ಬೆಂಗಳೂರು: ಎರಡನೇ ಶ್ರೇಯಾಂಕದ ಆಟಗಾರ, ಗ್ರ್ಯಾಂಡ್‌ಮಾಸ್ಟರ್ ಅಭಿಜಿತ್ ಗುಪ್ತಾ, 61ನೇ ರಾಷ್ಟ್ರೀಯ ಚೆಸ್ ಚಾಂಪಿಯನ್‌ಷಿಪ್‌ನ ಮೂರನೇ ಸುತ್ತಿನಲ್ಲಿ ಸೋಮವಾರ ಮಹಾರಾಷ್ಟ್ರದ ಸಿದ್ಧಾಂತ್ ಗವಾಯಿ ಜೊತೆ ‘ಡ್ರಾ’ ಮಾಡಿಕೊಂಡಿದ್ದು ದಿನದ ಅನಿರೀಕ್ಷಿತ ಎನಿಸಿತು.
ಸಿದ್ಧಾಂತ್ 2057 ರೇಟಿಂಗ್ ಹೊಂದಿದ್ದರೆ, ಪೆಟ್ರೋಲಿಯಂ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್‌ನ ಅಭಿಜಿತ್ 2583ರ ರೇಟಿಂಗ್ ಪಡೆದಿದ್ದಾರೆ. ಹತ್ತನೇ ಬೋರ್ಡ್‌ನಲ್ಲೂ ಅನಿರೀಕ್ಷಿತ ಫಲಿತಾಂಶದಲ್ಲಿ ರೈಲ್ವೇಸ್‌ನ ಎನ್.ಆರ್.ವಿಘ್ನೇಶ್ (2.5), ಹರಿಯಾಣದ ಅರ್ಷಪ್ರೀತ್ ಸಿಂಗ್ (2.5) ಜೊತೆ ಪಾಯಿಂಟ್ ಹಂಚಿಕೊಳ್ಳಬೇಕಾಯಿತು. ಈ ಎರಡು ಅನಿರೀಕ್ಷಿತಗಳನ್ನು ಬಿಟ್ಟರೆ ಉಳಿದಂತೆ ಶ್ರೇಯಾಂಕ ಆಟಗಾರರು ಮುನ್ನಡೆ ಸಾಧಿಸಿದರು.
ಆರು ಬಾರಿಯ ಚಾಂಪಿಯನ್, ಅಗ್ರ ಶ್ರೇಯಾಂಕದ ಸೂರ್ಯಶೇಖರ ಗಂಗೂಲಿ (ಪಿಎಸ್‌ಸಿಬಿ), ಎಸ್.ಪಿ.ಸೇತುರಾಮನ್ (ಪಿಎಸ್‌ಸಿಬಿ), ರೈಲ್ವೇಸ್‌ನ ದೀಪ್ತಾಯನ್ ಘೋಷ್, ಗ್ರ್ಯಾಂಡ್‌ಮಾಸ್ಟರ್ ಕಾರ್ತಿಕ್ ವೆಂಕಟರಾಮನ್ (ಆಂಧ್ರ ಪ್ರದೇಶ), ತಮಿಳುನಾಡಿನ ಇನಿಯನ್, ಮಹಾರಾಷ್ಟ್ರದ ಸಂಕಲ್ಪ್ ಗುಪ್ತಾ, ರೈಲ್ವೇಸ್‌ನ ಮಿತ್ರಬಾ ಗುಹಾ, ಅರಣ್ಯಕ್ ಘೋಷ್, ಕರ್ನಾಟಕದ ವಿಯಾನಿ ಡಿಕುನ್ಹಾ, ಕರ್ನಾಟಕದ ಎ.ಬಾಲಕಿಶನ್ ಅವರು ತಲಾ ಮೂರು ಅಂಕ ಗಳಿಸಿದ ಆಟಗಾರರಲ್ಲಿ ಒಳಗೊಂಡಿದ್ದಾರೆ.
ವಿಯಾನಿ, ಪಂಜಾಬ್‌ನ ಉತ್ಕೃಷ್ಟ್ ತುಲಿ (2) ವಿರುದ್ಧ ಜಯಗಳಿಸಿದರು. ಬಾಲಕಿಶನ್, ಪಂಜಾಬ್‌ನ ಶುಭಂ ಶುಕ್ಲಾ (2) ವಿರುದ್ಧ ಜಯಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.