ADVERTISEMENT

ಆಲ್‌ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಸೆಮಿಗೆ ತ್ರಿಶಾ– ಗಾಯತ್ರಿ ಜೋಡಿ

ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯ

ಪಿಟಿಐ
Published 17 ಮಾರ್ಚ್ 2023, 22:24 IST
Last Updated 17 ಮಾರ್ಚ್ 2023, 22:24 IST
ಗಾಯತ್ರಿ ಗೋಪಿಚಂದ್‌ (ಎಡ) ಮತ್ತು ತ್ರಿಶಾ ಜೋಲಿ ಸಂಭ್ರಮ –ಎಸ್‌ಎಐ ಮೀಡಿಯಾ ಟ್ವಿಟರ್‌ ಚಿತ್ರ
ಗಾಯತ್ರಿ ಗೋಪಿಚಂದ್‌ (ಎಡ) ಮತ್ತು ತ್ರಿಶಾ ಜೋಲಿ ಸಂಭ್ರಮ –ಎಸ್‌ಎಐ ಮೀಡಿಯಾ ಟ್ವಿಟರ್‌ ಚಿತ್ರ   

ಬರ್ಮಿಂಗ್‌ಹ್ಯಾಂ: ಆಲ್‌ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಗೆಲುವಿನ ಓಟ ಮುಂದುವರಿಸಿರುವ ಭಾರತದ ತ್ರಿಶಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್‌ ಜೋಡಿ, ಮಹಿಳೆಯರ ಡಬಲ್ಸ್‌ ವಿಭಾಗದ ಸೆಮಿಫೈನಲ್‌ ಪ್ರವೇಶಿಸಿದೆ.

ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾರತದ ಜೋಡಿ 21–14, 18–21, 21–12ರಲ್ಲಿ ಚೀನಾದ ಲಿ ವೆನ್ ಮೀ ಮತ್ತು ಲಿಯು ಕ್ಸುವಾನ್ ಅವರನ್ನು ಮಣಿಸಿತು. ತ್ರಿಶಾ ಮತ್ತು ಗಾಯತ್ರಿ ಕಳೆದ ಬಾರಿಯೂ ಇಲ್ಲಿ ನಾಲ್ಕರಘಟ್ಟ ಪ್ರವೇಶಿಸಿದ್ದರು.

64 ನಿಮಿಷ ನಡೆದ ಹಣಾಹಣಿಯಲ್ಲಿ ಗಾಯತ್ರಿ ಅವರು ನೆಟ್‌ ಬಳಿ ಚುರುಕಿನ ಆಟವಾಡಿದರೆ, ತ್ರಿಷಾ ಅವರು ಕೋರ್ಟ್‌ನ ಹಿಂಭಾಗದಿಂದ ವೇಗದ ಸ್ಮ್ಯಾಷ್‌ಗಳು ಮತ್ತು ಡ್ರಾಪ್‌ ಶಾಟ್‌ಗಳ ಮೂಲಕ ಮಿಂಚಿದರು.

ADVERTISEMENT

ಮೊದಲ ಗೇಮ್‌ನ ಆರಂಭದಲ್ಲೇ ಭಾರತದ ಜೋಡಿ 6–2 ರಲ್ಲಿ ಮುನ್ನಡೆ ಗಳಿಸಿತು. ಚೀನಾದ ಆಟಗಾರ್ತಿಯರು ಮರುಹೋರಾಟ ನಡೆಸಿ 6–6 ರಲ್ಲಿ ಸಮಬಲ ಸಾಧಿಸಿದರು. ಆದರೂ ವಿರಾಮದ ವೇಳೆಗೆ ತ್ರಿಶಾ–ಗಾಯತ್ರಿ 11–8 ರಲ್ಲಿ ಮೇಲುಗೈ ಪಡೆದರು. ಆ ಬಳಿಕ ಆಕ್ರಮಣಕಾರಿ ಆಟದ ಮೂಲಕ 18–12ರಲ್ಲಿ ಮುನ್ನಡೆ ಪಡೆದರಲ್ಲದೆ, ಗೇಮ್‌ ತಮ್ಮದಾಗಿಸಿಕೊಂಡರು.

ಎರಡನೇ ಗೇಮ್‌ನ ಆರಂಭದಲ್ಲಿ ಭಾರತದ ಜೋಡಿ 5–1, 10–6 ರಲ್ಲಿ ಮುನ್ನಡೆ ಸಾಧಿಸಿದ್ದರೂ, ಆ ಬಳಿಕ ಚೀನಾ ಜೋಡಿ ಮರುಹೋರಾಟ ನಡೆಸಿತು. ಹೊಂದಾಣಿಕೆಯ ಆಟವಾಡಿ ಗೇಮ್‌ ಜಯಿಸಿ ಪಂದ್ಯವನ್ನು ಮೂರನೇ ಗೇಮ್‌ಗೆ ಕೊಂಡೊಯ್ದಿತು.

ನಿರ್ಣಾಯಕ ಗೇಮ್‌ನಲ್ಲಿ ಮತ್ತೆ ಲಯ ಕಂಡುಕೊಂಡ ಭಾರತದ ಜೋಡಿ ಸತತ ಆರು ಪಾಯಿಂಟ್ಸ್‌ ಸಂಗ್ರಹಿಸಿ 8–1 ರಲ್ಲಿ ಮುನ್ನಡೆ ಪಡೆಯಿತು. ನಂತರ ಒತ್ತಡಕ್ಕೆ ಒಳಗಾಗದೆ 15–5, 15–8ರಲ್ಲಿ ಮೇಲುಗೈ ಕಾಪಾಡಿಕೊಂಡು ಗೇಮ್‌ ಜಯಿಸಿ ಸೆಮಿಯತ್ತ ಹೆಜ್ಜೆಯಿಟ್ಟಿತು.

ಸಿಂಗಲ್ಸ್‌ನಲ್ಲಿ ಸವಾಲು ಅಂತ್ಯ: ಚಾಂಪಿಯನ್‌ಷಿಪ್‌ನ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಸವಾಲಿಗೆ ತೆರೆಬಿತ್ತು. ಎಚ್‌.ಎಸ್‌.ಪ್ರಣಯ್‌ ಮತ್ತು ಕಿದಂಬಿ ಶ್ರೀಕಾಂತ್ ಅವರು ಗುರುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ 16ರ ಘಟ್ಟದ ಪಂದ್ಯದಲ್ಲಿ ಪರಾಭವಗೊಂಡರು.

ಶ್ರೀಕಾಂತ್‌ ಅವರು 17–21, 15–21 ರಲ್ಲಿ ಏಳನೇ ಶ್ರೇಯಾಂಕದ ಆಟಗಾರ ಜಪಾನ್‌ನ ಕೊದೈ ನರವೊಕಾ ಎದುರು ಸೋತರು. ಈ ಪಂದ್ಯ 51 ನಿಮಿಷ ನಡೆಯಿತು.

ಪ್ರಣಯ್‌ 20–22, 21–15, 17–21 ರಲ್ಲಿ ಇಂಡೊನೇಷ್ಯಾದ ಆಂಥೋನಿ ಸಿನಿಸುಕ ಗಿಂಟಿಂಗ್‌ ಎದುರು ಸೋತರು. ಒಂದು ಗಂಟೆ ಎಂಟು ನಿಮಿಷ ನಡೆದ ಹೋರಾಟದಲ್ಲಿ ಪ್ರಣಯ್‌ ಎದುರಾಳಿಗೆ ಪ್ರಬಲ ಪೈಪೋಟಿ ಒಡ್ಡಿದರು. ಮೊದಲ ಗೇಮ್‌ ಸೋತರೂ ಎರಡನೇ ಗೇಮ್ ಗೆದ್ದು ಸಮಬಲ ಸಾಧಿಸಿದರು. ನಿರ್ಣಾಯಕ ಗೇಮ್‌ನಲ್ಲಿ ಒತ್ತಡಕ್ಕೆ ಒಳಗಾಗಿ ಪಂದ್ಯ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.