ADVERTISEMENT

ಯುವಪ್ರತಿಭೆ ಅನಾಹತ್ ಸಿಂಗ್‌ಗೆ ಸ್ಕಾಟಿಷ್ ಓಪನ್ ಸ್ಕ್ವಾಷ್ ಪ್ರಶಸ್ತಿ

ಪಿಟಿಐ
Published 31 ಡಿಸೆಂಬರ್ 2023, 14:12 IST
Last Updated 31 ಡಿಸೆಂಬರ್ 2023, 14:12 IST
ಅನಾಹತ್ ಸಿಂಗ್
ಅನಾಹತ್ ಸಿಂಗ್    

ನವದೆಹಲಿ: ಭಾರತದ ಯುವಪ್ರತಿಭೆ ಅನಾಹತ್ ಸಿಂಗ್,  19 ವರ್ಷದೊಳಗಿನವರ ಬಾಲಕಿಯರ ಸ್ಕಾಟಿಷ್ ಜೂನಿಯರ್ ಓಪನ್ ಸ್ಕ್ವಾಷ್‌ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಎಡಿನ್‌ಬರ್ಗ್‌ನಲ್ಲಿ ಶನಿವಾರ ನಡೆದ ಟೂರ್ನಿಯ ಫೈನಲ್‌ನಲ್ಲಿ ಅನಾಹತ್ 11–6, 11–1, 11–5ರಿಂದ ಸ್ಥಳೀಯ ಪ್ರತಿಭೆ ರೊಬೈನ್ ಮೆಕಅಲ್ಪಾಯಿನ್  ಅವರನ್ನು ಮಣಿಸಿದರು. 

ದೆಹಲಿಯ ಅನಾಹತ್ ಅವರಿಗೆ ಇದು ಸಾಧನೆಗಳ ವರ್ಷವಾಗಿದೆ. 19 ವರ್ಷದೊಳಗಿನವರ ರಾಷ್ಟ್ರೀಯ ಚಾಂಪಿಯನ್‌ಷಿಪ್ ಡಬಲ್ ಸಾಧನೆ ಮಾಡಿದರು. ಚೀನಾದ ಹಾಂಗ್‌ಝೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ತಂಡ ಮತ್ತು ಮಿಶ್ರ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕಗಳನ್ನು ಜಯಿಸಿದ ಸಾಧನೆ ಅವರದ್ದಾಗಿದೆ. ಮಿಶ್ರ ಡಬಲ್ಸ್‌ನಲ್ಲಿ ಅವರು ಅಭಯಸಿಂಗ್ ಅವರೊಂದಿಗೆ ಪದಕ ಸಾಧನೆ ಮಾಡಿದ್ದರು.

ADVERTISEMENT

15 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಭಾರತದ ಸುಭಾಷ್ ಚೌಧರಿ 5-11, 11-4, 6-11, 11-8, 11-5ರಿಂದ ಭಾರತದವರೇ ಆದ ಶಿವೇನ್ ಅಗರವಾಲ್ ಅವರನ್ನು ಮಣಿಸಿದರು.

13 ವರ್ಷದೊಳಗಿನ ಬಾಲಕರ ಫೈನಲ್‌ನಲ್ಲಿ ಶ್ರೇಷ್ಠ ಅಯ್ಯರ್ 11-8, 11-8, 3-11, 11-8ರಿಂದ ಶ್ರೇಯಾಂಶ್ ಝಾ ವಿರುದ್ಧ ಗೆದ್ದರು.

11ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪ್ರಭವ್ ಬಜೋರಿಯಾ 5-11, 9-11, 11-5, 11-8, 11-6ರಿಂದ ಎರಡನೇ ಶ್ರೇಯಾಂಕದ ಆದಿತ್ಯ ಶಾ ವಿರುದ್ಧ ಜಯಭೇರಿ ಬಾರಿಸಿದರು.

ಬಾಲಕಿಯರ 13 ವರ್ಷದೊಳಗಿನವರ ಫೈನಲ್‌ನಲ್ಲಿ ಭಾರತದ ಅಗ್ರಶ್ರೇಯಾಂಕದ ಆಟಗಾರ್ತಿ ಆದ್ಯಾ ಬುಧಿಯಾ 9-11, 11-8, 8-11, 11-8, 11-9ರಿಂದ ಮಲೇಷ್ಯಾದ ನೀಯಾ ಚಿವ್ ವಿರುದ್ಧ ಜಯಿಸಿದರು. 

11 ವರ್ಷದ ಬಾಲಕಿಯರ ವಿಭಾಗದಲ್ಲಿ ದಿವ್ಯಾಂಶಿ ಜೈನ್ ರನ್ನರ್ ಅಪ್ ಆದರು.

ಟೂರ್ನಿಯಲ್ಲಿ 30 ದೇಶಗಳ 200 ಆಟಗಾರರು ಸ್ಪರ್ಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.