ADVERTISEMENT

ಫೆ. 21ರಿಂದ ಅಖಿಲ ಭಾರತ ಬಾಲ್‌ಬ್ಯಾಡ್ಮಿಂಟನ್

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2025, 6:47 IST
Last Updated 19 ಫೆಬ್ರುವರಿ 2025, 6:47 IST
<div class="paragraphs"><p>ಬೆಂಗಳೂರಿನ ಮೇರಿ ಗೊ ರೌಂಡ್ ಬ್ಯಾಡ್ಮಿಂಟನ್ ಕ್ಲಬ್‌ ಸುವರ್ಣ ಮಹೋತ್ಸವದ ಅಂಗವಾಗಿ ನಡೆಸಲಾಗುವ ಅಖಿಲ ಭಾರತ ಬಾಲ್‌ ಬ್ಯಾಡ್ಮಿಂಟನ್ ಟೂರ್ನಿಯ ಆಟಗಾರರ ಜೆರ್ಸಿ ಮತ್ತು ಕ್ಯಾಪ್‌ಗಳನ್ನು ಮಂಗಳವಾರ ಅನಾವರಣ ಮಾಡಲಾಯಿತು</p></div>

ಬೆಂಗಳೂರಿನ ಮೇರಿ ಗೊ ರೌಂಡ್ ಬ್ಯಾಡ್ಮಿಂಟನ್ ಕ್ಲಬ್‌ ಸುವರ್ಣ ಮಹೋತ್ಸವದ ಅಂಗವಾಗಿ ನಡೆಸಲಾಗುವ ಅಖಿಲ ಭಾರತ ಬಾಲ್‌ ಬ್ಯಾಡ್ಮಿಂಟನ್ ಟೂರ್ನಿಯ ಆಟಗಾರರ ಜೆರ್ಸಿ ಮತ್ತು ಕ್ಯಾಪ್‌ಗಳನ್ನು ಮಂಗಳವಾರ ಅನಾವರಣ ಮಾಡಲಾಯಿತು

   

ಬೆಂಗಳೂರು: ರಾಷ್ಟ್ರಕ್ಕೆ ಹಲವು ಖ್ಯಾತನಾಮ ಬಾಲ್‌ ಬ್ಯಾಡ್ಮಿಂಟನ್ ಆಟಗಾರರನ್ನು ಕೊಡುಗೆ ನೀಡಿದ ಮೆರಿ ಗೊ ರೌಂಡ್ ಬ್ಯಾಡ್ಮಿಂಟನ್ ಕ್ಲಬ್‌ಗೆ ಈಗ ಸುವರ್ಣ ಸಂಭ್ರಮ. 

1968–69ರಲ್ಲಿ ಈ ಕ್ಲಬ್ ಆರಂಭವಾದಾಗ ಬಾಲ್‌ ಬ್ಯಾಡ್ಮಿಂಟನ್ ಅತ್ಯಂತ ಜನಪ್ರಿಯ ಆಟವಾಗಿತ್ತು. ಗಲ್ಲಿಗಲ್ಲಿಗಳಲ್ಲಿ ಮಕ್ಕಳು, ಯುವಜನತೆಯ ಅಚ್ಚುಮೆಚ್ಚಿನ ಹವ್ಯಾಸವಾಗಿತ್ತು. ಹಲವಾರು ಕ್ಲಬ್‌ಗಳು ಮತ್ತು ಶಾಲೆಗಳಲ್ಲಿ ತಂಡಗಳು ಇದ್ದವು. ಆದರೆ ಕ್ರಮೇಣ ಈ ಕ್ರೀಡೆಯ ಜನಪ್ರಿಯತೆ ಕುಂಠಿತವಾಗಿದೆ. ಅದಕ್ಕೆ ಹಲವು ಕಾರಣಗಳಿವೆ. ಇದೀಗ ಮೆರಿ ಗೊ ರೌಂಡ್ ಕ್ಲಬ್‌ ಬಳಗವು ಬಾಲ್‌ ಬ್ಯಾಡ್ಮಿಂಟನ್ ಕ್ರೀಡೆಯ ಚಿನ್ನದ ದಿನಗಳನ್ನು ಮರಳಿ ತರುವ ಗುರಿಯೊಂದಿಗೆ ಸುವರ್ಣ ಸಂಭ್ರಮ ಆಚರಿಸುವತ್ತ ಹೆಜ್ಜೆ ಇಟ್ಟಿದೆ. 

ADVERTISEMENT

ಅದಕ್ಕಾಗಿ ಇದೇ 21 ರಿಂದ 23ರವರೆಗೆ ಅಖಿಲ ಭಾರತ ಗೋಲ್ಡ್‌ ಮೆಡಲ್ ಬಾಲ್‌ ಬ್ಯಾಡ್ಮಿಂಟನ್ ಟೂರ್ನಿ ಯನ್ನು ಹಮ್ಮಿಕೊಂಡಿದೆ. ಬೇರೆ ಬೇರೆ ರಾಜ್ಯಗಳ ತಂಡಗಳು ಸ್ಪರ್ಧಿಸಲಿವೆ. 

‘ಸುವರ್ಣ ಮಹೋತ್ಸವವನ್ನು ಕೋವಿಡ್ ಕಾರಣದಿಂದ ಮುಂದೂ ಡಲಾಗಿತ್ತು.  ಇದೀಗ ಚಿನ್ನದ ಮಹೋತ್ಸವದ ಅಂಗವಾಗಿ ಟೂರ್ನಿಯನ್ನೂ ಆಯೋಜಿಸುತ್ತಿದ್ದೇವೆ. ಇದರಲ್ಲಿ ಪುರುಷರ 20 ಮತ್ತು ಮಹಿಳೆಯರ 9 ತಂಡಗಳು ಭಾಗವಹಿಸಲಿವೆ. ಇದರೊಂದಿಗೆ ನಶಿಸಿ ಹೋಗುತ್ತಿರುವ ಬಾಲ್‌ ಬ್ಯಾಡ್ಮಿಂಟನ್ ಕ್ರೀಡೆಗೆ ಮರುಜೀವ ತುಂಬಲು ಚಾಲನೆ ನೀಡಲಾಗುತ್ತಿದೆ’ ಎಂದು ಕ್ಲಬ್ ಅಧ್ಯಕ್ಷ ಕೆ.ಬಿ. ಅರಸಪ್ಪ ಅವರು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು. 

‘ಈ ಕ್ರೀಡೆಗೆ 168 ವರ್ಷಗಳ ಇತಿಹಾಸವಿದೆ. ಭಾರತದಲ್ಲಿಯೂ ಇದು ಗ್ರಾಮೀಣ ಮಟ್ಟದಿಂದ ನಗರದವರೆಗೂ ಅಪಾರ ಜನಪ್ರಿಯ ಆಟವಾಗಿತ್ತು. ಬ್ಯಾಡ್ಮಿಂಟನ್ ಆಟ ಗಾರರಿಗೆ ಕ್ರೀಡಾ ಕೋಟಾದಲ್ಲಿ ಸರ್ಕಾರಿ ಉದ್ಯೋಗಗಳು ಲಭಿಸುತ್ತಿದ್ದವು. ಈಗ ಉದ್ಯೋ ಗದಾತರು ಕಡಿಮೆಯಾಗಿದ್ದಾರೆ. ಕೆನರಾ ಬ್ಯಾಂಕಿನಲ್ಲಿ ಸದ್ಯ ಒಂದು ತಂಡವಿದೆ. ರೈಲ್ವೆ ಇಲಾಖೆಯಲ್ಲಿ ಉದ್ಯೋಗ ದೊರೆಯುತ್ತಿವೆ. ಬಿಟ್ಟರೆ ಬೇರೆ ಕಡೆ ಪ್ರೋತ್ಸಾಹವಿಲ್ಲ. ಇದು ಬಾಲ್‌ ಬ್ಯಾಡ್ಮಿಂಟನ್ ಸೊರಗಲು ಪ್ರಮುಖ ಕಾರಣ. ಅಲ್ಲದೇ ಕ್ರಿಕೆಟ್‌ ಆಕರ್ಷಣೆಯೂ ಹೆಚ್ಚಾಗಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದಲೂ ಯಾವುದೇ ಸಹಾಯ ಲಭಿಸುತ್ತಿಲ್ಲ’ ಎಂದು ಸಂಘಟನಾ ಕಾರ್ಯದರ್ಶಿ ಜಿ. ಶ್ರೀನಿವಾಸ್ ಈ ಸಂದರ್ಭದಲ್ಲಿ ಹೇಳಿದರು. 

ಜೆ.ಪಿ ನಗರ 7ನೇ ಹಂತದ ಆರ್.ಬಿ.ಐ.ಬಡಾವಣೆ ಕ್ರೀಡಾಂಗಣದಲ್ಲಿ ಟೂರ್ನಿ ನಡೆಯಲಿದೆ. ಕರ್ನಾಟಕ, ತಮಿಳುನಾಡು ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳ ತಂಡಗಳು ಇಲ್ಲಿ ಸ್ಪರ್ಧಿಸಲಿವೆ. 

‘ಇದೇ ಮೊದಲ ಬಾರಿಗೆ ಮೊದಲ ನಾಲ್ಕು ಸ್ಥಾನಗಳಿಗೂ ಚಿನ್ನದ ಪದಕಗಳನ್ನು ನೀಡಲಾಗುವುದು. ತಂಡಗಳನ್ನು 4 ಗುಂಪುಗಳಲ್ಲಿ ವಿಂಗಡಿಸಲಾಗುವುದು. ಲೀಗ್ ಮತ್ತು ನಾಕೌಟ್ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಫ್ಲಡ್‌ಲೈಟ್ ವ್ಯವಸ್ಥೆ ಮಾಡಲಾಗಿದೆ’ ಎಂದು ಕಾರ್ಯದರ್ಶಿ ಎನ್. ಮಂಜುನಾಥ್ ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಕ್ಲಬ್ ಉಪಾಧ್ಯಕ್ಷ ವೆಂಕಟೇಶ್ ಶೆಟ್ಟಿ, ಎಂ.ಉದಯಸಿಂಹ, ಜಗದೀಶ್, ಸುಂದರ್ ರಾಜ್ ಹಾಗೂ ನಾಗೇಶ್ ಬಾಬು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.