ADVERTISEMENT

ಹವ್ಯಕ ಬ್ಯಾಡ್ಮಿಂಟನ್ ಟೂರ್ನಿ | ಅಖಿಲ್‌, ವರ್ಷಾಗೆ ಸಿಂಗಲ್ಸ್ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 22:11 IST
Last Updated 21 ಜುಲೈ 2025, 22:11 IST
ಬ್ಯಾಡ್ಮಿಂಟನ್
ಬ್ಯಾಡ್ಮಿಂಟನ್   

ಬೆಂಗಳೂರು: ಶ್ರೇಯಾಂಕಿತರಾದ ಅಖಿಲ್‌ ಹೆಗಡೆ ಮತ್ತು ವರ್ಷಾ ಭಟ್‌ ಅವರು ಭಾನುವಾರ ಇಲ್ಲಿ ಮುಕ್ತಾಯಗೊಂಡ 9ನೇ ಹವ್ಯಕ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಓಪನ್ ವಿಭಾಗದ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು.

ಹವ್ಯಕ ಬ್ಯಾಡ್ಮಿಂಟ್‌ ಸಂಸ್ಥೆ ಆಶ್ರಯದಲ್ಲಿ ಅಂಜನಾಪುರದ ಸಿಲಿಕಾನ್‌ ಸಿಟಿ ಸ್ಪೋರ್ಟ್ಸ್‌ ಅಕಾಡೆಮಿಯಲ್ಲಿ ನಡೆದ ಎರಡು ದಿನಗಳ ಟೂರ್ನಿಯ ಫೈನಲ್‌ನಲ್ಲಿ ಅಖಿಲ್‌, ಸಾತ್ವಿಕ್‌ ಭಟ್‌ ಅವರನ್ನು ಸೋಲಿಸಿದರು. ಡಬಲ್ಸ್‌ನಲ್ಲಿ ಮುರಳಿ ಹೆಗಡೆ ಜೊತೆಗೂಡಿದ ಅಖಿಲ್‌, ಎದುರಾಳಿ ಪ್ರಜ್ವಲ್‌ ಜಿ.ಭಟ್‌– ಸಮಿತ್‌ ಹೆಗಡೆ ಜೋಡಿಯನ್ನು ಸೋಲಿಸಿ ಪ್ರಶಸ್ತಿ ಡಬಲ್ ಪೂರೈಸಿದರು. ಶ್ರೇಯಾಂಕರಹಿತ ‍ಪುರುಷರ  ಓಪನ್ ಸಿಂಗಲ್ಸ್‌ ಫೈನಲ್‌ನಲ್ಲಿ ಪ್ರಜ್ವಲ್‌ ಭಟ್‌, ದಿಗಂತ್‌ ಹೆಗಡೆ ಅವರನ್ನು ಸೋಲಿಸಿದರು.

ವರ್ಷಾ ಭಟ್‌, ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ ರಕ್ಷಾ ದಿನೇಶ್‌ ಹೆಗಡೆ ವಿರುದ್ಧ ಜಯಗಳಿಸಿದರು. ಮಹಿಳಾ ಡಬಲ್ಸ್‌ನಲ್ಲಿ ರಕ್ಷಾ ದಿನೇಶ್– ತ್ವಿಷಾ ಜೋಡಿ ಫೈನಲ್‌ನಲ್ಲಿ ಸುನೀತಾ ಮತ್ತು ವರ್ಷಾ ಭಟ್‌ ಜೋಡಿಯನ್ನು ಮಣಿಸಿತು.

ADVERTISEMENT

16 ವರ್ಷದೊಳಗಿನವರ ಬಾಲಕರ ಸಿಂಗಲ್ಸ್‌ನಲ್ಲಿ ದಿಗಂತ್‌ ಹೆಗಡೆ, ಅವಿಕ್‌ ವಿರುದ್ಧ, ಬಾಲಕಿಯರ ಸಿಂಗಲ್ಸ್‌ ಫೈನಲ್‌ನಲ್ಲಿ ತ್ವಿಷಾ ಹೆಗಡೆ, ಚಾರ್ವಿ ಗಣೇಶ್ ವಿರುದ್ಧ ಜಯಗಳಿಸಿ ಪ್ರಶಸ್ತಿ ವಿಜೇತರಾದರು. ಈ ವಯೋವರ್ಗದ ಮಿಶ್ರ ಡಬಲ್ಸ್‌ ಫೈನಲ್‌ನಲ್ಲಿ ತ್ವಿಷಾ– ದಿಗಂತ್‌ ಹೆಗಡೆ ಜೋಡಿ, ಸಚಿನ್‌ ಹೆಗಡೆ– ಮಾನ್ವಿ ಹೆಬ್ಬಾರ್ ಜೋಡಿಯನ್ನು ಸೋಲಿಸಿತು.

35 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಅಶ್ವಿನಿ ಕುಮಾರ್ ಭಟ್ ಫೈನಲ್‌ನಲ್ಲಿ ಸಂದೇಶ್ ಕುಮಾರ್‌ ಎಚ್‌.ಕೆ. ವಿರುದ್ಧ, ಇದೇ ವಯೋವರ್ಗದ ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಅಕ್ಷತಾ ಎಂ.ಕೆ., ಶಾಂತಾ ಹೆಗಡೆ ವಿರುದ್ಧ ಜಯಶಾಲಿಯಾದರು. 50 ವರ್ಷ ಮೇಲ್ಪಟ್ಟ ಪುರುಷರ ಸಿಂಗಲ್ಸ್‌ನಲ್ಲಿ ಮೋಹನ್ ಶ್ರೀನಿವಾಸ್‌ ಫೈನಲ್‌ನಲ್ಲಿ ಶ್ರೀರಂಗ ಆರ್‌.ಹೆಗಡೆ ವಿರುದ್ಧ, ಮಹಿಳೆಯರ ವಿಭಾಗದ ಸಿಂಗಲ್ಸ್ ಫೈನಲ್‌ನಲ್ಲಿ ಅನ್ನಪೂರ್ಣಾ ಭಟ್‌, ಶೋಭಾ ಜಿ.ಹೆಗಡೆ ವಿರುದ್ಧ ಗೆಲುವು ಪಡೆದರು.

60 ವರ್ಷ ಮೇಲ್ಪಟ್ಟವರ ಸಿಂಗಲ್ಸ್‌ ಫೈನಲ್‌ನಲ್ಲಿ ಗಂಗಾಧರ ಸಿ.ಹೆಗಡೆ, ರಾಘವೇಂದ್ರ ಎಂ.ಎಸ್‌. ಅವರನ್ನು ಸೋಲಿಸಿ ವಿಜೇತರಾದರು.

ಅಂತರರಾಷ್ಟ್ರೀಯ ಆಟಗಾರ ಅರವಿಂದ ಭಟ್‌ ಮತ್ತು ಲೆಕ್ಕ ಪರಿಶೋಧಕ ಪ್ರಕಾಶ ಹೆಗಡೆ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.