ADVERTISEMENT

ಜಾವೆಲಿನ್ ಥ್ರೋ, ಓಟದ ಪ್ರಚಾರಕ್ಕೆ ಚಿಂತನೆ

ಎಎಫ್‌ಐ ವಾರ್ಷಿಕ ಸಾಮಾನ್ಯ ಸಭೆ: ಸುಳ್ಳು ಪತ್ತೆಗೆ ‘ಆನ್‌ಲೈನ್’ ಮದ್ದು ಪ್ರಯೋಗ

ಪಿಟಿಐ
Published 25 ಮೇ 2022, 13:12 IST
Last Updated 25 ಮೇ 2022, 13:12 IST
ಅಥ್ಲೆಟಿಕ್ ಟ್ರ್ಯಾಕ್
ಅಥ್ಲೆಟಿಕ್ ಟ್ರ್ಯಾಕ್   

ಚಂಡೀಗಢ: ರಾಷ್ಟ್ರೀಯ ಮಟ್ಟದಲ್ಲಿ ಜಾವೆಲಿನ್ ಥ್ರೋ ಮತ್ತು ಜಿಲ್ಲಾ ಮಟ್ಟದಲ್ಲಿ ದೂರ ಅಂತರದ ಓಟವನ್ನು ಪ್ರಚುರಪಡಿಸಲು ಕೈಗೊಳ್ಳಬೇಕಾದ ಯೋಜನೆಗಳ ಕುರಿತ ಚರ್ಚೆ ಭಾರತ ಅಥ್ಲೆಟಿಕ್ ಫೆಡರೇಷನ್‌ನ (ಎಎಫ್‌ಐ) ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರಮುಖ ವಿಷಯವಾಗಲಿದೆ.

ಎರಡು ದಿನಗಳ ಸಾಮಾನ್ಯ ಸಭೆ ಈ ವಾರಾಂತ್ಯದಲ್ಲಿ ನಡೆಯಲಿದೆ. ವೇಗನಡಿಗೆ ಮತ್ತು 400 ಮೀಟರ್ಸ್ ಓಟದ ಸ್ಪರ್ಧೆಗಳನ್ನು ಮುನ್ನೆಲೆಗೆ ತರುವ ಕುರಿತು ಕೂಡ ಚರ್ಚೆ ನಡೆಯಲಿದೆ. ಸ್ಥಳೀಯ ಮಟ್ಟದಲ್ಲಿ ಪಾರದರ್ಶಕತೆ ಮತ್ತು ವೃತ್ತಿಪರತೆಯನ್ನು ಉತ್ತೇಜಿಸವುದರ ಕಡೆಗೂ ಸಭೆ ಗಮನಹರಿಸಲಿದೆ.

ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಸುಳ್ಳು ವಯಸ್ಸಿನ ದಾಖಲೆಗಳನ್ನು ಸಲ್ಲಿಸುವುದು ಮತ್ತು ಒಬ್ಬರ ಬದಲಿಗೆ ಮತ್ತೊಬ್ಬರು ಹಾಜರಾಗುವುದನ್ನು ತಡೆಯಲು ಎಎಫ್‌ಐ ನಡೆಸುತ್ತಿರುವ ಪ್ರಯತ್ನದ ಅಂಗವಾಗಿ ಪ್ರವೇಶಪತ್ರಗಳನ್ನು ಆನ್‌ಲೈನ್ ಮೂಲಕ ಸಲ್ಲಿಸುವ ಪದ್ಧತಿ ಜಾರಿಗೆ ತರುವುದರ ಬಗ್ಗೆಯೂ ಚರ್ಚೆ ನಡೆಯಲಿದೆ. ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌, ಕಾಮನ್‌ವೆಲ್ತ್ ಗೇಮ್ಸ್‌ ಮತ್ತು ಏಷ್ಯನ್ ಗೇಮ್ಸ್‌ಗೆ ಭಾರತದ ಅಥ್ಲೀಟ್‌ಗಳನ್ನು ತಯಾರು ಮಾಡುವುದರ ಕುರಿತು ಚರ್ಚೆಯೂ ನಡೆಯಲಿದೆ.

ADVERTISEMENT

ಉದ್ದೇಶಿತ ಎಎಫ್‌ಐ ನಿಯಮಾವಳಿಗಳ ತಿದ್ದುಪಡಿ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಮಾದರಿ ನಿಯಮಾವಳಿಗಳನ್ನು ಜಾರಿಗೆ ತರುವುದು, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯ ನಿರ್ಣಯಗಳ ಜಾರಿ ಮತ್ತು ಫೆಡರೇಷನ್‌ಗೆ ಸ್ವಂತ ಕಟ್ಟಡದ ಕುರಿತ ಚರ್ಚೆಯೂ ಕಾರ್ಯಕ್ರಮ ಪಟ್ಟಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.