದಾವಣೆಗೆರೆಯ ಬಿಜಿಟಿ ಎಂಜಿನಿಯರಿಂಗ್‌ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ ಎಸ್‌.ಬಿ. ಹಳ್ಳದ ಅವರು ಈ ಕ್ರೀಡೆ ಕರ್ನಾಟಕದಲ್ಲಿ ನೆಲೆ ಕಂಡುಕೊಳ್ಳಲು ನೆರವಾದರು. ಫೆಡರೇಷನ್‌ನ ಅಧ್ಯಕ್ಷರು ಕೂಡ ಆಗಿದ್ದರು.

ADVERTISEMENT

ಬಸವರಾಜ ಹೊರಟ್ಟಿ ಅವರು ಗ್ರಾಮೀಣ ಭಾಗದಲ್ಲಿ ಈ ಕ್ರೀಡೆ ಖ್ಯಾತಿ ಹೊಂದಲು ನೆರವಾದರು. ಆರಂಭದ ಎರಡು, ಮೂರು ವರ್ಷ ನಾಗಪುರದಲ್ಲಿ ರಾಷ್ಟ್ರೀಯ ಟೂರ್ನಿಗಳು ನಡೆದವು.

ಈ ಎಲ್ಲ ಇತಿಹಾಸ ನೆನಪಿಸಿಕೊಳ್ಳಲು ಒಂದು ಕಾರಣವಿದೆ. ಇತ್ತೀಚಿಗೆ ಬಾಗಲಕೋಟೆ ಬಳಿಯ ಶಿರೂರಿನಲ್ಲಿ ನಡೆದ33ನೇ ರಾಷ್ಟ್ರೀಯ ಅಟ್ಯಾ-ಪಟ್ಯಾ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಪುರುಷರ ತಂಡ ಚಾಂಪಿಯನ್‌ ಆಯಿತು. ತವರಿನಲ್ಲಿ ನಡೆದ ಟೂರ್ನಿಯಲ್ಲಿ ರಾಜ್ಯ ತಂಡ 21 ವರ್ಷಗಳ ಬಳಿಕ ಟ್ರೋಫಿ ಎತ್ತಿ ಹಿಡಿದಿದ್ದು ವಿಶೇಷ.

1997ರಲ್ಲಿ ಜೋಧಪುರದಲ್ಲಿ ನಡೆದಿದ್ದ ರಾಷ್ಟ್ರೀಯ ಟೂರ್ನಿಯಲ್ಲಿ ಕರ್ನಾಟಕ ತಂಡ ಕೊನೆಯ ಸಲ ಚಾಂಪಿಯನ್‌ ಆಗಿತ್ತು. ಆ ಬಳಿಕ ಅನೇಕ ಸಲ ರನ್ನರ್ಸ್‌ ಅಪ್‌ ಆಗಿದೆ. ಹಲವು ಬಾರಿ ಮೂರನೇ ಸ್ಥಾನ ಪಡೆದಿದೆ. ಪ್ರಶಸ್ತಿ ಸನಿಹ ಬಂದರೂ ಟ್ರೋಫಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಈ ಬಾರಿಯ ಫೈನಲ್‌ನಲ್ಲಿ ಪುದುಚೇರಿ ತಂಡವನ್ನು ಮಣಿಸಿದ್ದು ವಿಶೇಷ.‌

ಏಕೆಂದರೆ, ಈ ಕ್ರೀಡೆಯಲ್ಲಿ ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳು ಕರ್ನಾಟಕಕ್ಕೆ ಯಾವಾಗಲೂ ಪ್ರಬಲ ಪೈಪೋಟಿ ಒಡ್ಡುತ್ತಲೇ ಬಂದಿವೆ. ಆದ್ದರಿಂದ ಆ ರಾಜ್ಯಗಳ ಸವಾಲನ್ನು ಮೆಟ್ಟಿ ನಿಂತು ಪ್ರಶಸ್ತಿ ಜಯಿಸಿದ್ದು ಈ ಬಾರಿಯ ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದೆ. ಕರ್ನಾಟಕದಲ್ಲಿ ಜೂನಿಯರ್‌ ತಂಡ ಕೂಡ ಬಲಿಷ್ಠವಾಗಿದೆ. ‘ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಎಲ್ಲ ತಂಡಗಳು ಪ್ರಬಲ ಪೈಪೋಟಿ ಒಡ್ಡಿದವು. ಆದ್ದರಿಂದ ಕರ್ನಾಟಕ ಪುರುಷರ ತಂಡ ಫೈನಲ್‌ ತನಕ ಪ್ರವೇಶಿಸಿದ ಹಾದಿ ಕಠಿಣವಾಗಿತ್ತು. ತವರೂರ ಕ್ರೀಡಾಪ್ರೇಮಿಗಳ ಎದುರು ಪ್ರಶಸ್ತಿ ಜಯಿಸಿದ್ದು ಅತೀವ ಸಂತಸ ತಂದಿದೆ’ ಎಂದುಭಾರತ ಅಟ್ಯಾ ಪಟ್ಯಾ ಫೆಡರೇಷನ್‌ ಅಧ್ಯಕ್ಷ ಡಾ.ವಿ.ಡಿ.ಪಾಟೀಲ ರಾಜ್ಯದ ಆಟಗಾರರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

ಕರ್ನಾಟಕ ತಂಡ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದರಿಂದ ಫೆ. 22ರಿಂದ ಮೂರು ದಿನ ಜಮ್ಮು ಮತ್ತು ಕಾಶ್ಮೀರ ಕಾಟ್ರಾದಲ್ಲಿ ನಡೆಯಲಿರುವ ಫೆಡರೇಷನ್‌ ಟೂರ್ನಿಗೂಅರ್ಹತೆ ಪಡೆದುಕೊಂಡಿತು. ಇಲ್ಲಿನ ಪ್ರಶಸ್ತಿ ಮುಂದಿನ ದೊಡ್ಡ ಸಾಧನೆಗೆ ಸ್ಫೂರ್ತಿಯಾಗಲಿದೆ.

ಕರ್ನಾಟಕ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈ ಕ್ರೀಡೆಯಲ್ಲಿ ಸಾಕಷ್ಟು ಅನುಭವ ಹೊಂದಿರುವ ಆಟಗಾರರು ಇದ್ದಾರೆ. ಈ ಕ್ರೀಡೆಯನ್ನು ಏಷ್ಯನ್‌ ಕ್ರೀಡಾಕೂಟಕ್ಕೆ ಸೇರ್ಪಡೆ ಮಾಡುವ ಬಗ್ಗೆಯೂ ಚರ್ಚೆ ನಡೆಯಿತು. ಇದೇ ಕಾರಣಕ್ಕೆ 1982ರಲ್ಲಿ ದೆಹಲಿಯಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಪ್ರದರ್ಶನ ಪಂದ್ಯ ಆಯೋಜಿಸಲಾಗಿತ್ತು. ಬಳಿಕ ದೇಶದ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಈ ಕ್ರೀಡೆಯ ರಾಜ್ಯ ಸಂಸ್ಥೆಗಳು ಉದಯವಾದವು.

ನಂತರದ ವರ್ಷಗಳಲ್ಲಿ ಭಾರತದ ಅಟ್ಯಾಪಟ್ಯಾ ಆಟಗಾರರು ರಷ್ಯಾಕ್ಕೆ ತೆರಳಿ ಕ್ರೀಡೆಯನ್ನು ಪರಿಚಯಿಸಿಕೊಟ್ಟರು. ಆದರೆ ಕರ್ನಾಟಕದಲ್ಲಿ, ಉತ್ತರ ಕರ್ನಾಟಕ ಭಾಗಕ್ಕೆ ಮಾತ್ರ ಈ ಕ್ರೀಡೆಸೀಮಿತವಾಗಿಬಿಟ್ಟಿತು. 2013ರಲ್ಲಿ ಭೂತಾನ್‌ನಲ್ಲಿ ಚೊಚ್ಚಲ ಸೌತ್‌ ಏಷ್ಯನ್‌ ಚಾಂಪಿಯನ್‌ಷಿಪ್‌ ನಡೆಯಿತು. ಅದೇ ವರ್ಷ ಭಟ್ಕಳದಲ್ಲಿಯೂ ರಾಷ್ಟ್ರೀಯ ಟೂರ್ನಿ ಜರುಗಿತ್ತು. ಆಗ 22 ತಂಡಗಳು ಪಾಲ್ಗೊಂಡಿದ್ದವು. ಉತ್ತರ ಕರ್ನಾಟಕದಲ್ಲಿ ಹುಣ್ಣಿಮೆಯ ದಿನ ಊರ ಮುಂದಿನ ಮೈದಾನದಲ್ಲಿ ಆಡುತ್ತಾರೆ. ಕಬಡ್ಡಿಗೆ ಯಾವ ರೀತಿಯ ಬೇಡಿಕೆ ಇದೆಯೋ, ಅಷ್ಟೇ ಬೇಡಿಕೆ ಈ ಅಟ್ಯಾಪಟ್ಯಾಕ್ಕೂ ಇದೆ. ಬೆಂಗಳೂರು, ಮೈಸೂರು, ಮಂಗಳೂರು ಭಾಗದಲ್ಲಿ ಈ ಕ್ರೀಡೆ ಈಗಲೂ ಬೆಳೆದಿಲ್ಲ.

ಅಟ್ಯಾ ಪಟ್ಯಾ, ಸೆಪಕ್‌ ಟಕ್ರಾ, ಸೈಕ್ಲಿಂಗ್‌ ಹೀಗೆ ಬಹುತೇಕ ಕ್ರೀಡೆಗಳು ಒಂದು ಪ್ರದೇಶಕ್ಕೆ ಸೀಮಿತವಾಗಿರುವ ಕಾರಣ ಎಲ್ಲ ಭಾಗಗಳಿಂದಲೂ ಕ್ರೀಡಾಪಟುಗಳುಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ. ಆದ್ದರಿಂದ ಈ ಕ್ರೀಡೆಗಳ ವಿಸ್ತಾರ ಹೆಚ್ಚಾಗಬೇಕಿದೆ. ಆಗ ಕ್ರೀಡೆಯೂ ಬೆಳೆಯುತ್ತದೆ, ಸಾಕಷ್ಟು ಕ್ರೀಡಾಪಟುಗಳು ಕೂಡ ಬರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.