ADVERTISEMENT

ಕಣದಿಂದ ಹೊರಬಿದ್ದ ಪಿ.ವಿ.ಸಿಂಧು

ಆಲ್ ಇಂಗ್ಲೆಂಡ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಪ್ರಣೀತ್‌ಗೆ ಪ್ರಣಯ್‌ ಎದುರು ಗೆಲುವು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2019, 19:36 IST
Last Updated 6 ಮಾರ್ಚ್ 2019, 19:36 IST
ಸಂಗ್‌ ಜಿ ಹ್ಯೂನ್‌ ಎದುರಿನ ಪಂದ್ಯದಲ್ಲಿ ಪಿ.ವಿ.ಸಿಂಧು ಸ್ಮ್ಯಾಷ್‌ಗೆ ಸಜ್ಜಾದ ಕ್ಷಣ –ರಾಯಿಟರ್ಸ್ ಚಿತ್ರ
ಸಂಗ್‌ ಜಿ ಹ್ಯೂನ್‌ ಎದುರಿನ ಪಂದ್ಯದಲ್ಲಿ ಪಿ.ವಿ.ಸಿಂಧು ಸ್ಮ್ಯಾಷ್‌ಗೆ ಸಜ್ಜಾದ ಕ್ಷಣ –ರಾಯಿಟರ್ಸ್ ಚಿತ್ರ   

ಬರ್ಮಿಂಗ್‌ಹ್ಯಾಂ (ಪಿಟಿಐ): ಭರವಸೆಯಿಂದ ಕಣಕ್ಕೆ ಇಳಿದ ಭಾರತದ ಪಿ.ವಿ.ಸಿಂಧು ನಿರಾಸೆಗೆ ಒಳಗಾದರು. ಇಲ್ಲಿ ಬುಧವಾರ ಆರಂಭಗೊಂಡ ಆಲ್‌ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು.

ದಕ್ಷಿಣ ಕೊರಿಯಾದ ಸಂಗ್‌ ಜಿ ಹ್ಯೂನ್‌ ಎದುರಿನ ಪಂದ್ಯದಲ್ಲಿ ಸಿಂಧು 16-21 22-20 18-21ರಿಂದ ಪರಾಭವಗೊಂಡರು.

ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಬಿ.ಸಾಯಿ ಪ್ರಣೀತ್‌ ಭಾರತದವರೇ ಆದ ಎಚ್‌.ಎಸ್‌.ಪ್ರಣಯ್‌ ಎದುರು 21–19, 21–19ರಿಂದ ಗೆದ್ದು ಪ್ರೀ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದರು.

ADVERTISEMENT

ಸಿಂಧು ಅವರು ಸಂಗ್ ಎದುರಿನ ಇತ್ತೀಚಿನ ಮೂರು ಹಣಾಹಣಿಗಳಲ್ಲಿ ಎರಡನ್ನು ಗೆದ್ದಿದ್ದರು. ಆದರೆ ಬುಧವಾರ ಕೊರಿಯಾ ಆಟಗಾರ್ತಿ ಪ್ರಾಬಲ್ಯ ಮೆರೆದು 81 ನಿಮಿಷಗಳಲ್ಲಿ ಗೆಲುವು ತಮ್ಮದಾಗಿಸಿಕೊಂಡರು. ಚಾಂಪಿಯನ್‌ಷಿಪ್‌ನಲ್ಲಿ ಸಿಂಧು ಐದನೇ ಶ್ರೇಯಾಂಕ ಹೊಂದಿದ್ದರು.

ಮೊದಲ ಗೇಮ್‌ನಲ್ಲಿ ನೀರಸ ಆಟವಾಡಿದ ಸಿಂಧು ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಿದರು. ಎಂಟು ಮ್ಯಾಚ್ ಪಾಯಿಂಟ್‌ಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ಸಿಂಧು ಗೇಮ್ ಗೆದ್ದು ಭರವಸೆ ಮೂಡಿಸಿದರು. 17–20ರ ಹಿನ್ನಡೆಯಲ್ಲಿದ್ದಾಗ ಮೂರು ಮ್ಯಾಚ್ ಪಾಯಿಂಟ್‌ಗಳನ್ನು ಉಳಿಸಿಕೊಂಡ ಸಿಂಧು ಸಮಬಲ ಸಾಧಿಸಿದರು. ಹೀಗಾಗಿ ಗೇಮ್‌ ಟೈ ಬ್ರೇಕರ್‌ಗೆ ಸಾಗಿತು. ಈ ಹಂತದಲ್ಲಿ ಚಾಕಚಕ್ಯತೆ ಮೆರೆದು ಪಂದ್ಯ ಗೆದ್ದರು. ಆದರೆ ನಿರ್ಣಾಯಕ ಗೇಮ್‌ನಲ್ಲಿ ಎದುರಾಳಿ ಗೆದ್ದು ಸಂಭ್ರಮಿಸಿದರು.

ಈ ಹಿಂದೆ ಒಟ್ಟು 14 ಬಾರಿ ಈ ಇಬ್ಬರು ಆಟ ಗಾರ್ತಿಯರು ಮುಖಾಮುಖಿಯಾಗಿದ್ದು ಎಂಟು ಬಾರಿ ಸಿಂಧು ಗೆಲುವು ಸಾಧಿಸಿದ್ದರು. ಆದರೆ ಬುಧವಾರ ಅವರ ಸವಾಲನ್ನು ಸಮರ್ಥವಾಗಿ ಮೆಟ್ಟಿನಿಲ್ಲುವಲ್ಲಿ ಸಂಗ್‌ ಯಶಸ್ವಿಯಾದರು. ಕೋರ್ಟ್‌ನ ಮಧ್ಯದಲ್ಲಿ ಸ್ಮ್ಯಾಷ್‌
ಗಳನ್ನು ಸಿಡಿಸಲು ಪ್ರಯತ್ನಿಸಿದ ಸಿಂಧು ಫಲ ಕಾಣಲಿಲ್ಲ. ಸ್ಮ್ಯಾಷ್‌ಗಳನ್ನು ನೆಟ್ ಮೇಲೆ ಹಾಕಿ ಪಾಯಿಂಟ್‌ಗಳನ್ನು ಕಳೆದುಕೊಂಡರು.

ಮಹಿಳೆಯರ ಡಬಲ್ಸ್‌ನಲ್ಲಿ ತೀವ್ರ ಪೈಪೋಟಿ ನೀಡಿದ ಭಾರತದ ಮೇಘನಾ ಜಕ್ಕಂಪುಡಿ ಮತ್ತು ಪೂರ್ವಿಷಾ ರಾಮ್‌ ರಷ್ಯಾದ ಎಕತೆರಿನಾ ಬೊಲೊಟೊವ ಮತ್ತು ಅಲಿನಾ ದವೆಲ್ಟೊವ ಎದುರು 21–18, 12–21, 12–21ರಿಂದ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.